More

    ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿ ಪ್ರತಿಷ್ಠಾಪನೆ

    ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿ ಪ್ರತಿಷ್ಠಾನಾ ಮಹೋತ್ಸವ ಗೊಂದಲದ ನಡುವೆಯೂ ಮಂಗಳವಾರ ಮುಂಜಾನೆ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.

    ಹುಣ್ಣಿಮೆ ದಿನದಂದು ಮತ್ತಿಗೆ ಮಣ್ಣಿನಿಂದ ತಯಾರಿಸಿದ್ದ ದೇವಿಯ ಮೂರ್ತಿಗೆ ಮುತ್ತೈದೆಯರು ಧಾರ್ಮಿಕ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಜಯಘೋಷದ ನಡುವೆ ಮಹಾಮಂಗಳಾರತಿ ನೆರವೇರಿಸಿ ಪ್ರತಿಷ್ಠಾನೆ ಮಾಡಲಾಯಿತು. ಡಿ.ಎಂ.ಕುರ್ಕೆ, ಕಿತ್ತನಕೆರೆ, ಕಡಲಮಗ್ಗೆ, ಕೆ.ಶಂಕರನಹಳ್ಳಿ, ದಿಬ್ಬೂರು, ಶಶಿವಾಳ, ಪಿ.ಹೊಸಳ್ಳಿ ಸೇರಿದಂತೆ ಹಲವು ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದರು. ವಿಸರ್ಜನಾ ಮಹೋತ್ಸವ ಸೆ.8ರಂದು ಸಂಜೆ ನೆರವೇರಲಿದೆ.
    ಗೊಂದಲಕ್ಕೆ ತೆರೆ: ಸ್ವರ್ಣಗೌರಿ ಪ್ರತಿಷ್ಠಾಪನೆ ವಿಷಯದಲ್ಲಿ ಕಳೆದೊಂದು ತಿಂಗಳಿನಿಂದ ತಲೆದೋರಿದ್ದ ಬಿಕ್ಕಟ್ಟು ಮಂಗಳವಾರ ಮಾಡಾಳು ನಿರಂಜನ ಪೀಠದಲ್ಲಿ ನಡೆದ ಸಭೆಯಲ್ಲಿ ಇತ್ಯರ್ಥಗೊಂಡಿತು. ಮುದ್ದೇಗೌಡರ ವಂಶಸ್ಥರು ಹಾಗೂ ಮಹೋತ್ಸವ ಸಮಿತಿ ಪದಾಧಿಕಾರಿಗಳ ನಡುವೆ ತಾಲೂಕು ಆಡಳಿತ ಸಂಧಾನ ನಡೆಸಿದ್ದು ವಿಸರ್ಜನಾ ಮಹೋತ್ಸವದವರೆಗಿನ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಸಮಿತಿಗೆ ಅವಕಾಶ ನೀಡಲಾಗಿದೆ.

    ಇದರ ನಡುವೆ ದೇವಿಯ ಗೌರಿ ಮೂರ್ತಿಗೆ ಸಂಪ್ರದಾಯದಂತೆ ಮೂಗುತಿ ತೊಡಿಸಲು ಆಗಮಿಸಿದ್ದ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಕಾರಿಗೆ ಅಡ್ಡಲಾಗಿ ಕುಳಿತ ಮಹಿಳೆಯರು ಪ್ರತಿಭಟನೆ ನಡೆಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಶ್ರೀಗಳನ್ನು ಮಾಡಾಳು ನಿರಂಜನ ಪೀಠಕ್ಕೆ ಕರೆದೊಯ್ದು ಪರಿಸ್ಥಿತಿ ನಿಯಂತ್ರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ತಹಸೀಲ್ದಾರ್ ವಿಭಾ ವಿ.ರಾಥೋಡ್, ಡಿವೈಎಸ್‌ಪಿ ಅಶೋಕ್, ಗ್ರಾಮಾಂತರ ವೃತ್ತ ನಿರೀಕ್ಷಕ ರಾಘವೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts