More

    ಮಹಾನಗರ ಪಾಲಿಕೆಗೆ ಪಂಗನಾಮ!

    ಬೆಳಗಾವಿ: ನಗರದಲ್ಲಿ ಒಂದು ಅಂತಸ್ತಿನ ಕಟ್ಟಡ ಕಟ್ಟಲು ಪರವಾನಗಿ ಪಡೆದು ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳನ್ನು ಕಟ್ಟುವುದರೊಂದಿಗೆ ನಿಯಮ ಉಲ್ಲಂಸಿದ್ದಷ್ಟೇ ಅಲ್ಲದೆ, ತೆರಿಗೆ ಕಟ್ಟದೆ ಮಹಾನಗರ ಪಾಲಿಕೆಗೆ ಪಂಗನಾಮ ಹಾಕುತ್ತಿರುವುದು ಬೆಳಕಿಗೆ ಬಂದಿದೆ.

    ಮಹಾನಗರ ಪಾಲಿಕೆಯ ತನ್ನ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿನ ವಸತಿ, ಮಾರುಕಟ್ಟೆ ಪ್ರದೇಶಗಳಲ್ಲಿ ಒಂದು ಇಲ್ಲವೆ ಎರಡು ಮಹಡಿಯ ಮನೆ, ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಕಟ್ಟಿ ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳಲಾಗಿದೆ. ಆದರೆ, ವಾಸ್ತವದಲ್ಲಿ ಮೂರರಿಂದ ನಾಲ್ಕು ಮಹಡಿಯುಳ್ಳ ಕಟ್ಟಡ ನಿರ್ಮಿಸಲಾಗಿದೆ. ಆದರೆ ಪರವಾನಗಿ ಪಡೆದುಕೊಂಡಿರುವ ಮಹಡಿ ಲೆಕ್ಕಕ್ಕೆ ಮಾತ್ರ ತೆರಿಗೆ ಕಟ್ಟಲಾಗುತ್ತದೆ. ಇನ್ನುಳಿದ ಮಹಡಿ ಕಟ್ಟಿರುವುದಕ್ಕೆ ತೆರಿಗೆಯನ್ನೇ ಕಟ್ಟುವುದಿಲ್ಲ. ಈ ರೀತಿ ತೆರಿಗೆ ವಂಚನೆಯಿಂದಾಗಿ ಪಾಲಿಕೆಗೆ ವಾರ್ಷಿಕ ಲಕ್ಷಾಂತರ ರೂ. ತೆರಿಗೆ ನಷ್ಟ ಉಂಟಾಗುತ್ತಿದೆ. ಅಲ್ಲದೆ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಈ ರೀತಿ ನಿಯಮ ಉಲ್ಲಂಸಿ ಕಟ್ಟಡ ಕಟ್ಟಿರುವುದಕ್ಕೆ
    ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಯಾವ ಧೈರ್ಯದ ಮೇಲೆ ಇವರು ನಿಯಮ ಉಲ್ಲಂಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?: ನಗರದ ಖಡೇಬಜಾರ್, ಶಿವಬಸವ ನಗರ, ಶಾಹುನಗರ, ನೆಹರು ನಗರ, ರಾಣಿ ಚನ್ನಮ್ಮ ನಗರ, ಅನಗೋಳ, ಭಾಗ್ಯನಗರ, ಮಹಾಂತೇಶ ನಗರ, ಶಿವಬಸವ ನಗರ, ಗಾಂಧಿ ನಗರ, ಸದಾಶಿವ ನಗರ, ಹನುಮಾನ ನಗರ ಸೇರಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ 80ಕ್ಕೂ ಅಧಿಕ ಹೊಸ ವಸತಿ, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇವುಗಳ ಪರಿಶೀಲನೆ ವೇಳೆ ಬಹುತೇಕ ಕಟ್ಟಡಗಳನ್ನು ನಿಯಮ ಉಲ್ಲಂಘಿಸಿ ಕಟ್ಟುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಬೆಂಕಿಯಲ್ಲಿ ಪಾಲಿಕೆ ಕಡತಗಳು ಭಸ್ಮ: ಪಾಲಿಕೆಯ ಹಳೆ ಕಟ್ಟಡದ ಕೊಠಡಿವೊಂದರಲ್ಲಿ ಪಾಲಿಕೆಗೆ ಸಂಬಂಧಿಸಿದ 1970ರಿಂದ 2004ರ ವರೆಗಿನ ಆಸ್ತಿ ನೋಂದಣಿ ಪತ್ರ, ಬಾಂಡ್ ಪೇಪರ್, ಪಾಲಿಕೆಗೆ ಸೇರಿದ ನಗರದಲ್ಲಿರುವ ಮೂಲ ಆಸ್ತಿ, ನಕ್ಷೆ, ವಿವಿಧ ಆದಾಯ ಪ್ರಮಾಣ ಪತ್ರಗಳು, ಸರ್ಕಾರದ ಆದೇಶಗಳು, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಪ್ರತಿಗಳು ಸೇರಿ ಮಹತ್ವದ ದಾಖಲೆಗಳು 2017ರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿವೆ. ಪರಿಣಾಮ ಹಳೆಯ ಭಾಗದಲ್ಲಿರುವ ಮನೆ, ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತಿಲ್ಲ. ಇದೀಗ ಹೊಸ ದಾಖಲೆಗಳಿಗೆ ಸಮರ್ಪಕವಾಗಿ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ, ಕಟ್ಟಡಗಳ ಮಾಲೀಕರು ಕೂಡ ಬದಲಾಗಿದ್ದಾರೆ. ಹಾಗಾಗಿ, ತೆರಿಗೆ ನಿಗದಿ ಮಾಡಲು ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಆಸ್ತಿ ಇದ್ದರೂ ಆದಾಯ ಕಡಿಮೆ

    ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 1.38 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದು, ಅವುಗಳಲ್ಲಿ ಕೆಲ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದೆ. ಆದರೆ, ಬಾಡಿಗೆ ದರ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಆಸ್ತಿಗಳ ಮರುಮೌಲ್ಯಮಾಪನ ಮಾಡಿ ವ್ಯತ್ಯಾಸದ ತೆರಿಗೆ ಹಣವನ್ನು ವಸೂಲಿ ಮಾಡುವ ಕೆಲಸ ಅರ್ಧದಲ್ಲೇ ಮೊಟಕುಗೊಂಡಿದೆ. ಪರಿಣಾಮ ವಾರ್ಷಿಕ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಲಕ್ಷಾಂತರ ಆಸ್ತಿಗಳಿದ್ದರೂ ಆದಾಯ ಮಾತ್ರ 35 ರಿಂದ 40 ಕೋಟಿ ರೂ. ವರೆಗೆ ಮಾತ್ರ ಬರುತ್ತಿದೆ.

    ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮರುಮೌಲ್ಯಮಾಪನ ಮಾಡುವ ಕೆಲಸ ಪ್ರಗತಿ ಹಂತದಲ್ಲಿದೆ. ಒಂದು ಮಹಡಿ ಪರವಾನಗಿ ಪಡೆದು 2 ಅಥವಾ 3 ಮಹಡಿ ಕಟ್ಟಡ ನಿರ್ಮಿಸಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಹೊಸ ಕಟ್ಟಡಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
    | ಡಾ.ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts