More

    ಮರಳಿನ ದಂಧೆಗೆ ಮರುಳಾದರೆ ಯುವಕರು?

    ರಾಣೆಬೆನ್ನೂರ: ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಕೊಚ್ಚಿ ಹೋಗಿರುವ ಇಬ್ಬರು ಯುವಕರು ಮರಳಿನ ಆಸೆಗೆ ಬಿದ್ದು ಬಲಿಯಾದರೆ?

    ತಾಲೂಕಿನ ತುಂಗಭದ್ರಾ ನದಿಪಾತ್ರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಎತ್ತಿನಬಂಡಿ ಮೂಲಕ ಮರಳು ತಂದು ಒಂದು ಬಂಡಿಗೆ 1500ರಿಂದ 1600 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಅಕ್ರಮ ಹಣದ ಆಸೆಗೆ ಬಿದ್ದು ಯುವಕರಿಬ್ಬರು ಸೋಮವಾರ ಬಲಿಯಾದರೆ ಎಂಬ ಪ್ರಶ್ನೆ ಉದ್ಭವಿಸಿದೆ.

    ತಾಲೂಕಿನ ಅರೇಮಲ್ಲಾಪುರ ಗ್ರಾಮದ ಜಗದೀಶ ಐರಣಿ (22) ಹಾಗೂ ಬೆಟ್ಟಪ್ಪ ಮೆಳ್ಳಿ (23) ಎಂಬ ಯುವಕರು ಹಾಗೂ ಇತರ ಏಳೆಂಟು ಜನರು ಸೇರಿ ಎತ್ತಿನಬಂಡಿ ಮೂಲಕ ಸೋಮವಾರ ಬೆಳಗಿನ ಜಾವ ಮರಳು ತರಲು 7 ಕಿ.ಮೀ. ದೂರದಲ್ಲಿರುವ ಕೋಣನತಂಬಗಿ ಬಳಿಯ ತುಂಗಭದ್ರಾ ನದಿಗೆ ತೆರಳಿದ್ದರು.

    ಏಕಾಏಕಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ದಡದಲ್ಲಿದ್ದ ಕೆಲವರು ಓಡಿ ಬಂದಿದ್ದಾರೆ. ಕ್ಷಣಾರ್ಧದಲ್ಲಿಯೇ ಸುತ್ತಲೂ ನೀರು ಆವರಿಸಿದ್ದರಿಂದ ದಡ ಸೇರಲು ಸಾಧ್ಯವಾಗದೆ ಜಗದೀಶ ಐರಣಿ ಹಾಗೂ ಬೆಟ್ಟಪ್ಪ ಮೆಳ್ಳಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

    ಆದರೆ, ಮೃತರ ಕುಟುಂಬಸ್ಥರು ‘ನಮ್ಮ ಮಕ್ಕಳು ಎತ್ತಿನ ಮೈ ತೊಳೆಯಲು ನದಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ’ ಎಂದು ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟಪ್ಪನಿಗೆ ಮದುವೆಯಾಗಿ ಒಂದು ವರ್ಷವಾಗಿದೆ. ಜಗದೀಶನಿಗೆ ಇನ್ನೂ ಮದುವೆ ಆಗಿಲ್ಲ. ಬೆಳ್ಳಂಬೆಳಗ್ಗೆ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿರುವ ಸುದ್ದಿ ತಿಳಿದ ಕುಟುಂಬಸ್ಥರು ಗೋಳಾಡುತ್ತಿದ್ದಾರೆ.

    ಜಗದೀಶ ಹಾಗೂ ಬೆಟ್ಟಪ್ಪ ಬೆಳೆಸಿದ್ದ ಎತ್ತುಗಳನ್ನು ಕಳೆದ ವಾರ 80 ಸಾವಿರ ರೂಪಾಯಿಗೆ ರೈತರೊಬ್ಬರು ಕೇಳಿದ್ದರು. ಆದರೆ, 1 ಲಕ್ಷ ರೂಪಾಯಿ ಬೆಲೆಬಾಳುವ ಎತ್ತುಗಳನ್ನು 80 ಸಾವಿರ ರೂಪಾಯಿಗೆ ಕೊಡುವುದಿಲ್ಲ ಎಂದಿದ್ದರು. ಆದರೀಗ ಪ್ರೀತಿಯಿಂದ ಸಾಕಿದ ಎತ್ತುಗಳೂ ಜೀವಕಳೆದುಕೊಂಡಿವೆ.

    ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ: ರಾಣೆಬೆನ್ನೂರ ತಾಲೂಕಿನ ಚೌಡಯ್ಯದಾನಪುರ, ಹರನಗಿರಿ, ಕೋಣನತಂಬಗಿ, ಉದಗಟ್ಟಿ ಗ್ರಾಮ ಸೇರಿ ನದಿಪಾತ್ರಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಪ್ರತಿನಿತ್ಯವೂ ಬೆಳಗಿನ ಜಾವ ಎತ್ತಿನಬಂಡಿ ಮೂಲಕ ಮರಳು ಸಾಗಣೆ ದಂಧೆ ನಡೆಯುತ್ತಲೇ ಇದೆ. ಈ ಬಗ್ಗೆ ಹಾವೇರಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸದಿದ್ದರೆ ಇಂತಹ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ ಎನ್ನುತ್ತಾರೆ ಜನರು.

    ಯುವಕರು ಅರೇಮಲ್ಲಾಪುರದಿಂದ ಇಲ್ಲಿಗೆ ಏಕೆ ಬಂದಿದ್ದರು ಎಂಬುದು ಮುಖ್ಯವಲ್ಲ. ಕೊಚ್ಚಿ ಹೋಗಿರುವ ಅವರು ದೊರಕಬೇಕು. ಈ ಬಗ್ಗೆ ಈಗಾಗಲೇ ಬಳ್ಳಾರಿ ಜಿಲ್ಲಾಡಳಿತಕ್ಕೂ ಮಾಹಿತಿ ರವಾನಿಸಿದ್ದೇವೆ. ಅವರ ಬಗ್ಗೆ ಸುಳಿವು ಸಿಕ್ಕ ಬಳಿಕ ನದಿಪಾತ್ರಕ್ಕೆ ಏಕೆ ಬಂದಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ.

    | ದೀಲಿಪ ಶಶಿ, ಹಾವೇರಿ ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts