More

    ಮರೀಚಿಕೆಯಾಗುತ್ತಿದೆ ಜಾಲವಾಡಗಿ ಏತ ನೀರಾವರಿ

    ಮುಂಡರಗಿ: ತುಂಗಭದ್ರಾ ನದಿಯಿಂದ ವಿವಿಧ ಕೆರೆಗಳನ್ನು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆ ವಿಳಂಬವಾಗುತ್ತಿದ್ದು, ಈ ಭಾಗದ ರೈತರ ಹಲವಾರು ವರ್ಷಗಳ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

    ಜಾಲವಾಡಗಿ ಏತ ನೀರಾವರಿ ಯೋಜನೆ ಆರಂಭವಾದರೆ ಮುಂಡರಗಿ, ಶಿರಹಟ್ಟಿ ಮತ್ತು ಗದಗ ತಾಲೂಕಿನ ಅಂದಾಜು 20 ಕೆರೆಗಳನ್ನು ತುಂಬಿಸಬಹುದು. ಕೆರೆಗಳು ತುಂಬಿದರೆ ಅಂತರ್ಜಲ ವೃದ್ದಿಯಾಗಿ ಕೊಳವೆಬಾವಿ, ಬಾವಿಗಳಲ್ಲಿ ನೀರು ದೊರೆಯುತ್ತದೆ. ಜನ, ಜಾನುವಾರುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಖ್ಯವಾಗಿ ಒಣ ಬೇಸಾಯಿ ಮಾಡಿ ಸಂಕಷ್ಟ ಅನುಭವಿಸಿದ ರೈತರು ನೀರಾವರಿಯ ಭಾಗ್ಯ ಕಾಣಲಿದ್ದಾರೆ.

    ತಾಲೂಕಿನ ಮುರುಡಿ, ಕೆಲೂರ, ಚಿಕ್ಕವಡ್ಡಟ್ಟಿ ಕೆರೆಗಳನ್ನು ತುಂಬಿಸಬೇಕು ಎಂದು ಈ ಭಾಗದ ರೈತರು ಹಲವಾರು ಸಲ ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಕೂಡ ಸಲ್ಲಿಸುತ್ತಾ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿದ್ದ ಹಿಂದಿನ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಹಾಗೂ ಜಿ.ಎಸ್. ಪಾಟೀಲರು 2017-18ರಲ್ಲಿ ವಿವಿಧ ಕೆರೆಗಳನ್ನು ತುಂಬಿಸಲು 110 ಕೋಟಿ ರೂ. ವೆಚ್ಚದಲ್ಲಿ ಜಾಲವಾಡಗಿ ಏತ ನೀರಾವರಿ ಯೋಜನೆ ರೂಪಿಸಿ ಸರ್ಕಾರಕ್ಕೆ ವಿಸõತವಾದ ವರದಿ ಸಲ್ಲಿಸಿದ್ದರು. ಆದರೆ, ಯೋಜನೆಗೆ ಇದುವರೆಗೂ ಮಂಜೂರಾತಿ ದೊರೆತಿಲ್ಲ.

    ತುಂಗಭದ್ರಾ ನದಿ ಮೂಲಕ ಜಾಲವಾಡಗಿ ಕುಡಿಯುವ ನೀರು ಪೂರೈಕೆ ಘಟಕದಲ್ಲಿ ಪ್ರತ್ಯೇಕ ಜಾಕ್​ವೆಲ್ ನಿರ್ವಿುಸಿ ಅಲ್ಲಿಂದ ಮುಂಡರಗಿ ತಾಲೂಕಿನ ಹಮ್ಮಿಗಿ, ಕಟ್ಟೆ ಬಸಣ್ಣ ಕೆರೆ, ಮುರುಡಿ, ಕೆಲೂರ, ಚಿಕ್ಕವಡ್ಡಟ್ಟಿ, ಶಿರಹಟ್ಟಿ ತಾಲೂಕಿನ ಕಡಕೋಳ, ಜಲ್ಲಿಗೇರಿ, ಹೊಸಳ್ಳಿ, ಮಾಗಡಿ, ಗದಗ ತಾಲೂಕಿನ ಮಾಲಿಂಗಪುರ, ಸೊರಟೂರ, ಅತ್ತಿಕಟ್ಟಿ, ನಂಭಾಪುರ, ನಾಗಾವಿ, ಹರ್ತಿ, ಹೊಸೂರ, ಶೀತಲಹರಿ, ಮುಳಗುಂದ, ಕುರ್ತಕೋಟಿ ಸೇರಿ ಒಟ್ಟು 20 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಸರ್ಕಾರದಿಂದ ಇದುವರೆಗೂ ಯೋಜನೆಗೆ ಮಂಜೂರಾತಿ ಸಿಗದೇ ವಿಳಂಬವಾಗಿದೆ.

    ಭರವಸೆ ಈಡೇರಿಸಲಿ: ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹಾಗೂ ರೋಣ ಶಾಸಕ ಕಳಕಪ್ಪ ಬಂಡಿ ಅವರು ಚುನಾವಣೆ ಪೂರ್ವದಲ್ಲಿ ಮುರುಡಿ, ಕೆಲೂರ, ಚಿಕ್ಕವಡ್ಡಟ್ಟಿ, ಮತ್ತಿತರ ಕೆರೆ ತುಂಬಿಸುವ ಭರವಸೆ ನೀಡಿದ್ದರು. ಪ್ರಾರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದುದರಿಂದ ಶಾಸಕರ ಪ್ರಯತ್ನ ಸಫಲವಾಗಿರಲಿಲ್ಲ. ಈಗ ಬಿಜೆಪಿ ಸರ್ಕಾರವಿದ್ದು, ಇಬ್ಬರೂ ಶಾಸಕರು ಸೇರಿ ಜಾಲವಾಡಗಿ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

    ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಬರದ ಛಾಯೆ ಅನುಭವಿಸುತ್ತಿದ್ದೇವೆ. ತುಂಗಭದ್ರಾ ನದಿಯಿಂದ ಜಾಲವಾಡಗಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವಂತೆ ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆರೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗಿ ರೈತರ ಬೋರ್​ವೆಲ್, ಬಾವಿಗಳಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಆದಷ್ಟು ಬೇಗ ಯೋಜನೆ ಪ್ರಾರಂಭಿಸಲು ಮುಂದಾಗಬೇಕು. ಇದಕ್ಕೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.
    | ಎನ್.ಎಂ. ವಾರದ, ಲೋಕನಗೌಡ ಪಾಟೀಲ, ಮಲ್ಲಿಕಾರ್ಜುನ ಹಣಜಿ, ರೈತರು

    ಯೋಜನೆ ಪ್ರಾರಂಭಿಸುವ ಕುರಿತಂತೆ ಸರ್ಕಾರಕ್ಕೆ ವಿಸõತವಾದ ವರದಿ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆಯಿಂದ ಯೋಜನೆಗೆ ಅನುಮೋದನೆ ದೊರೆತಿಲ್ಲ. ಈ ಕುರಿತು ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುತ್ತದೆ.
    | ಎಸ್.ಬಿ. ಮಲ್ಲಿಗವಾಡ, ಇಇ ಸಿಂಗಟಾಲೂರ ಏತ ನೀರಾವರಿ

    ಜಾಲವಾಡಗಿ ಏತ ನೀರಾವರಿ ಯೋಜನೆ ಆರಂಭಿಸುವ ಪ್ರಸ್ತಾವ ಈಗ ಸರ್ಕಾರದ ಹಂತದಲ್ಲಿದೆ. ಆದಷ್ಟು ಬೇಗ ಯೋಜನೆ ಜಾರಿಗೊಳಿಸುವ ಮೂಲಕ ವಿವಿಧ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು.
    | ರಾಮಣ್ಣ ಲಮಾಣಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts