More

    ಮರುಕಳಿಸಲಿದೆ ರಂಗಭೂಮಿ ವೈಭವ -ಬಾ.ಮ. ಬಸವರಾಜಯ್ಯ. -ನಾಟಕ ಪ್ರದರ್ಶನ ಸಮಾರೋಪ 

    ದಾವಣಗೆರೆ :ಮುಂಬರುವ ದಿನಗಳಲ್ಲಿ ರಂಗಭೂಮಿ ಗತವೈಭವ ಮರುಕಳಿಸಲಿದೆ ಎಂದು ಮಹಲಿಂಗರಂಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾ.ಮ. ಬಸವರಾಜಯ್ಯ ಹೇಳಿದರು.
    ತೆಗ್ಗಿಹಳ್ಳಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದಿಂದ ನಗರದ ಪಿ.ಬಿ. ರಸ್ತೆಯ ಪಿಎಂಪಿಎಸ್ ಕಾಂಪೌಂಡ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಳೆಗಾರ ಹನುಮವ್ವ ಸಾಮಾಜಿಕ ನಾಟಕದ 101ನೇ ಪ್ರದರ್ಶನ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪ್ರಸಕ್ತ ದಿನಗಳಲ್ಲಿ ನಾಟಕರಂಗಕ್ಕೆ ಕುತ್ತು ಬರಲು ಹಲವು ಕಾರಣಗಳಿವೆ. ಆದರೆ, ಕೃತಕ ಬದುಕಿನಿಂದ ಬೇಸತ್ತಿರುವ ಜನರು ಮತ್ತೆ ನಾಟಕಗಳತ್ತ ಮುಖ ಮಾಡಲಿದ್ದಾರೆ ಎಂದು ತಿಳಿಸಿದರು.
    ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಮೂರು ನಾಟಕ ಕಂಪನಿಗಳ ನಾಟಕಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದವು. ಅನೇಕ ನಾಟಕ ಕಂಪನಿಗಳ ಆರ್ಥಿಕ ಮುಗ್ಗಟ್ಟು ಹೋಗಲಾಡಿಸಿದ್ದು ಇದೇ ನಗರ ಎಂದು ಹೆಮ್ಮೆ ವ್ಯಕ್ತಪಡಿಸಿದರು.
    ರಂಗಭೂಮಿಗೆ ನಗರದ ಚಿಂದೋಡಿ ವೀರಪ್ಪ, ಚಿಂದೋಡಿ ಲೀಲಾ ಹಾಗೂ ಕಂಚಿಕೇರಿ ಶಿವಣ್ಣ ಮೊದಲಾದವರ ಕೊಡುಗೆ ಅಪಾರವಾಗಿದೆ. ವೃತ್ತಿ ರಂಗಭೂಮಿ ಕಲಾವಿದರಲ್ಲಿ ಕಲೆ ರಕ್ತಗತವಾಗಿ ಬಂದಿದೆ. ಸರಳ ಹಾಗೂ ಸ್ಪಷ್ಟ ಕನ್ನಡ ಕಲಿಯಲು ಕಂಪನಿ ನಾಟಕಗಳಿಗೆ ಬರಬೇಕು ಎಂದರು.
    ರಂಗಕರ್ಮಿ ಬಸವರಾಜ ಐರಣಿ ಮಾತನಾಡಿ, ಸಮಾಜದ ಸ್ವಾಸ್ಥೃ ಕಾಪಾಡುವ ಜತೆಗೆ ಜನರ ಬದುಕನ್ನು ರೂಪಿಸುವ ಶಕ್ತಿ ರಂಗಭೂಮಿಗಿದೆ. ಚಲನಚಿತ್ರ ಹಾಗೂ ದೂರದರ್ಶನದ ಹಾವಳಿ ನಡುವೆಯೂ ಬಳೆಗಾರ ಹನುಮವ್ವ ನಾಟಕ ಶತದಿನ ಕಂಡಿರುವುದು ಹೆಗ್ಗಳಿಕೆ ಎಂದು ಹೇಳಿದರು.
    70-80ರ ದಶಕದಲ್ಲಿ ಸುಮಾರು 120 ವೃತ್ತಿ ನಾಟಕ ಕಂಪನಿಗಳಿದ್ದವು. ಇಂದು ಇವುಗಳ ಸಂಖ್ಯೆ 16ಕ್ಕೆ ಇಳಿದಿದೆ. ಗುಬ್ಬಿ ನಾಟಕ ಕಂಪನಿಯ ನಂತರ ನಗರದ ಕೆಬಿಆರ್ ಡ್ರಾಮಾ ಕಂಪನಿ ನೂರು ವರ್ಷಗಳತ್ತ ಮುನ್ನಡೆದಿರುವುದು ಹಿರಿಮೆ. ಪ್ರತಿಯೊಬ್ಬರೂ ನಾಟಕ ಕಲೆಗೆ ಪ್ರೋತ್ಸಾಹ ನೀಡಬೇಕು. ರಂಗಭೂಮಿ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ವೃದ್ಧಿಸುವಂತಾಗಲಿ ಎಂದು ಆಶಿಸಿದರು.
    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಲೂರು ನಿಂಗರಾಜ್ ಮಾತನಾಡಿ, ತಮ್ಮ ನೋವುಗಳ ನಡುವೆಯೂ ಜನರನ್ನು ನಗಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ರಂಗಭೂಮಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್, ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಪತ್ರಕರ್ತ ಸುರೇಶ್ ಕುಣೆಬೆಳಕೆರೆ, ನಾಟಕದ ಕರ್ತೃ ಮಂಜುನಾಥ ಕುಂದೂರು, ನಾಟಕ ಕಂಪನಿ ಮಾಲೀಕ ಖತಾಲಸಾಬ ಆರ್. ಬಣಗಾರ, ಸಂಚಾಲಕಿ ಆಶಾರಾಣಿ ಬಿಜಾಪುರ, ವ್ಯವಸ್ಥಾಪಕ ಮಹಾಂತೇಶ್ ಬಿರಾದಾರ್ ಇದ್ದರು. ಕಲಾವಿದ ಐರಣಿ ಚಂದ್ರು ಸ್ವಾಗತಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts