More

    ಮಲಪ್ರಭಾ ರಣಕೇಕೆ ಜನಜೀವನ ತಬ್ಬಿಬ್ಬು !

    ಬಾಗಲಕೋಟೆ: ಮಲಪ್ರಭಾ ನದಿ ಮತ್ತೆ ರಣಕೇಕೆ ಮುಂದುವರೆಸಿದೆ. ಇದಕ್ಕೆ ಬೆಣ್ಣೆಹಳ್ಳ ಸಾಥ್ ನೀಡಿದ್ದು, ಸಾಸುವೆ ಹಳ್ಳವೂ ಕೈಜೋಡಿಸಿದೆ. ಇದರಿಂದ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ, ಹುನಗುಂದ ತಾಲೂಕಿನ 60ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದು, ಸಾವಿರಾರು ಹೆಕ್ಟರ್ ಪ್ರದೇಶದ ಬೆಳೆಗಳು ನೀರಲ್ಲಿ ಮುಳುಗಿ ಹೋಗಿವೆ.
    2019ರಲ್ಲಿ ಶತಮಾನ ಕಂಡ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಮಲಪ್ರಭಾ ನದಿ ದಡವೂ ಇದೀಗ ಮತ್ತೊಮ್ಮೆ ಆ ದಿನಗಳನ್ನು ನೆನಪಿಸುವತ್ತ ರುದ್ರನರ್ತನ ನಡೆಸಿದೆ. ಸೋಮವಾರ ಮತ್ತು ಮಂಗಳವಾರ ಎರಡೂ ದಿನಗಳು ರಾತ್ರಿ ಪೂರಾ ವರುಣಾರ್ಭಟ ನಡೆದಿದ್ದು, ಬುಧವಾರ ಬೆಳಗ್ಗೆ ಅನೇಕ ಗ್ರಾಮಗಳಲ್ಲಿ ಮನೆಬಾಗಿಲಿಗೆ ಪ್ರವಾಹದ ನೀರು ಮುತ್ತಿಕ್ಕಿದೆ.
    ನೂರಾರು ಮನೆಗಳ ಒಳಗೆ ನೀರು ನುಗ್ಗಿದ್ದು, ಜನಜೀವನವನ್ನು ಸಂಪೂರ್ಣ ಬರ್ಬದ್ ಮಾಡಿದೆ. ಮನೆಯಲ್ಲಿ ನುಗ್ಗಿರುವ ನೀರು ಹೊರಹಾಕುವುದೋ, ಗಲ್ಲಿ ಕೆರೆಯಂತಾಗಿರುವ ಗಲ್ಲಿಯಲ್ಲಿ ಹೆಜ್ಜೆ ಹೇಗೆ ಹಾಕುವುದೋ ಅಥವಾ ಜಮೀನಿಗಳಿಗೆ ನೀರು ನುಗ್ಗಿ ಹಾಳಾಗುತ್ತಿರುವ ಬೆಳೆ ರಕ್ಷಣೆ ಮಾಡಿಕೊಳ್ಳಬೇಕೋ ಏನೊಂದು ತೋಚದೇ ಸಾವಿರಾರು ರೈತ ಕುಟುಂಬಗಳ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಈ ಮಧ್ಯ ನಿರಂತರ ಮಳೆಯಿಂದಾಗಿ ಮಣ್ಣಿನ ಮನೆಗಳಿಗೆ ಕುತ್ತು ಬಂದಿದ್ದು, ನೋಡ ನೋಡ್ತಿದ್ದಂತೆ ಗೋಡೆ, ಮೇಲ್ಛಾವಣೆ ಕುಸಿದು ಬೀಳುತ್ತಿವೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಜನರು ಬಿದ್ದ ಮನೆಗಳಲ್ಲಿ ವಾಸ ಮಾಡುವಂತಾಗಿದೆ.
    ಸೆ. 5 ರಂದು ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ 155 ಮನೆಗಳಿಗೆ ಹಾನಿ ಆಗಿರುವ ವರದಿ ಆಗಿತ್ತು. ಮಂಗಳವಾರ ರಾತ್ರಿಯೂ ಸಹ ಮಳೆ ಅಬ್ಬರಿಸಿದ್ದರಿಂದಾಗಿ ಮತ್ತೆ ಜಿಲ್ಲೆಯಲ್ಲಿ 218 ಮನೆಗಳಿಗೆ ಹಾನಿ ಆಗಿರುವ ಪ್ರಾಥಮಿಕ ವರದಿಯಾಗಿದೆ. ಮಲಪ್ರಭಾ ಬೋರ್ಗರೆಯುತ್ತಿರುವುದರಿಂದ ಗದಗ ಜಿಲ್ಲೆ ರೋಣ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ಮಧ್ಯ ಇರುವ ಬಾದಾಮಿ ತಾಲೂಕಿನ ಚೊಳಚಗುಡ್ಡದ ಬೃಹತ್ ಸೇತುವೆ ಸಂಪೂರ್ಣ ಮುಳುಗಿ ಹೋಗಿದ್ದು, ಸೇತುವೆ ಮೇಲೆ ಐದಾರು ಅಡಿ ಎತ್ತರದಲ್ಲಿ ನೀರು ದುಮ್ಮಿಕ್ಕುತ್ತಿದೆ. ಇದರಿಂದ ಗದಗ-ಬಾಗಲಕೋಟೆ ಸಂಪರ್ಕ ಬಂದ್ ಆಗಿದ್ದು, ವಾಹನ ಸವಾರರು ಬೇರೆ ಮಾರ್ಗದ ಮೂಲಕ ಸುತ್ತು ಹಾಕಿ ಬರುವಂತಾಗಿದೆ. ಮತ್ತೊಂದೆಡೆ ಗುಳೇದಗುಡ್ಡ ತಾಲೂಕಿನ ಶಿವಯೋಗ ಮಂದಿರ ಬಳಿಯ ಸೇತುವೆ, ಆಸಂಗಿ ಸೇತುವೆ ಸಂಪೂರ್ಣ ಮುಳುಗಿದ್ದು, ಹತ್ತಾರು ಗ್ರಾಮಗಳಿಗೆ ಸಂಪರ್ಕ ಬಂದ್ ಆಗಿದೆ.

    ಮನೆಬಾಗಿಲಿಗೆ ಅಪ್ಪಳಿಸಿದ ನೀರು
    ಮಲಪ್ರಭಾ ಮತ್ತು ಬೆಣ್ಣೆಹಳ್ಳ ಜೋಡಿಯಾಗಿ ಆರ್ಭಟಿಸುತ್ತಿರುವ ಪರಿಣಾಮ ಬುಧವಾರ ಬಾದಾಮಿ, ಗುಳೇದಗುಡ್ಡ, ಹುನಗುಂದ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಗಲ್ಲಿ ತುಂಬೆಲ್ಲ ನೀರು ರಭಸವಾಗಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೊಣಕಾಲು ಮಟ್ಟದ ನೀರಿನಲ್ಲಿ ಜನ ಜಾನುವಾರುಗಳು ನಡೆದಾಡಬೇಕಿದೆ. ಈ ಮಧ್ಯ ಹುಳುಹುಪ್ಪಡಿ ಭೀತಿ ಜನರನ್ನು ಕಾಡುತ್ತಿದೆ. ಬಾದಾಮಿ ತಾಲೂಕಿನ ಹೆಬ್ಬಳ್ಳಿ, ಕಾತರಕಿ, ಖ್ಯಾಡ, ಮುಮರಡ್ಡಿಕೊಪ್ಪ, ಜಕನೂರ, ಚೊಳಚಗುಡ್ಡ, ಗುಳೇದಗುಡ್ಡ ತಾಲೂಕಿನ ಅಲ್ಲೂರ ಎಸ್ಪಿ, ಮಂಗಳಗುಡ್ಡ, ಲಾಯಲಗುಂದಿ ಹಾಗೂ ಹುನಗುಂದ ತಾಲೂಕಿನ ಕಜಗಲ್ಲ, ಕೆಂಗಲ್, ವರಗೋಡದಿನ್ನಿ, ಹೂವನೂರ, ನಂದನೂರ, ಗಂಜಿಹಾಳ ಗ್ರಾಮಗಳಿಗೆ ನೀರು ಬಂದಿದೆ.
    ಹಾಗೆಯೇ ನದಿ ಪಾತ್ರದಿಂದ ಕೆಲವು ಕಡೆಗೆ ಒಂದು, ಎರಡು ಕಿ.ಮೀ. ವ್ಯಾಪ್ತಿ ವರೆಗೂ ನೀರು ಆವರಿಸಿದ್ದರಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಇರುಳ್ಳಿ, ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಹತ್ತಿ ಮತ್ತಿತರ ಬೆಳೆಗಳು ಮುಳುಗಿವೆ. ಕೆಲವು ಕಡೆಗೆ ಜಮೀನಿನಲ್ಲಿ ಕಿತ್ತುಹಾಕಿದ್ದ ಈರುಳ್ಳಿ ನೀರು ನುಗ್ಗಿ ಕೊಚ್ಚಿ ಹೋಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts