More

    ಮಹಾರಾಷ್ಟ್ರದಿಂದ ವಾಪಸಾಗಿದ್ದ ವೃದ್ಧ ಬಲಿ

    ಧಾರವಾಡ/ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರಿಂದ ಚೀನಿ ವೈರಸ್​ಗೆ ಇಬ್ಬರು ಸಾವಿಗೀಡಾದಂತೆ ಆಗಿದೆ. ಹುಬ್ಬಳ್ಳಿ ಭೈರಿದೇವರಕೊಪ್ಪ ಶಾಂತಿ ಕಾಲನಿ ನಿವಾಸಿ 70 ವರ್ಷದ ವೃದ್ಧ ಮೃತಪಟ್ಟವನು. ಈತ ಮಹಾರಾಷ್ಟ್ರದಿಂದ ವಾಪಸಾಗಿ, ಕಿಮ್್ಸ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದನು. ಕರೊನಾ ಜತೆಗೆ ತೀವ್ರ ಉಸಿರಾಟದ ತೊಂದರೆ, ಅಸ್ತಮಾ, ಮೂತ್ರಪಿಂಡ ದೋಷ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದನು. ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಇಲ್ಲಿಯ ಗವಿ ಮೊಹಲ್ಲಾ ಖಬರಸ್ತಾನದಲ್ಲಿ ಶನಿವಾರ ಮಧ್ಯಾಹ್ನ ನೆರವೇರಿಸಲಾಯಿತು.

    20 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 19 ಕರೊನಾ ಸೋಂಕು ಪ್ರಕರಣ ಪತ್ತೆಯಾಗಿ ಜನ ಬೆಚ್ಚಿ ಬಿದ್ದಿದ್ದರು. ಶನಿವಾರ ಸಂಜೆ ವೇಳೆ ಮತ್ತೆ 20 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಮುಂದಿನ ಅಪಾಯವನ್ನು ಸಾರಿ ಹೇಳಿದೆ.

    ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 111ಕ್ಕೆ ಏರಿಕೆಯಾದಂತಾಗಿದೆ. ಬಾಧಿತರಲ್ಲಿ ಕೆಲವರು ಅಂತಾರಾಜ್ಯ ಹಾಗೂ ಸೋಂಕಿತರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ.

    ಪ್ರಯಾಣ ಮಾಹಿತಿ: ಕುಂದಗೋಳ ತಾಲೂಕು ತರ್ಲಘಟ್ಟದ 4 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ. ಈತನಿಗೆ ಹುಬ್ಬಳ್ಳಿ ಬೈರಿದೇವರಕೊಪ್ಪ ಸನಾ ಕಾಲೇಜು ಹಿಂಭಾಗದ ಮಹಿಳೆಯ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.

    ನವಲಗುಂದದಲ್ಲಿ ಮತ್ತೆರಡು: ನವಲಗುಂದ ತಾಲೂಕಿನ ಮೊರಬ ಗ್ರಾಮದ 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಜೂ. 11ರಂದು ಸೋಂಕು ದೃಢಪಟ್ಟಿದ್ದ 59 ವರ್ಷದ ಪುರುಷನ ಸಂಪರ್ಕದಿಂದ ಈಕೆಗೆ ಸೋಂಕು ತಗುಲಿದೆ. ನವದೆಹಲಿಯಿಂದ ಮೊರಬ ಗ್ರಾಮಕ್ಕೆ ಆಗಮಿಸಿದ ಪ್ರಯಾಣ ಹಿನ್ನೆಲೆ ಹೊಂದಿರುವ 29 ವರ್ಷದ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

    ಅಣ್ಣಿಗೇರಿಯಲ್ಲಿ ಮತ್ತೆ 3: ಅಣ್ಣಿಗೇರಿಯ 10 ವರ್ಷದ ಬಾಲಕಿ, 28 ವರ್ಷದ ಮಹಿಳೆ ಹಾಗೂ 23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಜೂ. 10ರಂದು ನವದೆಹಲಿಯಿಂದ ಅಣ್ಣಿಗೇರಿಗೆ ಹಿಂತಿರುಗಿರುವ 40 ವರ್ಷದ ಪುರುಷನ ಸಂಪರ್ಕದಿಂದ ಇವರಿಗೆ ಸೋಂಕು ಬಂದಿದೆ. ಇದರಿಂದ ಅಣ್ಣಿಗೇರಿ ತಾಲೂಕಿನಲ್ಲಿ ಪೀಡಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

    ಕಲಘಟಗಿಯಲ್ಲಿ ಮತ್ತೆ 5: ತೀವ್ರ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದ ಕಲಘಟಗಿ ತಾಲೂಕು ದೇವಿಕೊಪ್ಪದ 68 ವರ್ಷದ ವೃದ್ಧನಲ್ಲಿ ಜೂ. 9ರಂದು ಸೋಂಕು ದೃಢಪಟ್ಟಿತ್ತು. ಆತನ ಸಂಪರ್ಕದಿಂದ ಶನಿವಾರ ಮತ್ತೆ ನಾಲ್ವರಿಗೆ ಪಾಸಿಟಿವ್ ಪತ್ತೆಯಾಗಿದೆ. ದೇವಿಕೊಪ್ಪ ನಿವಾಸಿಗಳಾದ 58 ವರ್ಷದ ಮಹಿಳೆ, 33 ಹಾಗೂ 34 ವರ್ಷದ ಪುರುಷ, 31 ವರ್ಷದ ಮಹಿಳೆ ಹಾಗೂ 11 ತಿಂಗಳ ಮಗುವಿನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತ ಮಹಿಳೆಯು ತಾಲೂಕಿನ ತಾವರಗೇರಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಹೀಗಾಗಿ, ದೇವಿಕೊಪ್ಪ ಹಾಗೂ ತಾವರಗೇರಿ ಗ್ರಾಮದಲ್ಲೀಗ ಭಯ ಶುರುವಾಗಿದೆ. ಇವರೊಂದಿಗೆ ಮಹಾರಾಷ್ಟ್ರ ಹಾಗೂ ದೆಹಲಿಯಿಂದ ವಾಪಸಾಗಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಒಂದೇ ಕುಟುಂಬದ 8 ಜನರಿಗೆ ವೈರಸ್!: ಹುಬ್ಬಳ್ಳಿ ಉಣಕಲ್ ಕೆರೆ ಓಣಿಯ (ಕಾಮನಬೂದಿ) ಒಂದೇ ಕುಟುಂಬದ 7 ಜನರಿಗೆ ಕರೊನಾ ಸೋಂಕು ತಗುಲಿದೆ. ಕೆಮ್ಮು, ನೆಗಡಿ, ತೀವ್ರ ಜ್ವರದಿಂದ ಬಳಲುತ್ತಿದ್ದ ಉಣಕಲ್​ನ 71 ವರ್ಷದ ವೃದ್ಧೆಯಲ್ಲಿ ಜೂ. 12ರಂದು ಕೋವಿಡ್ ಪತ್ತೆಯಾಗಿತ್ತು. ಆಕೆಯ ಸಂಪರ್ಕದಿಂದ ಕುಟುಂಬದ 2 ವರ್ಷದ ಗಂಡು ಮಗು, 5 ವರ್ಷದ ಬಾಲಕಿ, 31 ವರ್ಷದ ಮಹಿಳೆ, 20 ವರ್ಷದ ಯುವಕ, 19 ವರ್ಷದ ಯುವಕ, 44 ವರ್ಷದ ಮಹಿಳೆ, 46 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಆದರೆ, ಯಾವುದೇ ಪ್ರಯಾಣ ಇತಿಹಾಸ ಹೊಂದಿರದ ವೃದ್ಧೆಗೆ ಸೋಂಕು ತಗುಲಿದ್ದು ಹೇಗೆ ಎಂಬುದೇ ನಿಗೂಢವಾಗಿದೆ.

    602 ವರದಿ ಬಾಕಿ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 433 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶುಕ್ರವಾರ ಇದ್ದ 21377 ನಿಗಾವಹಿಸಿದವರ ಸಂಖ್ಯೆ ಶನಿವಾರ 21843ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 20733 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 20110 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 602 ಜನರ ವರದಿ ಬರಬೇಕಿದೆ.

    ಇಬ್ಬರು ಚೇತರಿಕೆ: ಕರೊನಾ ಗೆದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರ ವಿನಯ ಕಾಲನಿಯ 54 ವರ್ಷದ ಮಹಿಳೆ ಹಾಗೂ 36 ವರ್ಷದ ಪುರುಷ ಹುಬ್ಬಳ್ಳಿ ಕಿಮ್ಸ್​ನಿಂದ ಶನಿವಾರ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 50 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 61 ಜನರು ಹುಬ್ಬಳ್ಳಿಯ ಕಿಮ್್ಸ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts