More

    ಮನೆ ಮುಂದೆ ನಿಲ್ಲಿಸಿದ್ದ ವಾಹನಕ್ಕೆ ಪೊಲೀಸರೇ ಮರಳು ತುಂಬಿದ ಆರೋಪ; ಮಾಳೂರು ಠಾಣೆ ಮುಂದೆ ಕಿಮ್ಮನೆ ಧರಣಿ

    ತೀರ್ಥಹಳ್ಳಿ: ತಾಲೂಕಿನ ಹೆದ್ದೂರು ಸಮೀಪದ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೊಲೀಸರೇ ಮರಳು ತುಂಬಿ ಟೋಯಿಂಗ್ ವಾಹನದ ಮೂಲಕ ಎಳೆದು ತಂದು ಕೇಸ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾಳೂರು ಪೋಲಿಸ್ ಠಾಣೆ ಎದುರು ಸೋಮವಾರ ಧರಣಿ ನಡೆಸಿದರು.
    ತಾಲೂಕಿನಲ್ಲಿ ಬಿಜೆಪಿ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಕಾಂಗ್ರೆಸ್ ಬೆಂಬಲಿತರ ವಿರುದ್ಧ ವಿನಾಕಾರಣ ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸುವ ಸಲುವಾಗಿ ಮನೆ ಮುಂದೆ ನಿಲ್ಲಿಸಿದ್ದ ವಾಹನಕ್ಕೆ ಪೋಲಿಸರೇ ಮರಳು ತುಂಬಿರುವ ಪೊಲೀಸರು, ಮುಂದೆ ಗಾಂಜಾವನ್ನು ಇಟ್ಟು ದೂರು ದಾಖಲಿಸುವ ಆತಂಕವಿದೆ. ಆದ್ದರಿಂದ ಹಿರಿಯ ಅದಿಕಾರಿಗಳು ಸ್ಥಳಕ್ಕೆ ಬಂದು ಆಶ್ವಾಸನೆ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು.
    ತಾಲೂಕಿನಲ್ಲಿ ಬಿಜೆಪಿಯವರು ರಾಜಾರೋಷವಾಗಿ ಮರಳು ಸಾಗಿಸುತ್ತಿದ್ದರೂ ಮೌನವಾಗಿರುವ ಪೊಲೀಸರು ನಮ್ಮ ಕಾರ್ಯಕರ್ತರ ವಾಹನಕ್ಕೆ ತಾವೇ ಮರಳು ತುಂಬುತ್ತಾರೆ. ಆ ಪಕ್ಷದ ಕಾರ್ಯಕರ್ತರು ಯಾರ ವಿರುದ್ಧ ಹಲ್ಲೆ ನಡೆಸಿದರೂ ದೂರು ದಾಖಲಿಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬೆಂಬಲಿಗರೊಂದಿಗೆ ಈರೇಗೋಡಿನಲ್ಲಿ ಬಿಜೆಪಿ ಕಾರ್ಯಕರ್ತ ನಡೆಸಿದ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಿಸಿಕೊಳ್ಳದ ಪೋಲೀಸರು ಇತರ ಪಕ್ಷದವರ ಮೇಲೆ ದುರುದ್ದೇಶದಿಂದ ಕೇಸು ಹಾಕಲಾಗುತ್ತಿದ್ದಾರೆ ಎಂದು ಆರೋಪಿಸಿದರು.
    ಕಳೆದ ವಾರ ಹೆದ್ದೂರಿನಲ್ಲಿ ಮೆಸ್ಕಾಂ ನೌಕರನೊಬ್ಬ ವಿದ್ಯುತ್ ಕಂಬದಿಂದ ಬಿದ್ದು ಮರಣ ಹೊಂದಿದ ಬಗ್ಗೆ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಈ ದುರಂತ ಸಂಭವಿಸಿದ್ದು ಸಂಜೆ ಆರು ಗಂಟೆಯವರೆಗೂ ಶವ ಪರೀಕ್ಷೆಗೆ ಅನುಮತಿ ನೀಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸ್ಥಳಕ್ಕೆ ಡಿವೈಎಸ್‌ಪಿ ವಿನಾಯಕ ಸುತಾರ್ ಆಗಮಿಸಿ, ವಾಹನಕ್ಕೆ ಮರಳು ತುಂಬಿಸಿ ಕೇಸು ದಾಖಲಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಧರಣಿ ಕೈ ಬಿಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts