More

    ಮರಗಳ ಲೂಟಿ ಅವ್ಯಾಹತ, ಹೀರೇನಾಗವಲ್ಲಿಯಲ್ಲಿ 3 ಲೋಡ್ ನಾಟಾ ವಶ

    ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಯಲ್ಲಿ ಅರಣ್ಯ ಲೂಟಿ ಎಗ್ಗಿಲ್ಲದೆ ನಡೆಯುತ್ತಿದೆ, ಅರಣ್ಯ ಪ್ರದೇಶ, ಸರ್ಕಾರಿ ಗೋಮಾಳ ಜಾಗ, ಬೆಟ್ಟಗುಡ್ಡ ಪ್ರದೇಶಗಳಲ್ಲಿನ ಅಮೂಲ್ಯವಾದ ಮರಗಳು ದಂಧೆಕೋರರ ಪಾಲಾಗುತ್ತಿವೆ. ಹಿಂದೆಲ್ಲ ಕದ್ದುಮುಚ್ಚಿ ನಡೆಯುತ್ತಿದ್ದ ದಂಧೆ ಇಂದು ರಾಜಾರೋಷವಾಗಿ ನಡೆಯುತ್ತಿದ್ದು, ಅರಣ್ಯ ಸಂಪತ್ತು ಪ್ರಭಾವಿಗಳ ಪಾಲಾಗುತ್ತಿದೆ.

    ಗುಡಿಬಂಡೆ ತಾಲೂಕಿನ ವರ‌್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀರೇನಾಗವಲ್ಲಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡ್ಮೂರು ಟ್ರಾೃಕ್ಟರ್ ಲೋಡ್‌ಗಿಂತಲೂ ಹೆಚ್ಚು ನಾಟಾವನ್ನು ವಶಪಡಿಸಿಕೊಂಡಿರುವುದು ದಂಧೆಯ ಅರ್ಭಟಕ್ಕೆ ಸಾಕ್ಷಿಯಾಗಿದೆ. ಕಳೆದ 15 ದಿನಗಳ ಹಿಂದೆ ಸಹ ಸರ್ಕಾರಿ ಗೋಮಾಳದಲ್ಲಿನ ಮರಗಳನ್ನು ಕಡಿದು, ಲೋಡುಗಟ್ಟಲೇ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿತ್ತು. ಇದೀಗ ದಂಡ ವಿಧಿಸಿ, ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಕ್ರಮ ಕೈಗೊಳ್ಳಲು ದೂರು ಸಲ್ಲಿಸಲಾಗಿದೆ.

    ಕಣಿವೆ ನಾರಾಯಣಪುರ, ಮಂಡಿಕಲ್, ನಂದಿ, ಮಂಚೇನಹಳ್ಳಿ, ಹನುಮಂತಪುರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮರಗಳಿಗೆ ಕೊಡಲಿ ಹಾಕುತ್ತಿದ್ದು, ಸ್ಥಳೀಯರು ಪ್ರಶ್ನಿಸಿದರೆ ನುಣುಚಿಕೊಳ್ಳುವ ಇಲ್ಲವೇ ಗೊಂದಲ ಮೂಡಿಸಿ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ರಾಜಾರೋಷವಾಗಿ ಅರಣ್ಯ ಸಂಪತ್ತು ಲೂಟಿಯಾಗುತ್ತಿದ್ದರೂ ಇದರಲ್ಲಿ ಕೆಲವೇ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ರಸ್ತೆ ವಿಸ್ತರಣೆ ನೆಪ: ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಸೀಕಲ್ ಮತ್ತು ದೊಡ್ಡಬೊಮ್ಮನಹಳ್ಳಿಯಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಪ್ರಭಾವಿಗಳು ರಸ್ತೆ ಬದಿಯಲ್ಲಿನ ಮರಗಳನ್ನು ಕಡಿದು ಹಾಡಹಗಲೇ ಸಾಗಿಸುತ್ತಿರುವ ಪ್ರಕರಣ ನಡೆದು, ಕೊನೆಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅರಣ್ಯ ಇಲಾಖೆ ಟ್ರ್ಯಾಕ್ಟರ್, ಜೆಸಿಬಿ ವಶಕ್ಕೆ ಪಡೆದಿತ್ತು.
    ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಲ್ಲೇ ದಂಧೆ ನಡೆಯುತ್ತಿರುವ, ಅಕ್ರಮದಲ್ಲಿ ಆಡಳಿತಕ್ಕೂ ಪಾಲಿರುವ ಆರೋಪಗಳು ಕೇಳಿ ಬರುತ್ತಿವೆ, ಸ್ಥಳೀಯರು ತೀವ್ರ ಅಕ್ಷೇಪ ವ್ಯಕ್ತಪಡಿಸಿದಾಗ ಟ್ರ್ಯಾಕ್ಟರ್, ಜೆಸಿಬಿ, ಮಾಲನ್ನು ವಶಕ್ಕೆ ಪಡೆಯುವ ಕಣ್ಣೊರೆಸುವ ತಂತ್ರ ಮಾಡುತ್ತಿರುವುದು ಸರ್ವೇ ಸಾಮಾನ್ಯವಾದಂತಿದೆ.

    ದಂಧೆಗೆ ನಾನಾ ಮುಖ : ಹಾಲು, ರೇಷ್ಮೆ ಉತ್ಪಾದನೆ, ಹೂವು ಹಣ್ಣು ಬೆಳೆಯವುದರಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಕೇಂದ್ರಗಳು, ಇಟ್ಟಿಗೆ ತಯಾರಿಕೆ ಕಾರ್ಖಾನೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಟ್ಟಿಗೆಗಳನ್ನು ಸುಟ್ಟು ಗಟ್ಟಿಗೊಳಿಸಲು, ಚಿಕ್ಕಕ್ವಾರಿಗಳಲ್ಲಿ ದೊಡ್ಡ ಬಂಡೆಗಳನ್ನು ಸುಲಭವಾಗಿ ಒಡೆಯಲು ಕಲ್ಲು ಕಾಯಿಸಲು ಅಗತ್ಯವಿರುವ ಸೌದೆಗೆ, ಟೊಮ್ಯಾಟೋ ಸೇರಿ ಕೃಷಿ ಬೆಳೆಗಳ ಕಟ್ಟಿಗೆಗಳಿಗೆ ಮರಗಳ ಬಳಕೆ ಹೆಚ್ಚಾಗಿದ್ದು, ಎಲ್ಲವೂ ಅಕ್ರಮವಾಗಿಯೇ ನಡೆಯುತ್ತಿವೆ. ಪ್ರಸ್ತುತ ಬೇಸಿಗೆಯಲ್ಲಿ ಮರಗಳು ಒಣಗುವಿಕೆಯು ಪ್ರಾರಂಭವಾಗುತ್ತಿದ್ದಂತೆ ದಂಧೆ ಜೋರಾಗುತ್ತಿದೆ. ಮತ್ತೊಂದೆಡೆ ಸ್ಥಳೀಯ ಕೆಲ ಕಿಡಿಗೇಡಿಗಳು ಕಟ್ಟಿಗೆಗಾಗಿ ಕಾಡಿನಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.

    ಸರ್ಕಾರಿ ಗೋಮಾಳದಲ್ಲಿನ ಮರಗಳನ್ನು ಕಡಿದು ಟ್ರಾೃಕ್ಟರ್‌ನಲ್ಲಿ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ.
    ಶ್ರೀನಿವಾಸ, ವರ‌್ಲಕೊಂಡ ಗ್ರಾ.ಪಂ.ಪಿಡಿಒ

    ಕಡಿವಾಣಕ್ಕೆ ಒತ್ತಾಯ: ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಹರಡುವ ಪ್ರಕರಣಗಳಿಗೆ ಕಡಿವಾಣ ಹಾಕುವುದರ ಜತೆಗೆ ಮರಗಳ್ಳರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಸರಾಸರಿ ಶೇ.35 ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ, ಶೇ.10 ರಷ್ಟು ಕೊರತೆ ಇದೆ. ಇದರ ನಡುವೆ ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶ ಚಟುವಟಿಕೆ ಮಿತಿ ಮೀರುತ್ತಿದೆ. ಅರಣ್ಯ ಪ್ರದೇಶದಲ್ಲಿ ಮೋಜು ಮಸ್ತಿ, ಅಕ್ರಮ ಚಟುವಟಿಕೆಗೆ ಅವಕಾಶ ನೀಡದಂತೆ ಅರಣ್ಯ ಕಾವಲು ಸಮಿತಿಯನ್ನು ಚುರುಕುಗೊಳಿಸುವುದರ ಜತೆಗೆ ದಂಧೆಯ ಬಗ್ಗೆ ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಜಾಗೃತಿ ಮೂಡಿಸಬೇಕು ಎನ್ನುವುದು ಪರಿಸರಪ್ರೇಮಿಗಳ ಒತ್ತಾಯವಾಗಿದೆ.

    ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕ ಕಾಡ್ಗಿಚ್ಚು ನಿಯಂತ್ರಣಕ್ಕೆ, ಬೆಂಕಿ ಹಚ್ಚುವ ಕಿಡಿಗೇಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು, ಟ್ರಕ್ಕಿಂಗ್ ನೆಪದಲ್ಲಿ ಮೋಜು ಮಸ್ತಿ ಮತ್ತು ಅಕ್ರಮ ಚಟುವಟಿಕೆಗೆ ಅವಕಾಶ ನೀಡದಿರಲು ಸಿಬ್ಬಂದಿಗೆ ಈಗಾಗಲೇ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
    ಅರಸಲನ್, ವಲಯ ಅರಣ್ಯಾಧಿಕಾರಿ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts