More

    ಮಾನಸಿಕ ಕಾಯಿಲೆಗೆ ಧ್ಯಾನವೇ ಲಸಿಕೆ

    ಬೆಳಗಾವಿ: ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕ ಜನ ಖಿನ್ನತೆ, ಒತ್ತಡದಿಂದ ಬಳಲುತ್ತಿದ್ದಾರೆ. ಧ್ಯಾನದಿಂದ ಖಿನ್ನತೆ ಮತ್ತು ಉದ್ವಿಗ್ನತೆ ನಿಯಂತ್ರಿಸಲು ಸಾಧ್ಯ. ಮಾನಸಿಕ ಕಾಯಿಲೆಗೆ ಧ್ಯಾನವೇ ಅತ್ಯುತ್ತಮ ಲಸಿಕೆ ಎಂದು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಹೇಳಿದರು.

    ನಗರದ ಸಿಪಿಇಡಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಆನಂದೋತ್ಸವದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಪ್ರಸನ್ನತೆ ಬಹಳ ಮಹತ್ವದ್ದು, ಉಳಿದ ಆಗುಹೋಗುಗಳು ಇದ್ದೇ ಇರುತ್ತವೆ. ಖಿನ್ನತೆ ಮತ್ತು ಉದ್ವಿಗ್ನತೆಯಂಥ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಧ್ಯಾನ ಮತ್ತು ಒಳ್ಳೆಯ ಆಹಾರಕ್ಕೆ ಮೊರೆಹೋಗುವಂತೆ ಸೂಚಿಸಿದರು.

    ಇಂದು ಪ್ರತಿ ಮನೆ ಮನಗಳಲ್ಲಿ ಅನೇಕ ಕ್ಲೇಷಗಳಿವೆ. ಹೀಗಾಗಿಯೇ ಇಂಗ್ಲೆಂಡಿನಲ್ಲಿ ಒಂಟಿತನ ಅನುಭವಿಸುವವರಿಗಾಗಿ ಏಕಾಂತದ ಸಚಿವಾಲಯವನ್ನೇ ತೆರಯಲಾಗಿದೆ. ಜೀವನದಲ್ಲಿ ಆರೋಗ್ಯ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಸಹಜತೆ ಹಾಗೂ ಸರಳತೆ ಇರಬೇಕು. ಎಲ್ಲರೂ ಅದೇ ಚೈತನ್ಯ ಸಾಗರದಲ್ಲಿದ್ದೇವೆ.

    ಮುಖದಲ್ಲಿ ನಗು, ಮನಸ್ಸಲ್ಲಿ ವಿಶ್ವಾಸ ಇರಲಿ. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ದಾರಿದೀಪ ಆಗಿರಬೇಕು ಎಂದು ಹೇಳಿದರು. ಅಂಧಕಾರ ಹೋಗಲಾಡಿಸುವುದೇ ಮಾನವ ಧರ್ಮ. ರೈತ ನೇಗಿಲಿನಿಂದ ಉಳುಮೆ ಮಾಡಿ, ಬೀಜ ಬಿತ್ತಿದಾಗಲೇ ಭೂಮಿ ಬೆಳೆಯ ಫಸಲು ನೀಡುತ್ತದೆ. ಹಾಗೆಯೇ ಮಂತ್ರಘೋಷಗಳ ಪ್ರಸನ್ನತೆಯಿಂದ ಆನಂದದ ಬೀಜ ಬಿತ್ತಬೇಕು ಅಂದಾಗ ಮಾತ್ರ ನೆಮ್ಮದಿಯ ಜಗತ್ತು ಸೃಷ್ಟಿಯಾಗುತ್ತದೆ.

    ಜಗತ್ತಿನ ಅಂಧಕಾರವನ್ನು ಬೆಳಕಿನಿಂದ ಹೋಗಲಾಡಿಸುವುದೇ ಮಾನವ ಧರ್ಮ. ಧ್ಯಾನದಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ. ಯಾರಾದರೂ, ನಮ್ಮ ಬಳಿ ಬಂದು ಕೆಲ ಸಮಯ ಕಳೆದಾಗ ಅವರ ಬದುಕಿನ ಚಿಂತೆ ಮರೆತು ಆಹ್ಲಾದತೆ ಅನುಭವಿಸುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

    ಮಂತ್ರಪಠಣ ಎಂದರೆ ಆಕಾಶದಲ್ಲಿ ಆನಂದದ ಬೀಜಗಳನ್ನು ಬಿತ್ತಿದಂತೆ. ಈ ಬೀಜದಂತೆ ಆನಂದ ಬರುತ್ತದೆ. ಭೂಮಿಯಲ್ಲಿ ಬೀಜ ಬಿತ್ತಿದರೆ ಆಹಾರ ಉತ್ಪನ್ನ ಆಗುವಂತೆ. ಆಕಾಶದಲ್ಲಿ ಮಂತ್ರವನ್ನು ಬಿತ್ತಿದರೆ ಆನಂದ ಉತ್ಪತ್ತಿಯಾಗುತ್ತದೆ. ಪ್ರಪಂಚ ಪಂಚ ತತ್ತ್ವಗಳಿಂದ ರೂಪುಗೊಂಡಿದೆ. ಶಿವ ಬೇರೆಲ್ಲೂ ಇಲ್ಲ. ನಮ್ಮೊಳಗೆ ಇದ್ದಾನೆ. ಪ್ರತಿಯೊಬ್ಬರಲ್ಲೂ ಇದ್ದಾನೆ. ಶಿವನನ್ನು ಸತ್ಕರಿಸುವುದನ್ನೇ ಪೂಜೆ ಎನ್ನುತ್ತೇವೆ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.

    ಶರೀರ ನಶ್ವರ, ಮನಸ್ಸೇ ಶಾಶ್ವತ: ಪ್ರಪಂಚ ಒಂದೇ ಶಕ್ತಿಯಿಂದ ನಡೆಯುತ್ತದೆ. ನಾವೆಲ್ಲರೂ ಒಂದೇ ಆಗಿದ್ದು, ಯಾರ ಮನಸ್ಸಿಗೂ ಮುಖ ಇಲ್ಲ. ಕೇವಲ ಶರೀರಕ್ಕೆ ಮಾತ್ರ ಮುಖವಿದೆ. ಆದರೆ, ಶರೀರ ನಶ್ವರವಾದದ್ದು ಮನಸ್ಸೇ ಶಾಶ್ವತವಾದದ್ದು, ಇಡೀ ಪ್ರಪಂಚ ಶಿವನಿಂದ ತುಂಬಿದೆ ಎಂದರು.

    ಆನಂದೋತ್ಸವ ಆರಂಭದಲ್ಲಿ ರವಿಶಂಕರ ಗುರೂಜಿ ಅವರು ರುದ್ರಪೂಜೆ, ಮಹಾರುದ್ರಾಭಿಷೇಕ ಪೂಜೆ ನೆರವೇರಿಸಿದರು. ಮೈದಾನದಲ್ಲಿ ರಾತ್ರಿ ಪ್ರಶಾಂತ ವಾತಾವರಣದಲ್ಲಿ ಸುದೀರ್ಘ ಧ್ಯಾನದ ಜತೆಗೆ ಓಂಕಾರ ಮೊಳಗಿತು. ಅದಕ್ಕೂ ಮುನ್ನ ಇನ್ಟ್ಯೂಷನ್ ಪ್ರಾಸೆಸ್ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿ, ನೋಡುಗರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts