More

    ಮಳೆಗಾಗಿ ಲಾಳನಕೆರೆ ಗ್ರಾಮ ದೇವತೆಗೆ ನವ ಚಂಡಿಕಾ ಹೋಮ

    ಗಂಡಸಿ: ವರುಣ ದೇವನ ದರ್ಶನ ಭಾಗ್ಯವನ್ನು ಕೋರಿ ಮಳೆಯನ್ನು ಕರುಣಿಸುವಂತೆ ಅರಸೀಕೆರೆ ತಾಲೂಕಿನ ಲಾಳನಕೆರೆ ಗ್ರಾಮದ ಜನರು ಲಾಳನಕೆರೆ ಗ್ರಾಮದೇವತೆಯಾದ ಶ್ರೀ ಮಾರಿಕಾಂಬದೇವಿ ಸನ್ನಿಧಿಯಲ್ಲಿ ಈಚೆಗೆ ಶ್ರೀ ನವ ಚಂಡಿಕಾ ಹೋಮ ನಡೆಸಿದರು.
    ಮಳೆಯ ಕೊರತೆಯಿಂದ ಭೀಕರ ಬರಗಾಲ ಆವರಿಸಿದ್ದು ಮಳೆ-ಬೆಳೆ ಇಲ್ಲದೆ ರೈತ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಮೇವಿನ ಕೊರತೆಯಿಂದ ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಜಾನುವಾರು ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡಲು ಹೋದರೆ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಅಗ್ಗದ ಬೆಲೆಗೆ ದನ-ಕರುಗಳನ್ನು ಮಾರಾಟ ಮಾಡಿ ಕೈ ತೊಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗಿದ್ದು, ಈ ಪರಿಸ್ಥಿತಿಯಿಂದ ಹೊರಬರಲು ವರುಣ ದೇವನ ದರ್ಶನ ಭಾಗ್ಯವನ್ನು ಕರುಣಿಸುವಂತೆ ಜನರು ಶ್ರೀ ಮಾರಿಕಾಂಬ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
    ಚಂಡಿಕಾ ಹೋಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ಮಾಡಲಾಯಿತು.
    ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಪರದೇಶಿ ಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಭಕ್ತರಿಗೆ ಆಶೀರ್ವದಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಗುಡಿ ಗೌಡ ಶಿವಣ್ಣ, ತೋಟದ ಮನೆ ಸಣ್ಣೇಗೌಡ, ಶ್ರೀ ಮಾರಿಕಾಂಬ ಸಮಿತಿ ಅಧ್ಯಕ್ಷ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಗ್ರೋ ಬಾಬು, ಕಾರ್ಯದರ್ಶಿ ತಮ್ಮಯ್ಯ, ಹಾಗೂ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts