More

    ಮಳೆ ಅಭಾವದಿಂದ ಬಿತ್ತನೆಗೆ ರೈತರ ಹಿಂದೇಟು

    ಗಿರೀಶ ದೇಶಪಾಂಡೆ ಹಾನಗಲ್ಲ

    ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಬೀಳದಿರುವ ಕಾರಣ ರೈತರು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳನ್ನು ನಿರ್ಧರಿಸಲಾಗದೆ ಕಾದುನೋಡುವ ಸ್ಥಿತಿಗೆ ತಲುಪಿದ್ದಾರೆ.

    ಮೇ ತಿಂಗಳಲ್ಲಿ ಬರಬೇಕಿದ್ದ ಕೃತಿಕಾ, ರೋಹಿಣಿ ಮಳೆಗಳು ಬಿದ್ದಿದ್ದರೆ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದವು. ಬಿತ್ತನೆಗೆ ಭೂಮಿ ಹದಗೊಳಿಸಿಕೊಳ್ಳುವ ಕಾರ್ಯದಲ್ಲಿ ರೈತರು ತೊಡಗಿಕೊಳ್ಳುತ್ತಿದ್ದರು. ಆದರೆ, ಇದುವರೆಗೂ ಹದವಾದ ಮಳೆ ಬಾರದ್ದರಿಂದ ಬಿತ್ತನೆ ಬೀಜ ವಿತರಣೆ ಕೇಂದ್ರಗಳತ್ತ ರೈತರು ಸುಳಿಯುತ್ತಿಲ್ಲ. ಮೇ ಕೊನೆಯಲ್ಲಿ ಹತ್ತಿ ಬಿತ್ತನೆಯಾಗಬೇಕಿತ್ತು. ಆದರೆ, ಅಂಥ ವಾತಾವರಣ ಕೈಗೂಡದ್ದರಿಂದ ಬಹುತೇಕ ರೈತರು ಹತ್ತಿ ಬಿತ್ತನೆಯಿಂದ ವಿಮುಖರಾಗುವ ಲಕ್ಷಣಗಳು ಕಾಣುತ್ತಿವೆ.

    ಭತ್ತ ಹಾಗೂ ಗೋವಿನಜೋಳ ಬಿತ್ತನೆಯು ಮೃಗಶಿರಾ ಮಳೆಯ ಮೊದಲು ಆರಂಭಗೊಳ್ಳಬೇಕಿದೆ. ಆದರೆ, ಕಳೆದ ವರ್ಷ ಮುಂಗಾರು ಪ್ರಾರಂಭದಲ್ಲಿ ವಾಡಿಕೆ ಮಳೆ ಕೈಕೊಟ್ಟು, ಮುಂದೆ ಅತಿವೃಷ್ಟಿಯನ್ನೇ ತಂದಿಟ್ಟಿತ್ತು. ಈ ವರ್ಷದ ಮಳೆ ಪ್ರಮಾಣವು ವಾಡಿಕೆಯಷ್ಟೇ ಆಗಲಿದೆ ಎಂಬ ಮುನ್ಸೂಚನೆ ಹವಾಮಾನ ಇಲಾಖೆ ಯದ್ದಾಗಿದೆ. ಆದರೆ, ಅಂಫಾನ್​ದಂಥ ಚಂಡಮಾರುತಗಳಿಂದ ಹವಾಮಾನ ವೈಪರೀತ್ಯವಾದರೆ ಏನೂ ಆಗಬಹುದೆಂದು ರೈತರು ಬಿತ್ತನೆ ಬೀಜಗಳ ಖರೀದಿಗೆ ಹಿಂಜರಿಯುತ್ತಿದ್ದಾರೆ. ಏಪ್ರಿಲ್​ನಲ್ಲಿ ವಾಡಿಕೆ ಮಳೆ 43 ಮಿ.ಮೀ. ಪೈಕಿ 20 ಮಿ.ಮೀ. ಹಾಗೂ ಮೇ ತಿಂಗಳಲ್ಲಿ 74 ಮಿ.ಮೀ. ಪೈಕಿ 66 ಮಿ.ಮೀ. ಬಿದ್ದಿದೆ. ಆದರೂ, ಕೇವಲ ಶೇ. 50ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಗೆ ಸಿದ್ಧತೆ ಪೂರ್ಣಗೊಂಡಿದೆ. ಕಳೆದ ವರ್ಷದ ಮುಂಗಾರಿನ ಅತಿವೃಷ್ಟಿಯಿಂದ ಗೋವಿನಜೋಳ ಸಂಪೂರ್ಣ ಕೈಕೊಟ್ಟಿತ್ತು. ಹೀಗಾಗಿ, ಭತ್ತದತ್ತ ರೈತರ ಚಿತ್ತ ಹೊರಳಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

    ಬಿತ್ತನೆ ಬೀಜ ದಾಸ್ತಾನು: ಕೃಷಿ ಇಲಾಖೆಯು ರೈತರ ಬೇಡಿಕೆಯನ್ವಯ ಭತ್ತದ 1001, 1010, ಜಯಾ, ಅಭಿಲಾಷ ಮೊದಲಾದ ತಳಿಗಳ, ಗೋವಿನಜೋಳದ ಸುಮಾರು 13 ತಳಿಗಳ ಮತ್ತು ಸೋಯಾ ಅವರೆಯ ಕೆಲ ತಳಿಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ. ತಾಲೂಕಿನಲ್ಲಿ 8 ಬೀಜ ವಿತರಣೆ ಕೇಂದ್ರಗಳಿದ್ದರೂ, ಬೊಮ್ಮನಹಳ್ಳಿ ಕೇಂದ್ರ ಹೊರತುಪಡಿಸಿ ಬೇರೆಲ್ಲೂ ಬೀಜ ಖರೀದಿಗೆ ರೈತರು ಆಸಕ್ತಿ ತೋರುತ್ತಿಲ್ಲ. ಇನ್ನು ಕಳೆದ ವರ್ಷದ ವಹಿವಾಟಿಗನುಗುಣವಾಗಿ 1065 ಟನ್ ಡಿಎಪಿ, 775 ಟನ್ ಯೂರಿಯಾ, 191 ಟನ್ ಪೊಟ್ಯಾಷ್ ರಸಗೊಬ್ಬರಗಳನ್ನು ತಾಲೂಕಿನಲ್ಲಿ ದಾಸ್ತಾನು ಮಾಡಲಾಗಿದೆ.

    ಉಲ್ಟಾ ಹೊಡೆದ ಇಲಾಖೆಯ ಗುರಿ: ಕಳೆದ ವರ್ಷ ಕೃಷಿ ಇಲಾಖೆಯು ತಾಲೂಕಿನಲ್ಲಿ ನಾಟಿ ಸೇರಿ 20,600 ಹೆಕ್ಟೇರ್ ಭತ್ತದ ಬಿತ್ತನೆಯಾಗಲಿದೆ ಎಂಬ ಗುರಿ ಇಟ್ಟುಕೊಂಡಿತ್ತು. ಅದರಂತೆ ಬೀಜ-ಗೊಬ್ಬರ ದಾಸ್ತಾನು ಮಾಡಿತ್ತು. ಆದರೆ, 12000 ಹೆಕ್ಟೇರ್ ಮಾತ್ರ ಭತ್ತ ಬಿತ್ತನೆಯಾಗಿತ್ತು. ಅದರಂತೆ 16,700 ಹೆಕ್ಟೇರ್ ಗೋವಿನಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಆದದ್ದು 25,000 ಹೆಕ್ಟೇರ್ ಬಿತ್ತನೆ. ಹತ್ತಿ ಬಿತ್ತನೆ 6000 ಹೆಕ್ಟೇರ್ ಗುರಿ ಪೈಕಿ 3000 ಹೆಕ್ಟೇರ್ ಮಾತ್ರ. ಪ್ರಸಕ್ತ ವರ್ಷದಲ್ಲಿಯೂ ಇಲಾಖೆ ಹಳೆಯ ಪಟ್ಟಿಯನ್ನೇ ಮುಂದುವರಿಸಿರುವುದು ಗಮನಿಸಬೇಕಾದ ಸಂಗತಿ.

    ಕೃಷಿ ಇಲಾಖೆಯು ಮಿಶ್ರ ಬೆಳೆ ಪದ್ಧತಿ ಅನುಷ್ಠಾನಕ್ಕಾಗಿ ಗಿಡಗಳ ಮಧ್ಯೆ ಅಂತರ ಕಾಪಾಡುವ ನಿಟ್ಟಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಎಲ್ಲ ಬಿತ್ತನೆ ಬೀಜಗಳನ್ನು ಕಡಿಮೆ ವಿತರಿಸುತ್ತಿದೆ. ಪ್ರತಿ ಎಕರೆಗೆ 8-10 ಕೆಜಿ ಗೋವಿನಜೋಳದ ಬೀಜಗಳು ಬೇೕಕಿದ್ದರೂ 5 ಕೆಜಿ ಮಾತ್ರ ವಿತರಿಸಲಾಗುತ್ತಿದೆ. ಭತ್ತವು ಎಕರೆಗೆ 45 ಕೆಜಿ ಬೇಕಿದ್ದರೂ, 25 ಕೆಜಿ ಮಾತ್ರ ವಿತರಿಸುತ್ತಿದೆ. ಸರ್ಕಾರದ ಮಾರ್ಗದರ್ಶನದಂತೆ ರೈತರು ಒಂದೇ ಬಗೆಯ ಬೆಳೆಗೆ ಜೋತು ಬೀಳದೇ ಮಿಶ್ರ ಬೇಸಾಯ ಪದ್ಧತಿ ಅನುಸರಿಸಲಿ ಎಂಬ ಉದ್ದೇಶದಿಂದ ಕಡಿತಗೊಳಿಸಿದೆ.
    | ದೇವೇಂದ್ರಪ್ಪ ಕಡ್ಲೇರ್ ಸಹಾಯಕ ಕೃಷಿ ನಿರ್ದೇಶಕ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts