More

    ಮರಳುಸಿದ್ಧರ ವಿಚಾರ ಬದುಕಿಗೂ ಹತ್ತಿರವಾಗಿವೆ

    ಚಿತ್ರದುರ್ಗ: ಶ್ರೀ ವಿಶ್ವಬಂಧು ಮರಳುಸಿದ್ಧರ ವಿಚಾರಗಳು ಇವತ್ತಿಗೂ ನಮ್ಮೆಲ್ಲರ ಬದುಕಿಗೆ ಬಹಳ ಹತ್ತಿರವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಸಿರಿಗೆರೆಯಲ್ಲಿ ಶುಕ್ರವಾರ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣಾದಿ ಶಿವಶರಣರ ಸಮಕಾಲೀನರಾದ ಮರುಳಸಿದ್ಧರು ವಿಚಾರಧಾರೆಗಳ ಮೂಲಕ ಸಿಡಿದೆದ್ದು, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ಸಮಸ್ಯೆಗಳಿಗೆ, ಬದುಕಿನ ಜಂಜಾಟಗಳಿಗೆ ಅವರ ವಿಚಾರಗಳಲ್ಲಿ ಪರಿಹಾರವಿದೆ ಎಂದರು.

    ಈ ಪರಂಪರೆ ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಶ್ರೀ, ಸತ್ಯ, ಸಮಾನತೆ ಹಾಗೂ ಭಕ್ತರ ಸ್ವಾಭಿಮಾನದ ಬದುಕಿಗಾಗಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಪರ ಗಟ್ಟಿಯಾಗಿ ನಿಲ್ಲುವ ಅವರ ದಿಟ್ಟ ಪರಂಪರೆಯನ್ನು ಡಾ.ಗುರುಗಳು ಮುಂದುವರಿಸಿದ್ದಾರೆ. ಭಕ್ತರ ಭಾವನೆಗಳಿಗೆ ಸ್ಪಂದಿಸುತ್ತಿರುವ ಪೂಜ್ಯರು ದೇಶದಲ್ಲಿ ಎಲ್ಲಾದರೂ ಇದ್ದರೆ, ಅಧ್ಯಾತ್ಮಿಕ ನಾಯಕ, ಸಿರಿಗೆರೆ ಶ್ರೀ ಎಂದು ಬಣ್ಣಿಸಿದರು.

    ಹಿಂದೊಮ್ಮೆ ಬರಗಾಲ ಬಂದಿದ್ದಾಗ ನಾಡಿನಾದ್ಯಂತ ಜಾನುವಾರಗಳಿಗೆ ಮೇವು ಹಂಚಿದ ಕೀರ್ತಿ ಇವರದ್ದಾಗಿದೆ. ಸಂವೇದನಾಶೀಲ ಚಿಂತನೆಯ ಶ್ರೀಗಳು ಮಳೆ-ಬೆಳೆ ಉತ್ತಮವಾಗಿ ಆಗಲೆಂದು ರೈತರ ಮುಖದಲ್ಲಿ ನಗು ಮೂಡುವಂತೆ ಆರ್ಶೀವದಿಸಲಿ ಎಂದು ಕೋರಿದರು. ಮತ್ತೆ ಆವರಿಸಿರುವ ಬರಗಾಲ ಹಿನ್ನೆಲೆ ಮಹೋತ್ಸವ ಸರಳ ಆಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಶ್ವವನ್ನಾಳುವ ಶಕ್ತಿಯಲ್ಲಿ ನಾವಿಂದು ಬದಲಾವಣೆ ಕಾಣುತ್ತಿದ್ದೇವೆ. ಭೂಮಿ, ಬಂಡವಾಳದ ಬದಲು ಜ್ಞಾನವಿಂದು ಜಗತನ್ನು ಆಳುತ್ತಿದೆ. ಇದನ್ನರಿತ ಶ್ರೀಗಳು ಸರ್ಕಾರಗಳಿಗಿಂತ ಮೊದಲೇ ಜನರಲ್ಲಿ ಜ್ಞಾನದ ಮಹತ್ವದ ಅರಿವಿಗೆ ನಿರಂತರ ಪ್ರಯತ್ನಿಸುತ್ತಿದ್ದಾರೆ. ನಾನು ಇಂಜಿನಿಯರ್ ಆಗಿದ್ದರೂ ಕಂಪ್ಯೂಟರ್ ಬಳಕೆಗೆ ಹಿಂದೇಟು ಹೊಡೆಯುತ್ತಿದ್ದರೆ, ಶ್ರೀಗಳು ಅದರಲ್ಲಿ ಪರಿಣಿತಿ ಸಾಧಿಸಿ, ಬೆಳೆ ವಿಮೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ರೈತರಿಗೆ ನೆರವಾಗಿದ್ದಾರೆ. ಈ ಕಾರ್ಯ ದೇಶದಲ್ಲಿ ಎಲ್ಲೂ ಆಗಿಲ್ಲ ಎಂದು ವರ್ಣಿಸಿದರು.

    ಪೂಜ್ಯರು ಜ್ಞಾನಿ-ವಿಜ್ಞಾನಿಗಳೂ ಆಗಿದ್ದ್ದಾರೆ. ಆಡಳಿತಗಾರರಿಗೆ ಇವರ ಮಾರ್ಗದರ್ಶನ ಬೇಕಿದೆ. ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸುವ ಚೈತನ್ಯ ಇವರಲ್ಲಿದೆ. ಸೌಮ್ಯವಾಗಿದ್ದರೂ ವಿಚಾರದಲ್ಲಿ ಗಟ್ಟಿಯಾಗಿರಬೇಕು, ಧ್ವನಿ ಎತ್ತರಿಸುವ ಬದಲು ನಮ್ಮ ಜ್ಞಾನವನ್ನು ಎತ್ತರಿಸಿಕೊಳ್ಳಬೇಕೆಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

    ಕುವೆಂಪು ಮತ್ತು ವಿಶ್ವಮಾನವ ಕುರಿತು ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಗುರು ಮಹಿಮೆ ಕುರಿತು ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿದರು. ಇದೇ ವೇಳೆ ಪ್ಯಾರಿಸ್‌ನ ಪ್ರೊ.ಪಿಯರ್ ಸಿಲ್ವನ್ ಫಿಲಿಯೋಜಾ, ವಸುಂಧರಾ ಫಿಲಿಯೋಜಾ, ಇಸ್ರೇಲ್‌ನ ಪ್ರೊ.ಗಿಲ್‌ಬೆನ್‌ಹೆರುಟ್, ವೀರ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಪಾಲಕರಾದ ಎಂ.ವೆಂಕಟೇಶ್ ಮತ್ತು ಕೆ.ಪಿ.ಅನುರಾಧ ಅವರನ್ನು ಸನ್ಮಾನಿಸಲಾಯಿತು.

    ಸಿರಿಗೆರೆ ಶ್ರೀಮದ್‌ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಶಾಸಕರಾದ ಡಾ.ಎಂ.ಚಂದ್ರಪ್ಪ, ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಶಿವಕುಮಾರ್, ಶಿವ ಗಂಗಾ ಶ್ರೀನಿವಾಸ್, ಡಾ.ಟಿ.ಜಿ.ರವಿಕುಮಾರ್, ನೀರಾವರಿ ಇಲಾಖೆ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ ಬಿ.ಗುಂಗೆ ಇತರರಿದ್ದರು. ಸಿರಿಗೆರೆ ಅಕ್ಕನಬಳಗದ ಸದಸ್ಯರು ಹಾಗೂ ತೋಟಪ್ಪ ಉತ್ತಂಗಿ ವಚನ ಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts