More

    ಮಲೆನಾಡಲ್ಲಿ ಕರೊನಾ ಕರ್ಫ್ಯೂ ಯಶಸ್ವಿ

    ಶಿವಮೊಗ್ಗ: ಲಾಕ್​ಡೌನ್ 1.0 ಮಾದರಿಯಲ್ಲೇ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಮಲೆನಾಡು ಶಿವಮೊಗ್ಗದಲ್ಲಿ ಭಾನುವಾರ ಕರೊನಾ ಕರ್ಫ್ಯೂ ಯಶಸ್ವಿಯಾಯಿತು. ವ್ಯಾಪಾರ-ವಹಿವಾಟು, ಕೈಗಾರಿಕೆಗಳು ಇಡೀ ದಿನ ಸ್ತಬ್ಧಗೊಂಡಿದ್ದವು. ಆದರೆ ಅಲ್ಲಲ್ಲಿ ಬೈಕ್, ಕಾರು ಮತ್ತು ಆಟೋಗಳು ರಸ್ತೆಗಳಿದಿದ್ದವು.

    ಶನಿವಾರ ಸಂಜೆಯಿಂದಲೇ ನಗರದಲ್ಲಿ ವ್ಯಾಪಾರ ಸ್ಥಗಿತಗೊಂಡಿತ್ತು. ವಾಹನಗಳ ಸಂಚಾರ ಕೂಡ ವಿರಳವಾಗಿತ್ತು. ಭಾನುವಾರ ಅಲ್ಲಲ್ಲಿ ಜನರ ಓಡಾಟ ನಿರಂತರವಾಗಿದ್ದರೂ ಪ್ರಮುಖ ರಸ್ತೆಗಳು, ವೃತ್ತಗಳು, ಕೆಎಸ್ಸಾರ್ಟಿಸಿ, ಖಾಸಗಿ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು. ಚಿತ್ರಮಂದಿರ, ಶಾಪಿಂಗ್ ಮಾಲ್​ಗಳು ತೆರೆಯಲೇ ಇಲ್ಲ. ಹಲವು ವೃತ್ತಗಳಲ್ಲಿ ಪೊಲೀಸರು ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್​ಗಳನ್ನು ಹಾಕಿದ್ದರು.

    ಮೆಡಿಕಲ್​ಗಳು, ಖಾಸಗಿ ಆಸ್ಪತ್ರೆಗಳ ಓಪಿಡಿ ಕಾರ್ಯನಿರ್ವಹಿಸಿದವು. ಭಾನುವಾರ ಆಗಿದ್ದರಿಂದ ಸರ್ಕಾರಿ ಕಚೇರಿ, ಬ್ಯಾಂಕ್​ಗಳಿಗೆ ರಜೆ ಇತ್ತು. ಈದ್ ಉಲ್ ಫಿತ್ರು ಆಚರಣೆ ಹಿನ್ನಲೆಯಲ್ಲಿ ಶಿವಪ್ಪ ನಾಯಕ ವೃತ್ತ ಸೇರಿ ಅಲ್ಲಲ್ಲಿ ಹಣ್ಣು, ಹೂವಿನ ವ್ಯಾಪಾರಿಗಳು ಕಂಡುಬಂದರು. ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಪೆಟ್ರೋಲ್ ಬಂಕ್​ಗಳು ಕಾರ್ಯನಿರ್ವಹಿಸಿದವು.

    ಅಲ್ಲಲ್ಲಿ ಬ್ಯಾರಿಕೇಡ್, ಪರಿಶೀಲನೆ: ದಿನಸಿ ಅಂಗಡಿ, ಹಾಲಿನ ಮಳಿಗೆಗಳು, ತರಕಾರಿ ಅಂಗಡಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಸಂಚಾರ ನಿಯಂತ್ರಿಸಲು ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ದ್ವಿಮುಖ ಸಂಚಾರವಿರುವ ನೆಹರೂ ರಸ್ತೆ, ಅಮೀರ್ ಅಹಮ್ಮದ್ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ, ಸವಳಂಗ ರಸ್ತೆ, ಡಿವಿಎಸ್ ರಸ್ತೆಗಳಲ್ಲಿ ಒಂದು ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಇದರಿಂದ ಒಂದೆಡೆ ಮಾರ್ಗದಲ್ಲೇ ವಾಹನಗಳು ಸಂಚರಿಸಿದವು. ಅನಗತ್ಯವಾಗಿ ಬಂದವರನ್ನು ಪೊಲೀಸರು ತಪಾಸಣೆ ನಡೆಸಿ ದಂಡ ವಿಧಿಸಿದರು.

    ರಸ್ತೆಗಿಳಿಯದ ಕೆಎಸ್ಸಾರ್ಟಿಸಿ ಬಸ್​ಗಳು: ಮೇ 19ರಂದು ಕೆಎಸ್ಸಾರ್ಟಿಸಿ ಬಸ್​ಗಳನ್ನು ಅಂತರ್​ಜಿಲ್ಲೆಗಳಿಗೆ ಓಡಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಕರೊನಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸ್ ಬಸ್​ಗಳ ಸಂಚಾರ ಸಹ ಬಂದ್ ಆಗಿತ್ತು. ಇದರಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಶಿವಮೊಗ್ಗದ ಕೆಎಸ್ಸಾರ್ಟಿಸಿ ವಿಭಾಗದ ನಾಲ್ಕು ಡಿಪೋದಿಂದ 85-90 ಬಸ್​ಗಳಿಗೆ ವಿವಿಧ ಜಿಲ್ಲೆಗಳಿಗೆ ಹಾಗೂ ಜಿಲ್ಲೆಯ ಒಳಗಿನ ತಾಲೂಕುಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಈ ಎಲ್ಲ ಬಸ್​ಗಳ ಸಂಚಾರ ಭಾನುವಾರ ಸ್ಥಗಿತಗೊಂಡಿತ್ತು. ಪ್ರತಿದಿನ ಬೆಂಗಳೂರಿಗೆ 40-50 ಬಸ್​ಗಳು ಸಂಚರಿಸುತ್ತಿದ್ದವು. ಸೋಮವಾರದಿಂದ ಯಥಾಪ್ರಕಾರ ಬಸ್​ಗಳು ನಿಗದಿತ ಅಂತತ ಜಿಲ್ಲೆಗಳಿಗೆ ಓಡಾಡಲಿವೆ ಎಂದು ವಿಭಾಗೀಯ ಸಂಚಾರ ಅಧಿಕಾರಿ ಸತೀಶ್ ತಿಳಿಸಿದ್ದಾರೆ.

    ಮಾಂಸದಂಗಡಿ ತೆರೆದಿದ್ದಕ್ಕೆ ಹಲವರ ಆಕ್ಷೇಪ: ಕರೊನಾ ಕರ್ಫ್ಯೂ ಘೊಷಿಸಿದ್ದರೂ ನಗರದಲ್ಲೆಡೆ ಮಾಂಸದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ರಸ್ತೆಗಳಿದಿದ್ದ ಶೇ.60 ಬೈಕ್​ಗಳು ಮಾಂಸ ಖರೀದಿಗೆಂದು ಬಂದಿರುವುದಾಗಿ ಹೇಳುತ್ತಿದ್ದರು. ಇದು ಸಂಚಾರ ಪೊಲೀಸರು ಸೇರಿ ಹಲವರಿಗೆ ಕಿರಿಕಿರಿ ಉಂಟು ಮಾಡಿತು. ರಂಜಾನ್ ಹಿನ್ನೆಲೆಯಲ್ಲಿ ಸರ್ಕಾರ ಚಿಕನ್ ಮತ್ತು ಮಟನ್ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿತ್ತು.

    ಬಿಹಾರಕ್ಕೆ ಹೊರಟ ವಲಸೆ ಕಾರ್ವಿುಕರು: ಶಿವಮೊಗ್ಗದಿಂದ 400ಕ್ಕೂ ಅಧಿಕ ವಲಸೆ ಕಾರ್ವಿುಕರು ಭಾನುವಾರ ರಾತ್ರಿ ಬಿಹಾರಕ್ಕೆ ಪ್ರಯಾಣ ಬೆಳೆಸಿದರು. ನಗರದಿಂದ 50 ಹಾಗೂ ಶಿಕಾರಿಪುರದಿಂದ 350 ವಲಸೆ ಕಾರ್ವಿುಕರು ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಮೇ 25ರ ಮಧ್ಯಾಹ್ನ 12ಕ್ಕೆ ವಿಶೇಷ ರೈಲಿನ ಮೂಲಕ ತವರಿಗೆ ಮರಳಲಿದ್ದಾರೆ. ಕಾರ್ವಿುಕರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಿತು.

    ಊಟಕ್ಕೂ ಪರದಾಟ: ಕರೊನಾ ಕರ್ಫ್ಯೂ ಇದ್ದ ಕಾರಣ ಹೋಟೆಲ್​ಗಳು ತೆರೆದಿರಲಿಲ್ಲ. ಇದರಿಂದ ಖಾಸಗಿ ಬಸ್ ನಿಲ್ದಾಣ ಸೇರಿ ವಿವಿಧೆಡೆ ಇದ್ದ ಕೆಲವರು ಊಟಕ್ಕೂ ಪರದಾಡುವಂತಾಯಿತು. ಇತ್ತ ಬಸ್​ಗಳು ಇಲ್ಲದೆ, ಅತ್ತ ಊಟವೂ ಇಲ್ಲದೆ ನಿಲ್ದಾಣದಲ್ಲೇ ಮಲಗಿದ್ದರು. ಮಕ್ಕಳು, ಮಡದಿ, ಹಿರಿಯರು ಜತೆಗಿದ್ದರು.

    ಬಿಕೋ ಎನ್ನುತ್ತಿದ್ದ ಪ್ರಮುಖ ರಸ್ತೆಗಳು: ಜನ ಹಾಗೂ ವಾಹನಗಳ ದಟ್ಟಣೆಯಿಂದ ಸದಾ ಗಿಜುಗುಡುತ್ತಿದ್ದ ಪ್ರಮುಖ ರಸ್ತೆಗಳು ಭಾನುವಾರ ಬಿಕೋ ಎನ್ನುತ್ತಿದ್ದವು. ಬಿಎಚ್ ರಸ್ತೆ, ಕುವೆಂಪು ರಸ್ತೆ, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಗಾಂಧಿಬಜಾರ್, ಸಾಗರ ರಸ್ತೆ, ಎನ್​ಟಿ ರಸ್ತೆ ಸೇರಿ ಹಲವೆಡೆ ವಾಹನಗಳ ಸಂಚಾರ ವಿರಳವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts