More

    ಮಹದಾಯಿ ಯೋಜನೆ ಜಾರಿಗೆ ವಿಳಂಬ ಬೇಡ

    ನವಲಗುಂದ: ಮಹದಾಯಿ ತೀರ್ಪು ರಾಜ್ಯದ ಪರವಾಗಿ ಬಂದರೂ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಶೀಘ್ರವೇ ಯೋಜನೆ ಅನುಷ್ಠಾನ ಮಾಡಬೇಕು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಆಗ್ರಹಿಸಿದರು.

    ಪಟ್ಟಣದ ರೈತ ಭವನದ ಬಳಿ 40ನೇ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಅಳಗವಾಡಿ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಂಗಳವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

    ಉತ್ತರ ಕರ್ನಾಟಕದ 4 ಜಿಲ್ಲೆಯ 9 ತಾಲೂಕಿನ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು ಕೈಗೊಂಡಿರುವ ಹೋರಾಟ 5ನೇ ವರ್ಷ ಮುಗಿಸಿ, 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಷ್ಟಾದರೂ, ರೈತರ ಕನಸು ನನಸಾಗಿಲ್ಲ ಎಂದು ಆರೋಪಿಸಿದರು.

    ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ ನೀತಿಯಾಗಿದೆ. ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ ಬೆಳೆ ಪರಿಹಾರ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇಲ್ಲಿವರೆಗೆ ಪರಿಹಾರ ಬಂದಿಲ್ಲ. ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ, ರೈತರಿಗೆ ರಸಗೊಬ್ಬರದ ಅಭಾವದ ಮೂಲಕ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

    ನಂತರ ತಹಸೀಲ್ದಾರ್ ನವೀನ ಹುಲ್ಲೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಡಿ.ಕೆ. ಹಳ್ಳದ, ಹುಬ್ಬಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣಾ ಹುಬ್ಬಳ್ಳಿ, ಅಣ್ಣಿಗೇರಿ ಅಧ್ಯಕ್ಷ ಭಗವಂತಪ್ಪ ಪುಟ್ಟಣ್ಣವರ, ಶಿವಶಂಕರ ಕಲ್ಲೂರ, ಪುರಸಭೆ ಸದಸ್ಯರಾದ ಜೀವನ ಪವಾರ, ಪ್ರಕಾಶ ಶಗ್ಲಿ, ಗಬ್ಬರ ಮಕಾನದಾರ, ಅಪ್ಪಣ್ಣಾ ಹಳ್ಳದ, ಮೋದಿನ ಶಿರೂರ, ಮಹಾಂತೇಶ ಭೋವಿ, ಸುರೇಶ ಮೇಟಿ, ಹನಮಂತ ವಾಲೀಕಾರ, ಎಪಿಎಂಸಿ ಸದಸ್ಯರಾದ ನಾರಾಯಣ ಮಾಡೊಳ್ಳಿ, ಆನಂದ ಹವಳಕೋಡ, ಹಸನನಾಯ್ಕ ನಾಯ್ಕವಾಡಿ, ಪ್ರದೀಪ ಲೆಂಕನಗೌಡರ, ಬಸನಗೌಡ ಪಾಟೀಲ, ಶರಣು ಯಮನೂರ, ರಮೇಶ ನವಲಗುಂದ, ಅಮೃತ ಇಜಾರೆ ಇದ್ದರು.

    ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ

    ಮಹದಾಯಿ, ಕಳಸಾ-ಬಂಡೂರಿ ಯೋಜನೆ ರೈತ ಹೋರಾಟಗಾರರು ಹಾಗೂ ವಿವಿಧ ರೈತಪರ ಹೋರಾಟ ಸಂಘಟನೆಗಳ ರೈತ ಮುಖಂಡರು ಪಟ್ಟಣದಲ್ಲಿ 40ನೇ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರ ಗಲ್ಲಿಗೆ ಮಂಗಳವಾರ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

    ಕರೊನಾ ಮುನ್ನಚ್ಚರಿಕೆ ಕ್ರಮವಾಗಿ ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ಸಿ.ಬಿ. ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ ಪೊಲೀಸ್ ಸಿಬ್ಬಂದಿ ಮೂಲಕ ಬಸಪ್ಪ ಲಕ್ಕುಂಡಿ ವೀರಗಲ್ಲು ಬಳಿ ಭದ್ರತೆ ಒದಗಿಸಿದ್ದರು. ರೈತ ಹೋರಾಟ ಸಂಘಟನೆಕಾರರು ಗುಂಪು, ಗುಂಪಾಗಿ ನಿಲ್ಲುವುದಕ್ಕೆ ಅವಕಾಶ ನೀಡದೆ ಪರಸ್ಪರ ಅಂತರ ಕಾಯ್ದುಕೊಂಡು ಐದು ಜನಕ್ಕೆ ಮಾಲಾರ್ಪಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

    ಪಕ್ಷಾತೀತ ರೈತ ಹೋರಾಟ ಸಮಿತಿ ಪದಾಧಿಕಾರಿಗಳಾದ ಬಸಪ್ಪ ಬೀರಣ್ಣವರ, ಸುಭಾಸಚಂದ್ರಗೌಡ ಪಾಟೀಲ, ಮಲ್ಲಿಕಾರ್ಜನಗೌಡ ಪಾಟೀಲ ಕುಲಕರ್ಣಿ, ಸಂಗಪ್ಪ ನಿಡವಣಿ, ಸಿದ್ದಪ್ಪ ಮುಪೈನವರ, ಇತರರು ಹುತಾತ್ಮರಿಗೆ ಶಾಂತಿ ಕೋರಿ ಮೌನಾಚರಣೆ ಮಾಡಿದರು.

    ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಎಸ್.ಆರ್. ಅಂಬಲಿ ಮಾತನಾಡಿ, ಭೂ ಸುಧಾರಣೆ ಮಸೂದೆ ತಿದ್ದುಪಡಿ ಮಾಡಬಾರದು. 2019-20ರ ಸಾಲಿನ ಬೆಳೆವಿಮೆ ಬಿಡುಗಡೆ ಸೇರಿ ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ನವೀನ ಹುಲ್ಲೂರ ಅವರಿಗೆ ಮನವಿ ಸಲ್ಲಿಸಿದರು.

    ರೈತ ಒಕ್ಕೂಟದ ಲೋಕನಾಥ ಹೆಬಸೂರ, ಸಿದ್ದು ತೇಜಿ, ಆಪ್ ಆದ್ಮಿ ಪಕ್ಷದ ವಿಕಾಸ ಸೊಪ್ಪಿನ, ಜಯಕರ್ನಾಟಕ ಸಂಘಟನೆಯ ಶಿವು ಕುಂಬಾರ, ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಸೇರಿ ವಿವಿಧ ಸಂಘಟನೆ ಮುಖಂಡರು ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts