More

    ಮೇಲುಕೋಟೆ ಕ್ಷೇತ್ರಕ್ಕೆ ತಂದಿರುವ ಅನುದಾನದ ಮಾಹಿತಿ ನೀಡಿ

    ಪಾಂಡವಪುರ: ಕಾಂಗ್ರೆಸ್ ಸರ್ಕಾರದಿಂದ ಮೇಲುಕೋಟೆ ಕ್ಷೇತ್ರಕ್ಕೆ ತಂದಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಗೆ ಮನವಿ ಸಲ್ಲಿಸಿದರು.


    ಪಟ್ಟಣದ ತಾಲೂಕು ಕಚೇರಿಯ ಶಾಸಕರ ಕಚೇರಿಗೆ ಭೇಟಿ ನೀಡಿದ ಕಾರ್ಯಕರ್ತರು ಶಾಸಕರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು. ಬಳಿಕ ಡಾ.ಇಂದ್ರೇಶ್ ಮಾತನಾಡಿ, ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಮತ್ತು ಬೆಂಬಲಿತ 136 ಶಾಸಕರು ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಈವರೆಗೂ ತಂದಿರುವ ಅನುದಾನವೆಷ್ಟು? ಆ ಅನುದಾನದಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರವನ್ನು ಕ್ಷೇತ್ರದ ಜನತೆಗೆ ವಿವರಿಸುವಂತೆ ಮತದಾರರಿಗೆ ಉತ್ತರಿಸಿ ಅಭಿಯಾನವನ್ನು ಬಿಜೆಪಿ ಕೈಗೊಂಡಿದೆ. ಈ ಕಾರ್ಯಕ್ರಮ ಇಡೀ ರಾಜ್ಯಾದ್ಯಂತ ನಡೆಯಲಿದೆ ಎಂದು ತಿಳಿಸಿದರು.


    ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಲವು ಭರವಸೆಗಳನ್ನು ಶಾಸಕರು ವೈಯಕ್ತಿಕವಾಗಿ ನೀಡಿದ್ದು, ಆ ಭರವಸೆಗಳ ಈಡೇರಿಕೆಗೆ ಅನುಗುಣವಾಗಿ ರೂಪಿಸಿರುವ ಯೋಜನೆಗಳನ್ನು ವಿವರಿಸಬೇಕು. ಬರ ಪರಿಹಾರದಡಿ ರೈತರಿಗೆ ಸಿಕ್ಕಿರುವ ಮೊತ್ತದ ವಿವರ, ನಿರುದ್ಯೋಗ ಸಮಸ್ಯೆಗೆ ನಿವಾರಣೆಗಾಗಿ ಉದ್ಯೋಗ ಸೃಷ್ಟಿ ಮಾಡಲಾಗಿದೆಯೇ? ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಯಾವ್ಯಾವ ಯೋಜನೆ ರೂಪಿಸಲಾಗಿದೆ ಎಂಬುದರ ಬಗ್ಗೆ ಸ್ಥಳೀಯ ಶಾಸಕರು ಮತದಾರರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.


    ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಅರ್ಥ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇದೆ ಎಂದಾಗುತ್ತದೆ. ಹೀಗಾಗಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಹಣ್ಣು, ತರಕಾರಿ ಶೀತಲೀಕರಣ ಘಟಕ ನಿರ್ಮಾಣ ಸೇರಿದಂತೆ ಕ್ಷೇತ್ರದ ಹಲವಾರು ಸಮಸ್ಯೆಗಳು ಮತ್ತು ಅನುದಾನದ ಬಗ್ಗೆ ಶಾಸಕರು ಕ್ಷೇತ್ರದ ಮತದಾರರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.


    ಬಿಜೆಪಿ ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ಕಾರ್ಯದರ್ಶಿ ನೀಲನಹಳ್ಳಿ ಧನಂಜಯ, ಮುಖಂಡರಾದ ರಾಜೀವ್ ತಮ್ಮಣ್ಣ, ಕೆನ್ನಾಳು ಚಿಕ್ಕಣ್ಣ, ಕಡಬ ಪುಟ್ಟರಾಜು, ಬಳಿಘಟ್ಟ ಅಶೋಕ್, ಚಿಕ್ಕಮರಳಿ ನವೀನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts