More

    ಮಲೆನಾಡಲ್ಲಿ ಶ್ರಾವಣ ಮಾಸದ ಚೂಡಿ ಪೂಜೆ ಸಂಭ್ರಮ

    ಶೃಂಗೇರಿ: ಮಲೆನಾಡಿನಲ್ಲಿ ಶ್ರಾವಣ ಮಾಸವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕೃಷಿ ಚಟುವಟಿಕೆಗಳ ನಡುವೆಯೂ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಿ, ಮನೆಯಂಗಳಕ್ಕೆ ಸಗಣಿ ಸಾರಿಸಿ, ರಂಗೋಲಿ ಇಟ್ಟು ಹೂಗಳನ್ನು ಇಡಲಾಗುತ್ತದೆ. ಮನೆಗೆ ಗೋಮೂತ್ರ ಸಿಂಪಡಿಸಿ ಶ್ರಾವಣ ಶನಿವಾರವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮತ್ತೊಂದು ವಿಶಿಷ್ಟ ಆಚರಣೆ ಚೂಡಿ ಪೂಜೆ. ಶುಕ್ರವಾರ ಮತ್ತು ಭಾನುವಾರ ತುಳಸಿ ಸನ್ನಿಧಿಯಲ್ಲಿ ಕುಟುಂಬದವರೆಲ್ಲರೂ ಸೇರಿ ಚೂಡಿ ಪೂಜೆ ನೆರವೇರಿಸುತ್ತಾರೆ. ಈ ಮಾಸದಲ್ಲಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಶ್ರದ್ಧೆಯಿಂದ ಹಬ್ಬ ಆಚರಿಸಲಾಗುತ್ತದೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ಸಿಂಹ ರಾಶಿಗೆ ಆಗಮಿಸುತ್ತಾನೆ. ಈ ಸಂದರ್ಭ ಸೂರ್ಯದೇವನ ಬಿಂಬವನ್ನು ಬರೆದು ಗರಿಕೆ, ಬಣ್ಣಬಣ್ಣದ ಹೂಗಳನ್ನು ಅರ್ಪಿಸುವ ಪದ್ಧತಿ ಇಂದಿಗೂ ಇದೆ. ಚೂಡಿ ಎಂದರೆ ಅರ್ಥಾತ್ ಗಂಟು ಅಥವಾ ಗುಂಪು. ಗರಿಕೆ, ರಥಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿ ಹೂ ಹಾಗೂ ವೈವಿಧ್ಯಮಯ ಸಸ್ಯಗಳಾದ ಕಾಗೆಕಣ್ಣು, ಸಾಸಿವೆ ಹೂಗಳನ್ನು ಒಗ್ಗೂಡಿಸಿ ಬಾಳೆನಾರಿನಲ್ಲಿ ಕಟ್ಟಿದ್ದರೆ ಅದೇ ಚೂಡಿ. ಪ್ರಾತಃಕಾಲ ಚೂಡಿಪೂಜೆಗೆ ಪ್ರಶಸ್ತ. ಪೂಜೆ ಮಾಡಲು ಆಗದಿದ್ದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಮುಗಿಸಬೇಕು. ಬೆಳಗ್ಗೆ ಮಂಗಳ ಸ್ನಾನದ ಬಳಿಕ ಮುತೆôದೆಯರು ಸಾಂಪ್ರಾದಾಯಿಕ ಶೈಲಿಯ 18 ಮೊಳದ ಸೀರೆಯನ್ನುಟ್ಟು ಬಾವಿಯ ದಂಡೆಗೆ ಅರಿಶಿಣ, ಕುಂಕುಮ ಹಚ್ಚಿ ಹೂ ಇಡುತ್ತಾರೆ. ನೀರಿಗೆ ಅರಿಶಿಣ-ಕುಂಕುಮ ಸಮರ್ಪಿಸಿ, ಗಂಗೆಯನ್ನು ಸ್ಮರಿಸಿ ನೀರು ತೆಗೆಯುತ್ತಾರೆ. ಅದನ್ನು ತುಳಸಿಕಟ್ಟೆ ಮುಂದಿಟ್ಟು, ರಂಗೋಲಿ ಹಾಕಿ ಹೊಸ್ತಿಲಿಗೆ ಶೇಡಿ ಬರೆದು ಚೂಡಿ ಪೂಜೆ ಆರಂಭಿಸುತ್ತಾರೆ. ಬಳಿಕ ದೀಪ ಹಚ್ಚಿ ತುಳಸಿಗೆ ನೀರು ಎರೆದು ಗಂಧ ಹಚ್ಚಿ, ವೀಳ್ಯದ ಜತೆ ಚೂಡಿ ಅರ್ಪಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts