More

    ಮಳಿಗೆಗಳ ಕಂದಾಯ ವಸೂಲಿ ಮಾಡಿ

    ಎಚ್.ಡಿ. ಕೋಟೆ: ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ವಾಣಿಜ್ಯ ಮಳಿಗೆಗಳ ಕಂದಾಯ ವಸೂಲಾತಿ ಸುಮಾರು 11 ಕೋಟಿ ರೂ. ಬಾಕಿ ಇದ್ದು ಸಾರ್ವಜನಿಕರು ಪಾವತಿ ಮಾಡುವ ಮೂಲಕ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹಿರಿಯ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಮನವಿ ಮಾಡಿದರು.

    ಪಟ್ಟಣದ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಅನಿತಾ ನಿಂಗನಾಯಕ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಜೆಟ್ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕುಡಿಯುವ ನೀರಿನ ಕಂದಾಯ 1 ಕೋಟಿ ರೂ. ಹಾಗೂ ವಾಣಿಜ್ಯ ಮಳಿಗೆಗಳ ಕಂದಾಯ 10 ಕೋಟಿ ರೂ.ಗೂ ಹೆಚ್ಚು ಬಾಕಿ ಇದೆ. ಸಾಕಷ್ಟು ಬಾರಿ ಪ್ರಚಾರದ ಮೂಲಕ ಕಂದಾಯ ಪಾವತಿ ಮಾಡುವಂತೆ ಮನವಿ ಮಾಡಿದ್ದರೂ ಸಾರ್ವಜನಿಕರು ಕಂದಾಯ ಪಾವತಿ ಮಾಡುತ್ತಿಲ್ಲ. 2014 ರಿಂದ ಪುರಸಭೆಗೆ ಮಾಲೀಕರು ಬಂದು ಕಂದಾಯ ಪಾವತಿ ಮಾಡುವುದಕ್ಕೆ ಅವಕಾಶ ಇದೆ. ಆದರೆ ಇದುವರೆಗೆ ಶೇ. 20 ರಷ್ಟೂ ಕಂದಾಯ ವಸೂಲಾತಿ ಆಗಿಲ್ಲ. ಹಾಗಾದರೆ ಪಟ್ಟಣ ಹೇಗೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದರು.

    ಸರ್ಕಾರ ಪುರಸಭೆಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ವಸೂಲಾತಿ ಆದ ಕಂದಾಯದಲ್ಲಿ ಪಟ್ಟಣವನ್ನು ಅಭಿವೃದ್ಧಿ ಮಾಡಬೇಕಾಗಿದೆ. ಹಾಗಾಗಿ ಹಿರಿಯ ನಾಗರಿಕರು ವಾಣಿಜ್ಯ ಮಳಿಗೆಗಳ ಮಾಲೀಕರು ಕಂದಾಯ ಕಟ್ಟುವಂತೆ ತಿಳಿವಳಿಕೆ ನೀಡಬೇಕು ಎಂದು ಕೋರಿದರು.

    ಎಚ್.ಡಿ. ಕೋಟೆ ಪುರಸಭಾ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್‌ನಲ್ಲಿ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಅಲ್ಲಿ ಕೇವಲ ಶೇ. 10ರಷ್ಟು ಮಾತ್ರ ಕಂದಾಯ ವಸೂಲಾತಿ ಆಗಿದೆ. ಶಾಂತಪುರ ಗ್ರಾಮದಲ್ಲಿ ಇರುವ ತಂಬಾಕು ಮಂಡಳಿ ಒಂದರಲ್ಲೇ ಸುಮಾರು 45 ಲಕ್ಷ ರೂ. ಕಂದಾಯ ಬಾಕಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪುರಸಭಾ ವ್ಯಾಪ್ತಿಯಲ್ಲಿ ವಸೂಲಾತಿ ಆಗುವ ಕಂದಾಯದಲ್ಲಿ ಪಟ್ಟಣದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ವೇತನ ನೀಡಲು ಆಗುತ್ತಿಲ್ಲ. ಜತೆಗೆ ಪಟ್ಟಣದ ಹೃದಯ ಭಾಗದಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲು, ಫುಟ್‌ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ, ಕಡಿಮೆ ದರದಲ್ಲಿ ಪಟ್ಟಣದ ಸಾರ್ವಜನಿಕರಿಗೆ ಊಟ-ತಿಂಡಿ ನೀಡಲು ಪುರಸಭೆ ವತಿಯಿಂದ ಕ್ಯಾಂಟೀನ್ ತೆರೆಯಲು ಹಣವನ್ನು ಮೀಸಲು ಇಡಲಾಯಿತು. ಆದರೆ ಯಾವ ಕೆಲಸ ಕಾರ್ಯಗಳು ಕೂಡ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ ಎಂದ ಮೇಲೆ ಬಜೆಟ್ ಮಂಡನೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಮುಖ್ಯಾಧಿಕಾರಿ ಸುರೇಶ್ ಅವರಿಗೆ ಪ್ರಶ್ನಿಸಿದರು.

    ಪುರಸಭಾ ಸದಸ್ಯ ಮಿಲ್ ನಾಗರಾಜು ಮಾತನಾಡಿ, ಕಳೆದ ಎರಡು ಬಜೆಟ್‌ನಲ್ಲಿ ಘೋಷಣೆ ಆದ ಸಲಹೆಗಳು ಎರಡು ವರ್ಷ ಕಳೆದರೂ ಕಾರ್ಯರೂಪಕ್ಕೆ ಬರದೆ ಇದ್ದ ಮೇಲೆ ಮತ್ತೆ ಬಜೆಟ್ ಮಂಡನೆ ಮಾಡುವುದು ಹಾಸ್ಯಾಸ್ಪದ. ಸರ್ಕಾರಕ್ಕೆ ಅಂಕಿ-ಅಂಶಗಳನ್ನು ಕೊಡುವುದಕ್ಕೋಸ್ಕರ ಬಜೆಟ್ ಮಂಡನೆ ಮಾಡುವುದು ಬೇಡ. ಕಾರ್ಯರೂಪಕ್ಕೆ ತರುವುದಾದರೆ ಬಜೆಟ್ ಮಂಡನೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಇದಕ್ಕೆ ಮುಖ್ಯಾಧಿಕಾರಿಯಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಮುಖಂಡ ವೈ.ಟಿ. ಮಹೇಶ್ ಮಾತನಾಡಿ, ಪಟ್ಟಣದ ವಡ್ಡರಗುಡಿ ಗ್ರಾಮದಿಂದ ಪಟ್ಟಣದ ಗದ್ದಿಗೆ ವೃತ್ತದವರೆಗೆ ಮುಖ್ಯರಸ್ತೆ ತೀರ ಹಾಳಾಗಿದ್ದು ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹಾಗಾಗಿ ಬಜೆಟ್‌ನಲ್ಲಿ ಹಣ ಮೀಸಲು ಇಟ್ಟು ರಸ್ತೆ ಅಭಿವೃದ್ಧಿಪಡಿಸುವಂತೆ ಹಾಗೂ ಹಳೇ ಆಸ್ಪತ್ರೆ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಪುರಸಭೆಗೆ ಹೆಚ್ಚು ಆದಾಯ ಬರುವುದರಿಂದ ಕಟ್ಟಡ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.

    ಲಾರಿ ಪ್ರಕಾಶ್ ಮಾತನಾಡಿ, ಪಟ್ಟಣದಲ್ಲಿ ದಿನೇ ದಿನೆ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಹಾಗಾಗಿ ನಿಗದಿತ ಸ್ಥಳದಲ್ಲಿ ವಾಹನಗಳ ನಿಲುಗಡೆ ಮಾಡಲು ತಂಗುದಾಣ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

    ಮೆಡಿಕಲ್ ನಾಗಣ್ಣ ಮಾತನಾಡಿ, ಪಟ್ಟಣದ ಮೊದಲನೆಯ ಮುಖ್ಯರಸ್ತೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ನಿವಾಸಿಗಳು ಇದರಿಂದ ತುಂಬ ತೊಂದರೆಪಡುತ್ತಿದ್ದಾರೆ. ಹಾಗಾಗಿ ಕೋತಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು ಎಂದು ಕೋರಿದರು.

    ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಪಟ್ಟಣದ ಯಾವುದಾದರೂ ಒಂದು ವೃತ್ತಕ್ಕೆ ಕರ್ನಾಟಕ ರತ್ನ ದಿ. ಪುನೀತ್‌ರಾಜ ಕುಮಾರ್ ಅವರ ಹೆಸರು ಇಡಬೇಕು ಎಂದು ಮನವಿ ಮಾಡಿದರು.
    ಮುಖ್ಯಾಧಿಕಾರಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್, ಸದಸ್ಯರಾದ ಆಸೀಫ್ ಇಕ್ಬಾಲ್, ಪ್ರೇಮ್ ಸಾಗರ್, ಶಾಂತಮ್ಮ, ಚಂದ್ರಮೌಳಿ, ಮಹೇಶ್, ಯಶವಂತ್, ಸ್ಟೂಡಿಯೋ ಪ್ರಕಾಶ್, ಬ್ಯಾಂಕ್ ವೀರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts