More

    ಮಾಂಸ ಮಾರಾಟಕ್ಕೆ ಬ್ರೇಕ್

    ಹುಬ್ಬಳ್ಳಿ: ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ಮಧ್ಯಾಹ್ನ ಗಣೇಶಪೇಟದಲ್ಲಿ 4-5 ಮಾಂಸ ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಿದರು.

    ಭಾನುವಾರದ ನಿಮಿತ್ತ ಮಾಂಸಕ್ಕೆ ಬೇಡಿಕೆ ಇತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಹೋಮ್ ಡಿಲೆವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೆಲವರು ಅಂಗಡಿ ತೆರೆದು ಹೋಮ್ ಡಿಲೆವರಿ ಬದಲು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದರು. ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಮಾಂಸಪ್ರಿಯರು ಅಂಗಡಿಗಳ ಮುಂದೆ ಸೇರಿದ್ದರು. ಇದರಿಂದ ನೂಕುನುಗ್ಗಲು ಏರ್ಪಟ್ಟಿತ್ತು. ಸಾಮಾಜಿಕ ಅಂತರಕ್ಕೆ ಡೋಂಟ್ ಕ್ಯಾರ್ ಎಂದಿದ್ದರು.

    ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರೂ ಕೇಳಿರಲಿಲ್ಲ. ‘ಮಾಂಸದ ವಿಷಯದಲ್ಲಿ ನಮಗೆ ಹೋಮ್ ಡೆಲಿವರಿ ವ್ಯವಸ್ಥೆ ಸರಿಯಾಗುವುದಿಲ್ಲ. ತೊಡೆ ಭಾಗ, ತಲೆ ಭಾಗ ಬೇಕಾಗುತ್ತದೆ. ಎಳೆ ಮಾಂಸ, ಗಟ್ಟಿ ಮಾಂಸ ಬೇಕಾಗುತ್ತದೆ’ ಎಂದೆಲ್ಲ ಹೇಳುತ್ತ ಸಾರ್ವಜನಿಕರು ವಾಗ್ವಾದಕ್ಕೆ ಇಳಿದಿದ್ದರು.

    ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಯಿಸಿ ಗುಂಪನ್ನು ಚದುರಿಸಲಾಯಿತು. ಬಳಿಕ ಪಾಲಿಕೆ ಅಧಿಕಾರಿಗಳು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಿದರು.

    ‘ಲಾಕ್​ಡೌನ್ ಹಿನ್ನೆಲೆಯಲ್ಲಿ ಮೀನು, ಮಾಂಸವನ್ನು ಹೋಮ್ ಡಿಲೆವರಿ ಮೂಲಕ ಗ್ರಾಹಕರಿಗೆ ಪೂರೈಸಲು ಅಂಗಡಿಕಾರರಿಗೆ ಪಾಸ್ ನೀಡಿದ್ದೇವೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವಂತಿಲ್ಲ. ಗಣೇಶಪೇಟದಲ್ಲಿ ಮಾಂಸದ ಅಂಗಡಿಗಳ ಮುಂದೆ ಬಹಳಷ್ಟು ಜನ ಸೇರಿದ್ದರಿಂದ ಬಂದ್ ಮಾಡಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

    ವೈರಾಲಜಿ ಲ್ಯಾಬ್ ಮತ್ತದೇ ಪ್ರಲಾಪ!

    ಹುಬ್ಬಳ್ಳಿ: ವೈರಾಲಜಿ ಲ್ಯಾಬ್ ಸ್ಥಾಪನೆಗೆ ನಾವು ಬದ್ಧರಾಗಿದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮತ್ತೆ ಅದೇ ರಾಗ ಹಾಡಿದರು.

    ನಗರದ ಎಪಿಎಂಸಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಈ ಲ್ಯಾಬ್ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಇತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ತಿಳಿಸಲಾಗಿದೆ. ಎರಡೂ ಕಡೆ ವೈರಾಲಜಿ ಲ್ಯಾಬ್ ಸ್ಥಾಪನೆಯಾಗಲಿದೆ. ಬೆಳಗಾವಿಯಲ್ಲಿ ಕೆಎಲ್​ಇ ವತಿಯಿಂದಲೂ ಆರಂಭಿಸಲಾಗುತ್ತಿದೆ ಎಂದರು.

    ಆದರೆ, ಇಂತಹ ವಿಷಮ ಸ್ಥಿತಿಯಲ್ಲೂ ಒಂದು ಪ್ರಯೋಗಾಲಯ ಸ್ಥಾಪನೆ ಮಾಡಲಾಗದೆ, ಇಚ್ಛಾಶಕ್ತಿ ತೋರದೆ, ಬರೀ ಭರವಸೆ ಕೊಡುತ್ತ ಇರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಶಬೇ ಬರಾತನ ನಿಷೇಧ

    ಹುಬ್ಬಳ್ಳಿ: ಮುಸ್ಲಿಮರು ಖಬರಸ್ತಾನಗೆ ಹೋಗಿ ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುವ ಶಬೇ ಬರಾತನ ಕಾರ್ಯಕ್ರಮವನ್ನು ಈ ವರ್ಷ ನಿಷೇಧಿಸಲಾಗಿದೆ ಎಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ತಿಳಿಸಿದೆ. ಏ. 9ರಂದು ಶಬೇ ಬರಾತನ ಆಚರಿಸಬೇಕಿತ್ತು. ಆದರೆ, ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಆಚರಣೆ ಇರುವುದಿಲ್ಲ. ಎಲ್ಲರೂ ಮನೆಯಲ್ಲಿಯೇ ಆಚರಣೆ ಮಾಡಬೇಕು. ಖಬರಸ್ತಾನದಲ್ಲಿ ಸ್ವಚ್ಛತೆ ಹಾಗೂ ಹೂ ಅರ್ಪಣೆ ಮಾಡುವ ಕಾರ್ಯವನ್ನು ಸಂಸ್ಥೆಯ ವತಿಯಿಂದ ಮಾಡಲಾಗುವುದು ಎಂದು ಹೇಳಿದೆ.

    ಅಮ್ಮಿನಬಾವಿ ಬಸವಣ್ಣನ ಜಾತ್ರೆ ರದ್ದು

    ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಏ. 8ರಂದು ದವನದ ಹುಣ್ಣಿಮೆಯಂದು ಜರುಗಲಿದ್ದ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಅಂದು ಪ್ರಾತಃಕಾಲದಲ್ಲಿ ಬಸವಣ್ಣ ದೇವರ ಶಿಲಾವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಮಂಗಳಾರತಿ ಮತ್ತಿತರ ಧಾರ್ವಿುಕ ಪೂಜಾ ಕೈಂಕರ್ಯಗಳನ್ನು ಮಾತ್ರ ಅಮ್ಮಿನಬಾವಿ ಪಂಚಗೃಹ ಹಿರೇಮಠದ ವೈದಿಕರು ಹಾಗೂ ದೇವಾಲಯದ ಪ್ರಧಾನ ಅರ್ಚಕರಷ್ಟೇ ಜರುಗಿಸಲಿದ್ದಾರೆ ಎಂದು ಅಮ್ಮಿನಬಾವಿ ಮಂಡಳ ಪಂಚಾಯಿತಿ ಮಾಜಿ ಪ್ರಧಾನ ಎಂ.ಸಿ. ಹುಲ್ಲೂರ ಹಾಗೂ ಜಿ.ಎಂ. ಹಂಚಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts