More

    ಮಹಾನಗರ ಪಾಲಿಕೆ ಈಜುಕೊಳ ಪಾಳು

    ಜಗದೀಶ ಹೊಂಬಳಿ ಬೆಳಗಾವಿ: ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹನುಮಾನ ನಗರದ ಬಾಕ್ಸೈಟ್ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ಬಳಕೆಯಾಗದೇ ಪಾಳು ಬಿದ್ದಿದೆ. ಈಜುಕೊಳ ನಿರ್ಮಾಣ ಕಾಮಗಾರಿ 2019ರಲ್ಲೇ ಪೂರ್ಣಗೊಂಡಿದ್ದರೂ ಈವರೆಗೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಿಲ್ಲ. ಹೀಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಈಜುಕೊಳ ನಿರ್ಮಿಸಿರುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 5 ಕೋಟಿ ರೂ. ವೆಚ್ಚದಲ್ಲಿ ಒಲಿಂಪಿಕ್ ಗೇಮ್‌ನಲ್ಲಿ ಬಳಸುವ ಅಂತಾರಾಷ್ಟ್ರೀಯ ದರ್ಜೆ ಅಳತೆ ಮತ್ತು ಗುಣಮಟ್ಟವನ್ನು ಆಧರಿಸಿ ಈಜುಕೊಳ ನಿರ್ಮಿಸಲಾಗಿದೆ. ಆದರೆ, ನಿರ್ಮಾಣ ಮಾಡಿರುವ ಉದ್ದೇಶವನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ನಿರ್ಮಾಣ ಮಾಡಿ ಮೂರು ವರ್ಷಗಳವರೆಗೆ ಹಾಗೇ ಬಿಟ್ಟಿದ್ದರಿಂದ ಈಜುಕೊಳ ಅವನತಿ ಹಾದಿ ಹಿಡಿದಿದೆ.
    ನೀರಿಲ್ಲದ್ದಕ್ಕೆ ಆರಂಭವಾಗಿಲ್ವಂತೆ: ಅಂತಾರಾಷ್ಟ್ರೀಯ ದರ್ಜೆಯ ಕ್ರೀಡೆಗಳನ್ನು ನಡೆಸುವುದಕ್ಕೆ ಯಾವ ಮಾದರಿ ಬೇಕೋ ಅದೇ ರೀತಿಯಲ್ಲಿ ವ್ಯವಸ್ಥಿತವಾಗಿ ಈಜುಕೊಳ ನಿರ್ಮಿಸಲಾಗಿದೆ. ಈಜುಕೊಳ ನಿರ್ಮಾಣಕ್ಕೆ ಅಧಿಕಾರಿಗಳು ಹಣವನ್ನು ನೀರಿನಂತೆ ಬಳಸಿದ್ದಾರೆ. ಆದರೆ, ಈಜುಕೊಳಕ್ಕೆ ನೀರು ಹರಿಸುವುದನ್ನು ಮಾತ್ರ ಮಾಡುತ್ತಿಲ್ಲ. ಎಲ್ ಆ್ಯಂಡ್ ಟಿ ಕಂಪನಿ ಅವರಿಗೆ ನೀರು (ಬಲ್ಕ್ ವಾಟರ್) ಕೊಡುವಂತೆ ಕೋರಲಾಗಿದೆ. ಅವರು ನೀರು ಕೊಟ್ಟ ಬಳಿಕ ಈಜುಕೊಳ ಆರಂಭವಾಗುತ್ತದೆ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ.
    ಹೈಟೆಕ್ ಈಜುಕೊಳ: ನೀರು ಲಭ್ಯವಾಗುತ್ತದೆಯೋ ಇಲ್ಲವೋ ಎನ್ನುವ ಅರಿವಿಲ್ಲದೆ ಹೈಟೈಕ್ ಆಗಿ ಈಜುಕೊಳ ನಿರ್ಮಿಸಲಾಗಿದೆ. 50*100 ಮೀಟರ್ ಅಳತೆಯ ಸ್ಟಾೃಂಡರ್ಡ್‌ನಲ್ಲಿ ಸಿದ್ಧಪಡಿಸಲಾಗಿದೆ. ಈಜುಕೊಳದಲ್ಲಿ ಕ್ಲಬ್‌ಹೌಸ್ (ಮಹಿಳೆ, ಪುರುಷರಿಗೆ ಪ್ರತ್ಯೇಕವಾಗಿ ಉಡುಪು ಬದಲಾಯಿಸುವ ಹೌಸ್), ಅಂಡರ್ ಯುಜಿ ಟ್ಯಾಂಕ್, ಪಂಪಿಂಗ್ ಹೌಸ್, ಫಿಲ್ಟರ್ ಯೂನಿಟ್ ವ್ಯವಸ್ಥೆ ಇದೆ. ಈ ಎಲ್ಲ ಕಾಮಗಾರಿಗೆ 3 ವರ್ಷ ಕಾಲಾವಧಿ ಹಿಡಿದೆ. 2016ರಲ್ಲಿ ಈಜುಕೊಳ ನಿರ್ಮಾಣ ಕಾರ್ಯ ಆರಂಭಿಸಿ, 2019ಕ್ಕೆ ಪೂರ್ಣಗೊಳಿಸಲಾಗಿದೆ. ಬಹಳಷ್ಟು ಶ್ರಮ, ಹಣ ವ್ಯಯಿಸಿ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಿಸಲಾಗಿದೆ. ಅದರ ಉದ್ದೇಶ ಮಾತ್ರ ಈಡೇರುತ್ತಿಲ್ಲ ಎಂದು ನಾಗರಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಮಹಾನಗರ ಪಾಲಿಕೆಯಿಂದ ವಿಜಯ ನಗರದಲ್ಲಿ 2016ರಲ್ಲೇ ಮತ್ತೊಂದು ಈಜುಕೊಳ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಅದಕ್ಕೆ ಅನುದಾನದ ಕೊರತೆ ಆಗಿದ್ದರಿಂದ ಈವರೆಗೂ ಪೂರ್ಣಗೊಂಡಿಲ್ಲ. ಈಗಾಗಲೇ 2 ಕೋಟಿ ರೂ. ಅನುದಾನದಲ್ಲಿ ಅರ್ಧ ಕಾಮಗಾರಿಯಾಗಿದೆ. ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಇನ್ನೂ 2 ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಹನುಮಾನ ನಗರದಲ್ಲಿರುವ ಸುಸಜ್ಜಿತವಾಗಿ ನಿರ್ಮಾಣ ಮಾಡಿರುವ ಈಜುಕೊಳ ನೀರಿಲ್ಲದೆ ಹಲವು ವರ್ಷಗಳಿಂದ ಕಾರ್ಯಾರಂಭವಾಗಿಲ್ಲ. ಇತ್ತ ವಿಜಯನಗರದಲ್ಲಿರುವ ನಿರ್ಮಾಣದ ಹಂತದಲ್ಲಿರುವ ಈಜುಕೊಳಕ್ಕೆ ಅನುದಾನದ ಕೊರತೆ ಎದುರಾಗಿದ್ದು, ಎರಡೂ ಈಜುಕೊಳಗಳಿಗೆ ಕಾಯಕಲ್ಪ ಅದ್ಯಾವಾಗ ಆಗುತ್ತದೆಯೋ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts