More

    ಮಾತೃಭಾಷೆ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ


    ಚಿತ್ರದುರ್ಗ: ದೇಶದೊಳಗೆ ಇಂಗ್ಲಿಷ್ ನೆಲೆಯೂರಲು ಪಾಶ್ಚಿಮಾತ್ಯರ ದಾಳಿ ಕಾರಣವಾಯ್ತು. ಅದರ ವ್ಯಾಮೋಹ ಹೆಚ್ಚಾದಂತೆ ಕನ್ನಡದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಮಾತೃಭಾಷೆ ಪ್ರೀತಿಸಿ, ಗೌರವಿಸಿದರೆ ತನ್ನಿಂತಾನೇ ಬೆಳೆಯಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.

    ಐತಿಹಾಸಿಕ ಚಂದ್ರವಳ್ಳಿಯ ಹುಲೇಗೊಂದಿ ಸಿದ್ದೇಶ್ವರ ಸ್ವಾಮಿ ಸನ್ನಿಧಿ ಆವರಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಆಚರಣೆ, ಮಯೂರ ವರ್ಮನ ಶಾಸನ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಶಾಸನಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.

    ಪ್ರಸ್ತುತ ದಿನಗಳಲ್ಲಿ ಬಹತೇಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದು, ಇದಕ್ಕೆ ಮುಂದಿನ ಭವಿಷ್ಯ, ಉದ್ಯೋಗದ ಅನಿವಾರ್ಯತೆಯೂ ಒಂದು ರೀತಿಯಲ್ಲಿ ಕಾರಣವಾಗಿದೆ. ಆದರೆ, ಮಾತೃಭಾಷೆಯಾದ ಕನ್ನಡ ಮಾತ್ರ ಎಂದಿಗೂ ಮರೆಯಬೇಡಿ. ಅದೇ ನಮ್ಮೆಲ್ಲರ ಉಸಿರಾಗಬೇಕು, ನಾಡಿನ ಹಸಿರಾಗಬೇಕು. ಆ ನಿಟ್ಟಿನಲ್ಲಿ ಚಿಂತನೆ ಅಗತ್ಯವಿದೆ. ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಲ್ಲ, 365 ದಿನವೂ ನಡೆಯಬೇಕು ಎಂದು ಆಶಿಸಿದರು.

    ಆಧುನಿಕ ಐಟಿ, ಬಿಟಿ, ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ ಇತಿಹಾಸ ಮರೆಯಾಗುತ್ತಿದೆ. ಇದಕ್ಕೆ ಆಸ್ಪದ ನೀಡಬೇಡಿ. ಅದನ್ನು ಸರಿಯಾಗಿ ಅರಿತವನು ಮಾತ್ರ ಇತಿಹಾಸ ಸೃಷ್ಟಿಸಬಲ್ಲ ಎಂಬ ಮಾತು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.

    ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಚಂದ್ರವಳ್ಳಿಯಲ್ಲಿ ದೊರೆತ ಪ್ರಥಮ ಶಾಸನ ಕದಂಬ ಸಾಮ್ರಾಜ್ಯ, ಕನ್ನಡದ ಅರಸರ ಆಡಳಿತ ಆರಂಭಿಸಿರುವ ಕುರಿತು ಮಾಹಿತಿ ನೀಡುತ್ತದೆ. ಮೂಲತಃ ಸಂಸ್ಕೃತದಲ್ಲಿದ್ದು, ಅನೇಕ ವಿದ್ವಾಂಸರು ವಿವಿಧ ರೀತಿಯಲ್ಲಿ ವಾಖ್ಯಾನ ಮಾಡಿದ್ದಾರೆ ಎಂದರು.

    ಮಯೂರ ಶರ್ಮಾ ಉತ್ತಮ ಸೈನ್ಯ ಕಟ್ಟಿ, ಪಲ್ಲವರ ವಿರುದ್ಧ ದಾಳಿ ಮಾಡಿ, ರಾಜ್ಯದ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ. ಇದರಿಂದ ವಿಚಲಿತರಾದ ಪಲ್ಲವರು ಗೆಳೆಯನನ್ನಾಗಿ ಸ್ವೀಕರಿಸಿ, ರಾಜನಾಗಿ ಪಟ್ಟಾಧಿಕಾರ ನೀಡಿದರು. ಈ ಮೂಲಕ ಮಯೂರು ವರ್ಮನಾದುದು ಇತಿಹಾಸ. ಅರಸರ ಆಡಳಿತ ಭಾಷೆಯೇ ಹೆಚ್ಚಾಗಿ ಪ್ರಾತಿನಿಧ್ಯ ಪಡೆಯುತ್ತದೆ. ಹೀಗಾಗಿ ಕದಂಬರ ಆಳ್ವಿಕೆ ನಂತರದಿಂದ ಕನ್ನಡ ಭಾಷೆಗೆ ನವಚೈತನ್ಯ ಲಭಿಸಿತು. ಕಲೆ, ಸಂಸ್ಕೃತಿ, ಸಾಹಿತ್ಯ ಬೆಳೆಯಲು ಕಾರಣವಾಯಿತು ಎಂದರು.

    ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗಕ್ಕೆ ಮಯೂರ ವರ್ಮನ ಕೊಡುಗೆ ಆಪಾರ. ಕೋಟೆನಾಡಿನ ಇತಿಹಾಸ ವ್ಯಾಪಕವಾಗಿದ್ದು, ತಿಳಿದುಕೊಳ್ಳುವ ಅಂಶ ಸಾಕಷ್ಟಿದೆ ಎಂದು ಹೇಳಿದರು.

    ಕಿರಣ್, ನಾಗರಾಜ್ ಸಂಗಂ, ನಗರಸಭೆ ಸದಸ್ಯರಾದ ನಸರುಲ್ಲಾ, ಚಂದ್ರಶೇಖರ್, ಸುರೇಶ್ ತಕ್ಕಡಿ, ಸಂಯೋಜಕ ಗೋಪಾಲಸ್ವಾಮಿ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts