More

    ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

    ಯಲ್ಲಾಪುರ: ತಾಲೂಕಿನಲ್ಲಿ ಮರಳು ಮಾಫಿಯಾ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ಆಗ್ರಹಿಸಿದ್ದಾರೆ.

    ಈ ಕುರಿತು ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಯಲ್ಲಾಪುರ ತಾಲೂಕಿನ ಅರಬೈಲ್, ಗುಳ್ಳಾಪುರ, ಗಡಿಭಾಗದ ರಾಮನಗುಳಿ ಹಾಗೂ ಹಿಲ್ಲೂರು ಪ್ರದೇಶದಲ್ಲಿ ನದಿ ಹಾಗೂ ಹಳ್ಳದ ಬಳಿಯಿಂದ ಅಕ್ರಮವಾಗಿ ತೆಗೆದ ಮರಳನ್ನು ಸಾಗಾಟ ಮಾಡುತ್ತಿರುವ ಕಾಯಕ ಅವ್ಯಾಹತವಾಗಿ ನಡೆಯುತ್ತಿದೆ. ಈ ಪ್ರದೇಶಗಳಿಂದ ಸಾಗಿಸುವ ಉಸುಕನ್ನು ಹೊನ್ನಾವರ ತಾಲೂಕಿನ ಜಲವಳ್ಳಿ, ನೀರಹೊಂಡ ಪ್ರದೇಶದ್ದೆಂದು ಸುಳ್ಳು ಹೇಳಿ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿರುವ ಮರಳು ಮಾಫಿಯಾ ದಂಧೆ ನಡೆಯುತ್ತಿದೆ. ಒಂದು ಲೋಡ್ ಮರಳು ಹಾಗೂ ಸಾಗಿಸುವ ವೆಚ್ಚ ಸೇರಿ 10ರಿಂದ 11 ಸಾವಿರ ರೂ. ತಗುಲುತ್ತದೆ. ಆದರೆ, ಅದನ್ನು ಯಲ್ಲಾಪುರದಲ್ಲಿ 13ರಿಂದ -15 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.

    ಜಿಲ್ಲಾಡಳಿತ ಉಸುಕು ತೆಗೆಯುವುದನ್ನು ನಿರ್ಬಂಧಿಸಿದರೂ, ಪೊಲೀಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಒಳದಾರಿಗಳ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಉಸುಕು ಸಾಗಾಟ ಮಾಡಲಾಗುತ್ತಿದೆ. ಈ ರೀತಿ ತೆಗೆದ ಉಸುಕನ್ನು ಯಲ್ಲಾಪುರದ ತಟಗಾರ್ ಕ್ರಾಸ್ ಬಳಿ, ನಾಯಕನಕೆರೆ , ಮುಂಡಗೋಡ ರಸ್ತೆಯ ಕೆಲವು ಪ್ರದೇಶದಲ್ಲಿ ಹಾಗೂ ಇಡಗುಂದಿ ಭಾಗದಲ್ಲಿ ದಾಸ್ತಾನು ಮಾಡಲಾಗುತ್ತಿದೆ.

    ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಆಗಬೇಕು. ಅಕ್ರಮವಾಗಿ ತೆಗೆದು ದಾಸ್ತಾನು ಮಾಡಿದ ಮರಳನ್ನು ಹಾಗೂ ಸಾಗಾಟ ಮಾಡಿದ ವಾಹನಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಸುಕಿನ ಕೊರತೆ ಉಂಟಾಗಿರುವುದರಿಂದ ಕೂಡಲೆ ಸರ್ಕಾರವು ಈ ಬಗೆಗೆ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts