More

    ಮಹಿಳೆಗೆ ಶೇ.75 ಶಿಕ್ಷಣ ಕ್ಷೇತ್ರ ಮೀಸಲಿರಲಿ

    ಬೆಳಗಾವಿ: ತಾಯಿ ಅಂತಃಕರಣದೊಂದಿಗೆ ಮಕ್ಕಳಿಗೆ ಆಟ, ಪಾಠ ಕಲಿಸುವ ಮಹಿಳೆಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶೇ.75ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ 15,000 ಶಿಕ್ಷಕರನ್ನು ನೇಮಿಸಿಕೊಳ್ಳಲು ಚರ್ಚಿಸಲಾಗುತ್ತಿದೆ. ಈಗಾಗಲೇ 6ನೇ ತರಗತಿವರೆಗೆ ಪಾಠ ಬೋಧಿಸುತ್ತಿರುವ ಶಿಕ್ಷಕರನ್ನು 8ನೇ ತರಗತಿವರೆಗೆ ಬಡ್ತಿ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದರು. ಸರ್ವ ಶಿಕ್ಷಣ ಅಭಿಯಾನದ ಮೂಲಕ ಕೇಂದ್ರ, ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಬರೀ ಸಂಬಳಕ್ಕಾಗಿ ಗುರುತಿಸಿಕೊಳ್ಳದೆ, ಮಕ್ಕಳಲ್ಲಿ ದೇಶಪ್ರೇಮ ಬಿತ್ತುವ ಮೂಲಕ ಭವಿಷ್ಯದಲ್ಲಿ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಗುರುತರ ಜವಾಬ್ದಾರಿ ಮೆರೆಯಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ಕರೊನಾಗೆ ಮೃತಪಟ್ಟ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಸುಮಾರು 267 ಶಿಕ್ಷಕರ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ಕೊಡಲಾಗುವುದು ಹಾಗೂ ಬಡ ವಿದ್ಯಾರ್ಥಿಗಳಿಗೆ 100 ಲ್ಯಾಪ್‌ಟಾಪ್ ವಿತರಿಸಲಾಗುವುದು ಎಂದರು.

    ಎಷ್ಟೋ ವಿದ್ಯಾರ್ಥಿಗಳು ದೂರದಿಂದ ಶಾಲೆಗಳಿಗೆ ತೆರಳಲು ಸಾರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಶಾಸಕರ ನಿಧಿಯಿಂದ ಬಸ್‌ಗಳನ್ನು ಖರೀದಿಸಿ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಶಾಸಕರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು. 20221-2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು. ಪ್ರಸಕ್ತ ವಷರ್ದಲ್ಲಿ ಸೇವಾ ನಿವೃತ್ತಿ ಹೊಂದಿದ 40ಕ್ಕೂ ಹೆಚ್ಚು ಶಿಕ್ಷಕರನ್ನು ಸತ್ಕರಿಸಲಾಯಿತು.

    ಪ್ರಶಸ್ತಿ ಪ್ರದಾನ: ಜಿಲ್ಲೆಯಲ್ಲಿ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ನೀಡಲಾಯಿತು. ಶಿಕ್ಷಕರ ಕಲ್ಯಾಣ ನಿಧಿಯಿಂದ 20 ಶಿಕ್ಷಕ-ಶಿಕ್ಷಕಿಯರಿಗೆ ಹಾಗೂ ಜಿಪಂನಿಂದ 21 ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಣ್ಣೂರ ಡಯಟ್ ಪ್ರಭಾರಿ ಉಪನಿರ್ದೇಶಕ ಎಸ್.ಪಿ. ದಾಸಪ್ಪನವರ, ಎಸಿಪಿ ನಾರಾಯಣ ಭರಮಣಿ, ಡಿಡಿಪಿಐ ಬಸವರಾಜ ನಾಲತವಾಡ, ಮಲ್ಲಿಕಾರ್ಜುನ ದೇಶನೂರ ಇದ್ದರು.
    ಜೀಜಾ ಮಾತಾ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಗಡೀತೆ ಪ್ರಸ್ತುತ ಪಡಿಸಿದರು. ರಾಜಶೇಖರ ನೇಗಿನಹಾಳ, ಅಂಜನಾ ಮುರಗೋಡ ನಿರೂಪಿಸಿದರು. ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ. ಭಜಂತ್ರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts