More

    ಮಳೆ ಮಾಯ, ವಿದ್ಯುತ್ ಕ್ಷಾಮ ಜಿಲ್ಲೆಯಲ್ಲಿ ಮಂಕಾದ ಕೃಷಿ ಚಟುವಟಿಕೆ -1.37 ಲಕ್ಷ ಪಂಪ್‌ಸೆಟ್‌ಗಳ ತೀರದ ಬಾಯಾರಿಕೆ -ಬೆಳೆಗಳು ಬಾಡುವ ಆತಂಕ 

    ಡಿ.ಎಂ.ಮಹೇಶ್, ದಾವಣಗೆರೆ
    ಜಿಲ್ಲೆಯಲ್ಲಿ ಮಳೆರಾಯನ ದರ್ಶನವಿಲ್ಲ. ನೀರಿಲ್ಲದೆ ಬೆಳೆಗಳು ಒಣಗುವ ಹಂತದಲ್ಲಿವೆ. ಉಳಿದ ಬೆಳೆಯನ್ನಾದರೂ ಕಾಪಾಡಿಕೊಳ್ಳುವ ಕಾತರದಂತೆ ಸಮರ್ಪಕ ವಿದ್ಯುತ್ ಕೂಡ ನಿಲುಕದಿರುವುದು ರೈತರಿಗೆ ತಲೆನೋವಾಗಿದೆ. ಒಟ್ಟಾರೆ ಕೃಷಿ ಚಟುವಟಿಕೆಗೆ ಮಂಕು ಕವಿದಿದೆ.
    ಜಿಲ್ಲೆಯಲ್ಲಿ ಒಟ್ಟು 1,37,939 ಕೃಷಿ ಪಂಪ್‌ಸೆಟ್‌ಗಳಿವೆ. ಇವುಗಳಿಂದ ತಿಂಗಳೊಂದಕ್ಕೆ 96.42 ಕೋಟಿ ರೂ. ಮೊತ್ತದ, ಸರಾಸರಿ 740 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿತ್ತು. ಆದರೆ ನಿರೀಕ್ಷಿತ ಕರೆಂಟ್ ಉತ್ಪಾದನೆಯಾಗದ ನೆಪದಲ್ಲಿ ಆಗಸ್ಟ್ ತಿಂಗಳ ಕೊನೆಯ ಎರಡು ವಾರದಲ್ಲಿ ವಿದ್ಯುತ್ ಪೂರೈಕೆ ಕಣ್ಣಾಮುಚ್ಚಾಲೆ ಆಡಿದ್ದಿದೆ.
    ಬೋರ್‌ವೆಲ್ ಇತರೆ ಜಲ ಸಂಪನ್ಮೂಲದಿಂದ ತೋಟ, ಗದ್ದೆಗೆ ನಿರಂತರ ನೀರು ಹಾಯಿಸಿಕೊಳ್ಳಲಾಗದ ಚಿಂತೆ ರೈತರನ್ನು ಕಾಡುತ್ತಿದೆ. 7ರಿಂದ 8 ತಾಸು ಕರೆಂಟ್ ಬೇಡಿಕೆ ಇದ್ದರೂ 3ರಿಂದ ನಾಲ್ಕು ತಾಸು ಮಾತ್ರ ಕೃಷಿಗೆ ಸಿಗುತ್ತಿದೆ.
    ಅಸಮರ್ಪಕ ಹಾಗೂ ರಾತ್ರಿ ವೇಳೆಗೆ ಸೀಮಿತ ವಿದ್ಯುತ್ ನೀಡುವ ಬೆಸ್ಕಾಂ ಧೋರಣೆಗೆ ರೈತರು ಸಿಟ್ಟು ಪ್ರದರ್ಶಿಸಿದ್ದಾರೆ. 7-8 ತಾಸು ನಿರಂತರ ವಿದ್ಯುತ್‌ಗೆ ಒತ್ತಾಯಿಸಿ ಸೋಮವಾರ ಕೂಡ ಪ್ರತಿಭಟನೆ ಕಾವೇರಲಿದೆ.
    ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳ 1,27,907 ಹೆ. ಪ್ರದೇಶದಲ್ಲಿ (ಶೇ.101) ಬಿತ್ತನೆಯಾಗಿದೆ. ಈ ವೇಳೆಗೆ ಉತ್ತಮ ಮಳೆಯಾಗಿದ್ದರೆ ತೆನೆ ಕಟ್ಟುವ ಹಂತ ತಲುಪಿರುತ್ತಿತ್ತು. ಅರ್ಧಕ್ಕೂ ಹೆಚ್ಚಿನ ಇಳುವರಿ ನಷ್ಟದ ಭೀತಿ ಎದುರಾಗಿದೆ.
    11570 ಹೆ.ನಲ್ಲಿ ಶೇಂಗಾ, 6052 ಹೆ. ರಾಗಿ, 10100 ಹೆ.ನಲ್ಲಿ ತೊಗರಿ, 1629 ಹೆ. ಹತ್ತಿ ಬಿತ್ತನೆಯಾಗಿದ್ದರೂ ಅಲ್ಲಲ್ಲಿ ಮಳೆ- ವಿದ್ಯುತ್ ಅಲಭ್ಯತೆ ಕಾರಣಕ್ಕೆ ನಿರೀಕ್ಷಿತ ಫಸಲು ಕಾಣುವುದು ಕಷ್ಟವಾಗಿದೆ. ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಭದ್ರಾ ನೀರು ತಲುಪದೇ ಹೋದರೆ 22320 ಹೆ.ನಲ್ಲಿ ಭತ್ತ ನಾಟಿ ಮಾಡಿದ ಬೆಳೆಗಾರರ ಸ್ಥಿತಿ ಕೂಡ ಅನಿಶ್ಚತತೆಗೆ ಜಾರಲಿದೆ.
    ತೋಟಗಾರಿಕೆ ಬೆಳೆಗಳ ಪೈಕಿ 76794 ಹೆ.ನಲ್ಲಿ ಅಡಕೆ ಪ್ರದೇಶವಿದೆ. ನೀರುಣಿಸದಿದ್ದಲ್ಲಿ ಬಹುತೇಕ ಅಡಕೆ ಗಿಡಗಳ ಬೆಳವಣಿಗೆ ಮೇಲೆ ಪೆಟ್ಟು ಬೀಳಲಿದೆ. 1542 ಹೆ. ಈರುಳ್ಳಿ, 648 ಹೆ. ಟೊಮ್ಯಾಟೋ ಸೇರಿ 2902 ಹೆ. ನಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರಿಗೂ ವಿದ್ಯುತ್ ಸಮಸ್ಯೆ ಮುಂದುವರಿದಲ್ಲಿ ಇಳುವರಿ ಇಳಿಮುಖವಾಗಬಹುದು.

    ಶೇ.75ರಷ್ಟು ಕೊರತೆ
    ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ 99 ಮಿಮೀ ವಾಡಿಕೆ ಪೈಕಿ ಕೇವಲ 24 ಮಿ.ಮೀ. ಮಳೆಯಾಗಿದೆ. ಶೇ.75ರಷ್ಟು ಮಳೆಯ ಕೊರತೆ ಕಾಡಿದೆ. ಸೆ.1ರಂದು ಜಿಲ್ಲೆಯಲ್ಲಿ 12 ಮಿ.ಮೀ. ಮಳೆಯಾಗಿದ್ದರೂ ಬೆಳೆಗೆ ಚೇತೋಹಾರಿಯಾಗಿಲ್ಲ ಎನ್ನುತ್ತಾರೆ ರೈತರು.

    ಭದ್ರಾ ನೀರಿಗೂ ಸಂಚಕಾರ?
    ಆ.10ರಿಂದ (100 ದಿನಕ್ಕೆ) ಭದ್ರಾ ನೀರು ಹರಿವಿನ ರೊಟೇಷನ್ ಆರಂಭವಾಗಿತಿಂಗಳು ಸಮೀಪಿಸುತ್ತಿದೆ. 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದರೂ ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಮೇಲೆ ನೀರು ಹರಿವು ನಿರ್ಧಾರವಾಗಲಿದೆ.
    ಸೆ.6ರಂದು ಭದ್ರಾ ಕಾಡಾ ಸಮಿತಿ ಸಭೆ ನಡೆಯಲಿದ್ದು, ನಿಗದಿತ ವೇಳಾಪಟ್ಟಿ ಮತ್ತು ನೀರಿನ ಹರಿವಿನ ಪ್ರಮಾಣ ಬದಲಾಗುವ ಪುಕಾರು ಹಬ್ಬಿದೆ. ಈ ಹಿನ್ನೆಲೆಯಲ್ಲಿ ಸೆ.5ರಂದು ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಭಾರತೀಯ ರೈತ ಒಕ್ಕೂಟ ಸಭೆ ನಡೆಸಿ ಎಚ್ಚರಿಕೆ ನೀಡಲು ಮುಂದಾಗಿದೆ.

    ಬರ ಘೋಷಣೆಗೆ ಒತ್ತಾಯ
    ಮೂಲಗಳ ಪ್ರಕಾರ ಹರಿಹರ, ಹೊನ್ನಾಳಿ ಮತ್ತು ಜಗಳೂರು ತಾಲೂಕುಗಳಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರ‌್ಯಾಂಡಮ್ ಮಾದರಿಯಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
    ಇದರ ಆಧಾರದ ಮೇಲೆ ಬರಪೀಡಿತ ತಾಲೂಕುಗಳು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನೇ ಬರಪೀಡಿತ ಎಂದು ಘೋಷಿಸುವಂತೆಯೂ ಕೆಲವು ರೈತರು ಒತ್ತಾಯಿಸುತ್ತಿದ್ದಾರೆ.

    ಭದ್ರಾ ಅಚ್ಚುಕಟ್ಟಿನಲ್ಲಿ ಬೆಳೆ ಒಣಗದಂತೆ ನೋಡಿಕೊಳ್ಳುವ ಜತೆಗೆ ಮಳೆಯಾಶ್ರಿತ ಬೆಳೆಗಳಿಗೆ ಪರಿಹಾರ ನೀಡುವುದು, ಸಮರ್ಪಕ ವಿದ್ಯುತ್ ಪೂರೈಸುವುದು ಸರ್ಕಾರದ ಜವಾಬ್ದಾರಿ. ಕಾಡಾ ಸಮಿತಿ ಈ ಹಿಂದಿನ ನಿರ್ಣಯಕ್ಕೆ ವಿರೋಧವಾಗಿ ನಡೆದುಕೊಂಡಲ್ಲಿ ಹೋರಾಟ ನಿಶ್ಚಿತವಾಗಲಿದೆ. ಹವಾಮಾನ ಪ್ರತಿಕೂಲತೆ ಬಗ್ಗೆ ಮಾಹಿತಿ ಇರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಈಗಲಾದರೂ ಜಾಗ್ರತೆ ವಹಿಸಬೇಕು.
    ತೇಜಸ್ವಿ ಪಟೇಲ್
    ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ.

    ಸಾಲ ಮರುಪಾವತಿಗೆ ಬ್ಯಾಂಕ್‌ಗಳು ರೈತರಿಗೆ ಕಿರುಕುಳ ನೀಡುತ್ತಿವೆ. ಇದು ನಿಲ್ಲಬೇಕು. ಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವಿತರಣೆಯಲ್ಲಿ ಲೋಪ ಆಗಬಾರದು. ಬರಪೀಡಿತ ಜಿಲ್ಲೆ ಘೋಷಣೆಗೆ ಸರ್ಕಾರ, ಮೀನಮೇಷ ಕೈಬಿಡಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು.
    ಹೊನ್ನೂರು ಮುನಿಯಪ್ಪ
    ರೈತ ಮುಖಂಡ.

    ಜಿಲ್ಲೆಯ ಕೃಷಿ ಪಂಪ್‌ಸೆಟ್
    ದಾವಣಗೆರೆ 35090
    ಜಗಳೂರು 15021
    ಚನ್ನಗಿರಿ 44290
    ಹರಿಹರ 15884
    ಹೊನ್ನಾಳಿ 16800
    ನ್ಯಾಮತಿ 10854
    ಒಟ್ಟು 137939
    ———

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts