More

    ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು : ಶಾಸಕ ವಿ.ಮುನಿಯಪ್ಪ

    ಶಿಡ್ಲಘಟ್ಟ : ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಬಡ್ಡಿರಹಿತ ಸಾಲವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

    ತಾಲೂಕಿನ ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಸೋಮವಾರ ಆಯೋಜಿಸಲಾಗಿದ್ದ ಕೆಸಿಸಿ ಹಾಗೂ ಸ್ವಸಹಾಯ ಗುಂಪುಗಳ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
    ತೀವ್ರ ಬರಗಾಲ ಕಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕರೊನಾ ಹಿನ್ನಲೆಯಲ್ಲಿ ಜಾರಿಯಿರುವ ಲಾಕ್‌ಡೌನ್‌ನಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡಲಿಕ್ಕೂ ಸಾಧ್ಯವಾಗದ ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ಸುಧಾರಣೆಗೆ ತರುವುದು ತುಂಬಾ ಕಷ್ಟದ ಕೆಲಸವಾಗಿದ್ದು ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ನೀಡುತ್ತಿರುವ ಸಾಲವನ್ನು ಸದುದ್ದೇಶಕ್ಕಾಗಿ ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರಿಗೆ ಶಕ್ತಿ ತುಂಬುವ ಜತೆಗೆ ಸಂಕಷ್ಟದ ಸಮಯದಲ್ಲಿ ಅವರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ಪಡೆದುಕೊಂಡಲ್ಲಿ ಪಡೆದ ಸಾಲಕ್ಕೆ ಬಡ್ಡಿ ಕಟ್ಟಬೇಕು, ನಮ್ಮ ಬ್ಯಾಂಕಿನಿಂದ ನೀಡುತ್ತಿರುವ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ. ಹಾಗಾಗಿ ತಾವು ಪಡೆಯುವ ಸಾಲದ ಹಣವನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಸಾಲದ ಮರುಪಾವತಿ ಸುಲಭವಾಗುತ್ತದೆ ಎಂದು ತಿಳಿಸಿದರು.
    20 ಮಹಿಳಾ ಸ್ವಸಹಾಯ ಸಂಘಗಳಿಗೆ 85 ಲಕ್ಷ 13 ಸಾವಿರ ಹಾಗೂ ರೈತರಿಗೆ ಕೆಸಿಸಿ ಸಾಲವಾಗಿ 91 ಲಕ್ಷ 23 ಸಾವಿರ ಸಾಲ ವಿತರಿಸಲಾಯಿತು.

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಜಿ.ಅಶ್ವತ್ಥಪ್ಪ, ಉಪಾಧ್ಯಕ್ಷೆ ಮಲ್ಲಮ್ಮ, ಗ್ರಾಪಂ ಅಧ್ಯಕ್ಷ ಕೆ.ಗೋವಿಂದರಾಜು, ಎಸ್.ದೇವಗಾನಹಳ್ಳಿ ಗ್ರಾ.ಪಂ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಜಿ.ಪಂ ಅಧ್ಯಕ್ಷ ಸುಬ್ರಮಣಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts