More

    ಮಾದಕ ವ್ಯಸನಕ್ಕೆ ಜಾರದಿರಿ  -ಎಸ್ಪಿ ಉಮಾ ಪ್ರಶಾಂತ್ ಹೇಳಿಕೆ -ಡ್ರಗ್ಸ್ ವಿರೋಧಿ ಜಾಗೃತಿ ಜಾಥಾ 

    ದಾವಣಗೆರೆ: ಮಾದಕ ದ್ರವ್ಯ ವ್ಯಸನದಿಂದ ಶೈಕ್ಷಣಿಕ ವ್ಯವಸ್ಥೆ ಹಾಗೂ ಜೀವನ ಹಾಳಾಗಲಿದೆ. ಯುವಜನರು ಇದರಿಂದ ದೂರವಿರಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
    ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕಾಲೇಜು ವಿದ್ಯಾರ್ಥಿಗಳು ಗಾಂಜಾ, ಹೆರಾಯಿನ್ ಮೊದಲಾದ ಮಾದಕ ದ್ರವ್ಯ ಸೇವಿಸುತ್ತಿದ್ದಾರೆ. ತಮಾಷೆ, ಖುಷಿ ಅಥವಾ ಕುತೂಹಲಕ್ಕೆ ಒಮ್ಮೆ ಈ ವ್ಯಸನಕ್ಕೆ ಅಂಟಿಕೊಂಡರೆ ನಿಮ್ಮನ್ನು ಆವರಿಸಿಕೊಳ್ಳಲಿದೆ. ಮಾನಸಿಕ ಹಾಗೂ ಭಾವನಾತ್ಮಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.
    ಮಾದಕ ವ್ಯಸನದಲ್ಲಿ ಬಿದ್ದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದರೆ ಅವರ ಭವಿಷ್ಯವೇ ಹಾಳಾಗಲಿದೆ. ಈ ಕಾರಣಕ್ಕೆ ಕೇಸ್ ಹಾಕುತ್ತಿಲ್ಲ. ಆದರೆ ಯುವಜನರು ಇದರ ಬೆನ್ನು ಬೀಳದೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
    ಈ ವ್ಯಸನಕ್ಕೆ ಒಳಗಾದ ಮಕ್ಕಳ ವರ್ತನೆ ಬದಲಾಗುತ್ತದೆ. ಅಂಥವರ ಬಗ್ಗೆ ಕಾಲೇಜು ಉಪನ್ಯಾಸಕರು ಎಚ್ಚರ ವಹಿಸಬೇಕು. ಎಲ್ಲಿಯೇ ಮಾದಕ ದ್ರವ್ಯ ಸಾಗಣೆ ಕಂಡುಬಂದಲ್ಲಿ ಪೊಲೀಸರಿಗೆ ಅಥವಾ 112 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
    ಗುಂಡಿ ಮಹದೇವಪ್ಪ ವೃತ್ತದಲ್ಲಿ ಎಸ್ಪಿ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಜಾಥಾ, ಚಿಗಟೇರಿ ಆಸ್ಪತ್ರೆ ರಸ್ತೆ. ವಿದ್ಯಾರ್ಥಿಭವನ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಯದೇವ ವೃತ್ತ ತಲುಪಿ ಅಂತ್ಯಗೊಂಡಿತು. ಮಾದಕ ದ್ರವ್ಯ ಸೇವಿಸಿ ಹಾಳಾಗಬೇಡಿ, ಕುಟುಂಬದ ಮರ್ಯಾದೆ ತೆಗೀಬೇಡಿ, ಬೇಡ ಗಾಂಜಾ ಚರಸ್, ಬದುಕಿಗೆ ಹೇಳಿ ಚಿಯರ್ಸ್.. ಮೊದಲಾದ ಬರಹಗಳುಳ್ಳ ಫಲಕಗಳು ಜಾಥಾದಲ್ಲಿ ಕಂಡುಬಂದವು.
    ಜಾಥಾದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿಗಳಾದ ಬಿ.ಎಸ್. ಬಸವರಾಜ, ಮಲ್ಲೇಶ್ ದೊಡ್ಮನಿ, ಪಿ.ಬಿ. ಪ್ರಕಾಶ್, ಪ್ರಾಚಾರ್ಯ ಪಂಚಾಕ್ಷರಪ್ಪ, ಸೀತಮ್ಮ ಪಪೂ ಕಾಲೇಜು, ಮೋತಿ ವೀರಪ್ಪ ಕಾಲೇಜು, ಆನಂದ ಅಕಾಡೆಮಿ, ವಿಶ್ವಚೇತನ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts