More

    ಮಹಾಮಳೆಗೆ ನೂರಾರು ಮನೆ ಕುಸಿತ

    ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಕಳೆದ 4 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೀಡಾಗಿದೆ. ಬೆಳೆಗಳು ಜಲಾವೃತವಾಗಿದ್ದು ಶೇಂಗಾ, ಹತ್ತಿ, ಉಳ್ಳಾಗಡ್ಡಿ ಸೇರಿ ಅನೇಕ ಬೆಳೆಗಳು ಹಾಳಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ತಾಲೂಕಿನ ಯಳವತ್ತಿ, ಮಾಡಳ್ಳಿ, ಯತ್ನಳ್ಳಿ, ಬಸಾಪುರ, ರಾಮಗೇರಿ, ಗೊಜನೂರ, ಆದ್ರಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ನೂರಾರು ಮನೆಗಳು ಕುಸಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಯಳವತ್ತಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಹೊರವಲಯದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ರಾತ್ರಿಯಿಡೀ ಪರದಾಡುವಂತಾಗಿತ್ತು.

    ಗ್ರಾಮದ ಇಂದಿರಾ ಪ್ಲಾಟ್​ನಲ್ಲಿನ ಈರಯ್ಯ ನರಗುಂದಮಠ, ರೇಣವ್ವ ಪೂಜಾರ ಬಸಯ್ಯ ನರಗುಂದಮಠ, ಅಜಿತ ಮಲ್ಲರೆಡ್ಡಿ, ನಿಂಗಯ್ಯ ನರಗುಂದಮಠ ಸೇರಿ 15 ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಎಸ್​ಸಿ ಕಾಲನಿಯ ಯಲ್ಲಪ್ಪ ಕರೆಣ್ಣವರ, ಲಕ್ಷ್ಮಪ್ಪ ಕರೆಣ್ಣವರ, ಸ್ವಾರೆಪ್ಪ ಮೈಲೆಮ್ಮನವರ, ದುರಗವ್ವ ಮೈಲೆಮ್ಮನವರ ಸೇರಿ 40 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳಲ್ಲಿನ ಮಣ್ಣಿನ ಮನೆಗಳ ಗೋಡೆಗಳಿಂದ ನೀರು ಜಿನುಗುತ್ತಿದೆ.

    ಯಪ್ಪಾ ಮಳೀ ನೀರು ನಾಲ್ಕೈದು ದಿನದಿಂದ ಮನ್ಯಾಗ ನಿಂತೇತ್ರಿ. ಎಷ್ಟಂತ ಹೊರಗ ಹಾಕಬೇಕು? ಮಕ್ಕಳು ಮರಿಗಳನ್ನ ಕಟಗೊಂಡ ಇದರಾಗ ಹೆಂಗ್ ಇರಬೇಕ್ರಿ? ಕರೆಂಟ್ ಹಚ್ಚಾಕ ಭಯ, ಸೊಳ್ಳೆ ಕಾಟ, ಕಟಗಿ ಕುಳ್ಳು ತೊಯ್ದಾವ… ಒಲಿ, ಉರಿ ಹಚ್ಚಾಕ ಆಗವಲ್ದು. ಹಿಂಗಾದ್ರ ನಾವು ಹೆಂಗ್ ಬದುಕಬೇಕ್ರಿ. ಕೂಲಿ ಕೆಲಸಾನೂ ಇಲ್ಲ ಕೈಯಾಗ ನಯಾಪೈಸೆನೂ ಇಲ್ಲ. ನೆಮ್ಮದಿಯಿಂದ ಮಲಗಾಕೂ ಜಾಗ ಇಲ್ಲದಂಗಾಗೇತಿ.
    | ಗಂಗಮ್ಮ ಮೈಲೆಮ್ಮನವರ, ಲಕ್ಷ್ಮಪ್ಪ ಕರೆಣ್ಣವರ, ಯಳವತ್ತಿ ಗ್ರಾಮಸ್ಥರು

    ಅಧಿಕಾರಿಗಳಿಂದ ಪರಿಶೀಲನೆ: ಸೋಮವಾರ ಯಳವತ್ತಿ ಗ್ರಾಮಕ್ಕೆ ಭೇಟಿ ನೀಡಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ವೈ. ಗುರಿಕಾರ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಪಿಡಿಒ ಪಿ.ಎಚ್. ಗೋಣೆಮ್ಮನವರ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕುರುಬರ ಅವರು ಮಳೆಯಿಂದ ಬಿದ್ದ ಮನೆಗಳನ್ನು ಪರಿಶೀಲಿಸಿದರು. ನಂತರ ಪ್ರತಿಕ್ರಿಯಿಸಿದ ತಾಪಂ ಇಒ ಗುರಿಕಾರ, ‘ಅತಿಯಾದ ಮಳೆಯಿಂದ ನೀರು ನುಗ್ಗಿದ ಪರಿಣಾಮ ಮನೆಗಳಿಗೆ ಧಕ್ಕೆಯಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದಿರುವ ಬಗ್ಗೆ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸಮಗ್ರ ವರದಿ ಕಲೆಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗುವುದು’ ಎಂದರು.

    ವರುಣಾರ್ಭಟಕ್ಕೆ ನರಗುಂದದ ಜನತೆ ಹೈರಾಣ

    ನರಗುಂದ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೈರಾಣಾಗಿ ಹೋಗಿದ್ದಾರೆ. ಕೇವಲ ಎರಡು ದಿನಗಳಲ್ಲಿ 30 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.

    ಪಟ್ಟಣದ ಕಸಬಾ ಬಡಾವಣೆಯ ಐತಿಹಾಸಿಕ ಶ್ರೀಸಾಲಿ ಬಸವೇಶ್ವರ ದೇವಸ್ಥಾನದ ಗೋಡೆ ಸೋಮವಾರ ಕುಸಿದು ಬಿದ್ದಿದೆ. ಅಧಿಕೃತ ಮಾಹಿತಿಯಂತೆ ಪಟ್ಟಣದಲ್ಲಿ ಭಾನುವಾರ 94.8 ಮಿಮೀ ಮಳೆ ಸುರಿದಿದೆ. ಸೋಮವಾರ ಮಧ್ಯಾಹ್ನದವರೆಗೂ ಸುರಿದ ನಿರಂತರ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 20 ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ. ಸೆಪ್ಟೆಂಬರ್ ತಿಂಗಳಿನಿಂದ ಈವರೆಗೆ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಮನೆಗಳು ನೆಲ ಕಚ್ಚಿವೆ ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ತಿಳಿಸಿದರು.

    ಶೋಧ ಕಾರ್ಯಕ್ಕೆ ಅಡ್ಡಿ: ಮಲಪ್ರಭಾ ನದಿಯಲ್ಲಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ಕೊಣ್ಣೂರಿನ ವೆಂಕನಗೌಡ ಸಾಲಿಗೌಡ್ರ ಅವರು ಈವರೆಗೂ ಸಿಕ್ಕಿಲ್ಲ. ಸೋಮವಾರ ನೀರಿನ ಹರಿವು ಹೆಚ್ಚಾಗಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ವಿಪರೀತ ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಮನೆ ಗೋಡೆಗಳಿಂದ ನೀರು ಜಿನುಗುತ್ತಿದೆ. ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡಿವೆ.

    ನೆಲಕ್ಕುರುಳಿದ ಕಬ್ಬು, ಕೊಳೆಯುತ್ತಿದೆ ಉಳ್ಳಾಗಡ್ಡಿ

    ಗಜೇಂದ್ರಗಡ: ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅನ್ನದಾತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಶೇ. 75 ರಷ್ಟು ಹಿಂಗಾರು ಬಿತ್ತನೆಗೆ ಬಾಕಿ ಇದ್ದು ತೀವ್ರ ಹಿನ್ನಡೆಯಾಗಿದೆ. ಬಹುತೇಕ ಹೊಲಗಳಲ್ಲಿ ನೀರು ನಿಂತಿರುವುದರಿಂದ ಪೈರು ಹಾಳಾಗುವ ಆತಂಕ ಉಂಟಾಗಿದೆ.

    ಕಟಾವಿಗೆ ಬಂದ ಉಳಾಗಡ್ಡಿ, ಮೆಕ್ಕೆಜೋಳ, ಜೋಳ, ಶೇಂಗಾ, ಹತ್ತಿ, ಸಜ್ಜೆ, ಅವರೆ ಮತ್ತು ಚಂಡು ಹೂ, ಮಲ್ಲಿಗೆ ಹೂಗಳ ಪೈರು ಕೊಳೆಯುತ್ತಿದೆ. ಜಿಗೇರಿ, ಬೈರಾಪೂರ, ಕುಂಟೋಜಿ, ರಾಜೂರ, ಲಕ್ಕಲಕಟ್ಟಿ, ದಿಂಡೂರ, ನಾಗೇಂದ್ರಗಡ, ಇಟಗಿ, ಸೂಡಿ, ಗೋಗೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಹೊಲದ ಒಡ್ಡುಗಳು ಕೊಚ್ಚಿಹೋಗಿದ್ದು ಅಪಾರ ಹಾನಿ ಉಂಟಾಗಿದೆ.

    ನೆಲಕ್ಕೆ ಬಾಗಿದ ಕಬ್ಬು: ಜಿಗೇರಿ ಸರಹದ್ದಿಗೆ ಒಳಪಡುವ ರಮೇಶ ರಾಜೂರ ಅವರ 5 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಬ್ಬು ಇನ್ನೊಂದು ವಾರದಲ್ಲಿ ಕಟಾವಿಗೆ ಬರುತ್ತಿತ್ತು. ಆದರೆ, ಮಳೆ-ಗಾಳಿಗೆ ಸಿಲುಕಿ ನೆಲ್ಕಕುರುಳಿದೆ. ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ಬೆಳೆ ಹಾಳಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts