More

    ಮಹಾತ್ಮರ ಜಯಂತಿ ಅನುದಾನಕ್ಕೆ ಬರ

    ಹಾವೇರಿ: ನಾಡು, ನುಡಿಗಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ 24 ಮಹಾತ್ಮರ ಜಯಂತ್ಯುತ್ಸವಗಳ ಆಚರಣೆಗೆ ಸರ್ಕಾರ ಆದೇಶ ಹೊರಡಿಸಿ, ಜಿಲ್ಲಾ ಮಟ್ಟದ ಜಯಂತಿಗೆ 50 ಸಾವಿರ, ತಾಲೂಕು ಮಟ್ಟದಲ್ಲಿ ಆಚರಣೆಗೆ 19 ಸಾವಿರ ರೂ. ಅನುದಾನ ನೀಡಿದೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತದ ನಿರ್ಲಕ್ಷ್ಯ ಪರಿಣಾಮ ಮೂರು ಮಹಾತ್ಮರ ಜಯಂತಿಯ ಅನುದಾನ ಕಳೆದೊಂದು ವರ್ಷದಿಂದ ಬಿಡುಗಡೆಯಾಗಿಲ್ಲ. ಇದರಿಂದ ಜಯಂತಿ ಆಚರಿಸಿದ ಸಮುದಾಯದವರು ಹಣಕ್ಕಾಗಿ ಸರ್ಕಾರಿ ಕಚೇರಿಗೆ ಅಲೆಯುವಂತಾಗಿದೆ.

    ಜಿಲ್ಲೆಯಲ್ಲಿ ಕಳೆದ ವರ್ಷ ಆಚರಿಸಲಾದ ವೇಮನ, ನಿಜಶರಣ ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ ಜಯಂತಿಯ ಅನುದಾನ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಈವರೆಗೂ ಬಿಡುಗಡೆಯಾಗಿಲ್ಲ. ಜತೆಗೆ ಈ ಮೂವರ ಜಯಂತ್ಯುತ್ಸವವನ್ನು 2020ರ ಜನವರಿಯಲ್ಲಿಯೂ ಆಚರಿಸಲಾಗಿದೆ. ಆಚರಣೆಯ ಜವಾಬ್ದಾರಿ ಹೊತ್ತ ಆಯಾ ಸಮುದಾಯದ ಮುಖಂಡರು, ಸಂಘ, ಸಂಸ್ಥೆಗಳು ಹಣ ಖರ್ಚು ಮಾಡಿವೆ. ಈ ಹಣ ಬಿಡುಗಡೆಗೊಳಿಸುವಂತೆ ನಿತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಇವರು ಅಲೆಯುವಂತಾಗಿದೆ. ಆದರೆ ಇಲಾಖೆಯ ಅಧಿಕಾರಿಗಳಿಂದ ಸ್ಪಂದನೆ ದೊರೆತಿಲ್ಲ.

    ಸಚಿವರು ಹೇಳಿದರೂ ಪ್ರಯೋಜನವಾಗಿಲ್ಲ: ಡಿಸೆಂಬರ್​ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ನೆಹರು ಓಲೇಕಾರ ಅವರು ವಿಷಯ ಪ್ರಸ್ತಾಪಿಸಿ, ಅನುದಾನ ಬಿಡುಗಡೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರ ಗಮನಕ್ಕೆ ತಂದಿದ್ದರು. ಕೂಡಲೆ ಹಣ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಅವರಿಗೆ ಸಚಿವರು ಸೂಚಿಸಿದ್ದರು. ಆದರೂ ಪ್ರಯೋಜನವಾಗಿಲ್ಲ.

    ಇಲಾಖೆಯ ಅಧಿಕಾರಿಗಳ ತಪ್ಪಿನಿಂದ ಹಿಂದಿನ ವರ್ಷ ಮೂರು ಜಯಂತಿಗಳಿಗೆ ಬಿಡುಗಡೆಗೊಂಡಿದ್ದ ಅನುದಾನ ರದ್ದಾಗಿತ್ತು. ಸಚಿವರು ಬಂದಾಗ ಈ ವಿಷಯ ಚರ್ಚೆಯಾಗಿ ಅನುದಾನ ಕೊಡುವ ಭರವಸೆ ನೀಡಿದ್ದರು. ಅದರಂತೆ ಅನುದಾನ ಬರಲಿದ್ದು, ಕಳೆದ ವರ್ಷ ಹಾಗೂ ಈ ವರ್ಷದ ಹಣ ಬಿಡುಗಡೆಗೊಳಿಸುತ್ತೇವೆ.
    | ಶಶಿಕಲಾ ಹುಡೇದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ

    ಸರ್ಕಾರ ಎಲ್ಲ ಮಹಾತ್ಮರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜಯಂತಿ ಆಚರಣೆಗೆ ಅನುದಾನ ಮೀಸಲಿಟ್ಟಿದೆ. ಆದರೆ, ಜಿಲ್ಲೆಯ ಅಧಿಕಾರಿಗಳು ಅನುದಾನ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆಯುತ್ತಿದ್ದೇವೆ. ಹಿಂದಿನ ಅಧಿಕಾರಿ ತಪ್ಪು ಮಾಡಿದ್ದರಿಂದ ವಿಳಂಬವಾಗಿದೆ. ಸರಿ ಮಾಡುತ್ತೇವೆ ಎನ್ನುತ್ತಲೇ ದಿನ ದೂಡುತ್ತಿದ್ದಾರೆ. ಈ ಪುರುಷಾರ್ಥಕ್ಕೆ ಸರ್ಕಾರವೇಕೆ ಜಯಂತಿ ಆಚರಿಸಬೇಕು. ನಾವೇ ಆಚರಿಸಿಕೊಳ್ಳುತ್ತಿದ್ದೇವು.
    | ಬಸವರಾಜ ಕಳಸೂರ, ನಿಜಶರಣ ಅಂಬಿಗರ ಚೌಡಯ್ಯ ಗಂಗಾಮತ ಸಮಾಜದ ತಾಲೂಕಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts