More

    ಮನೆ ಮುಂದೆಯೇ ತರಕಾರಿ, ದಿನಸಿ

    ಹುಬ್ಬಳ್ಳಿ: ಅವಳಿ ನಗರದ ಎಲ್ಲ ವಾರ್ಡ್​ಗಳಲ್ಲಿ ತಳ್ಳುಗಾಡಿ ಅಥವಾ ಆಟೋಗಳ ಮೂಲಕ ತರಕಾರಿ, ದಿನಸಿ ತಲುಪಿಸುವಂತೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ನಿತ್ಯೋಪಯೋಗಿ ವಸ್ತುಗಳು ಸಿಗುವುದಿಲ್ಲ ಎಂಬ ಭಯ ನಾಗರಿಕರಿಗೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದ ನೆಹರು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಮಾಡಿರುವ ವ್ಯವಸ್ಥೆಯನ್ನು ಶುಕ್ರವಾರ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಅವರು ಮಾತನಾಡಿದರು. ಔಷಧ ಸೇರಿ ಇತರ ಅಗತ್ಯ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಮೂರ್ನಾಲ್ಕು ಜನರು ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಅನಿವಾರ್ಯ ಇದ್ದಲ್ಲಿ ಮಾತ್ರ ಒಂದು ಮನೆಯಿಂದ ಒಬ್ಬರಷ್ಟೇ ಹೊರಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಅನಗತ್ಯವಾಗಿ ಹೊರಗಡೆ ಸುತ್ತಾಡಬೇಡಿ ಎಂದು ಸಲಹೆ ನೀಡಿದರು.

    ಕರೊನಾ ಸೋಂಕು ತಡೆಗಟ್ಟಲು 21 ದಿನಗಳ ಲಾಕ್​ಡೌನ್ ಆದೇಶ ಪಾಲಿಸುವುದು ಅಗತ್ಯ. ಶನಿವಾರದಿಂದ ಈ ಆದೇಶ ಪಾಲನೆಗೆ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಐಎಂಎ ಹುಬ್ಬಳ್ಳಿ ಶಾಖೆಯ ವೈದ್ಯಾಧಿಕಾರಿಗಳೊಂದಿಗೂ ರ್ಚಚಿಸಲಾಗಿದೆ. ಶೀಘ್ರ ಖಾಸಗಿ ಆಸ್ಪತ್ರೆಗಳನ್ನು ಪುನಃ ಪ್ರಾರಂಭಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸುತ್ತಾಡುವವರ ವಿರುದ್ಧ ಕಠಿಣ ಕ್ರಮ: ಕರ್ಫ್ಯೂ ಮಧ್ಯೆ ಅನವಶ್ಯಕವಾಗಿ ಸುತ್ತಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಂಚರಿಸಲು ಈಗಾಗಲೇ ವಿನಾಯಿತಿ ನೀಡಲಾಗಿದೆ. ನಾಗರಿಕರು ಮನೆಯಲ್ಲಿಯೇ ಇದ್ದು ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

    ಬೆಳ್ಳಂಬೆಳಗ್ಗೆ ಬಿತ್ತು ಲಾಠಿ ಏಟು: ಹುಬ್ಬಳ್ಳಿ ಎಪಿಎಂಸಿ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಜನದಟ್ಟಣೆ ಸೇರಿದ್ದರಿಂದ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಧಾರವಾಡ, ಹುಬ್ಬಳ್ಳಿ ಸೇರಿ ವಿವಿಧೆಡೆಯಿಂದ ತರಕಾರಿ ತಂದಿದ್ದ ರೈತರು, ವರ್ತಕರು, ಕೊಳ್ಳುವವರು ಏಕಕಾಲಕ್ಕೆ ಜಮಾಯಿಸಿದ್ದರಿಂದ ಗದ್ದಲ ಏರ್ಪಟ್ಟಿತ್ತು. ಕೂಡಲೆ ಎಚ್ಚೆತ್ತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆಲ ರೈತರ ತರಕಾರಿ ಚೆಲ್ಲಾಪಿಲ್ಲಿಯಾಯಿತು. ಇದೇ ಸಂದರ್ಭದಲ್ಲಿ ತರಕಾರಿ ಆಯ್ದುಕೊಳ್ಳಲು ಮುಂದಾದವರಿಗೂ ಏಟು ಬಿದ್ದವು. ಶುಕ್ರವಾರ ಟೊಮ್ಯಾಟೋ ಜಾಸ್ತಿ ಬಂದಿತ್ತು. ಹಾಗಾಗಿ ಎಲ್ಲೆಡೆ ಟೊಮ್ಯಾಟೋ ಚೆಲ್ಲಿದಂತಾಗಿತ್ತು. ಸಂಜೆ ವೇಳೆಗೆ ಎಪಿಎಂಸಿ ಪ್ರಾಂಗಣದಲ್ಲಿ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್ ವರ್ತಕರು, ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿದರು. ನಾಳೆಯಿಂದ ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆಯಾಗದಿರುವಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು. ಎರಡು ಅಥವಾ ಮೂರು ರಸ್ತೆಗಳಲ್ಲಿ ಮಾರ್ಕಿಂಗ್ ಮಾಡಿ ಅದೇ ಜಾಗದಲ್ಲಿ ವಹಿವಾಟು ನಡೆಸಲು ಸೂಚಿಸಿದರು.

    ನಿಯಮ ಬಾಹಿರ ವಹಿವಾಟಿಗೆ ಬ್ರೇಕ್

    ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿಯಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೇ ನಡೆಸುತ್ತಿದ್ದ ವ್ಯಾಪಾರ ವಹಿವಾಟಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ನಿತ್ಯ ಬೆಳಗ್ಗೆ ಆರು ಗಂಟೆಯಿಂದ 10 ಗಂಟೆಯವರೆಗೆ ನಡೆಯುತ್ತಿದ್ದ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಏನಿಲ್ಲ ವೆಂದರೂ ಸಾವಿರ ಜನ ಸೇರುತ್ತಿದ್ದರು. ಎಪಿಎಂಸಿ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಸಗಟು ತರಕಾರಿ ಮಾರಾಟವೂ ಇಕ್ಕಟ್ಟಾದ ಜಾಗದಲ್ಲಿ ನಡೆಸಲಾಗುತ್ತಿತ್ತು.

    ಎಪಿಎಂಸಿ ನಿರ್ಲಕ್ಷ್ಯ: ಶುಕ್ರವಾರ ಬೆಳಗ್ಗೆ ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಂದಾಯ ನಿರೀಕ್ಷಕ (ನಗರ) ರವಿ ಬೆನ್ನೂರ, ವಲಯ ಕಚೇರಿ 4ರ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಇನ್ಸ್​ಸಪೆಕ್ಟರ್

    ಪ್ರಭು ಸೂರಿನ್ ಹಾಗೂ ಸಿಬ್ಬಂದಿ, ಎಪಿಎಂಸಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಜನದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದರು.

    ಲಾಠಿ ಹಿಡಿದ ಪೊಲೀಸರು: ಶುಕ್ರವಾರ ಎಪಿಎಂಸಿಯ ಎಲ್ಲ ಗೇಟ್​ಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಕೇವಲ ಒಂದು ಗೇಟ್​ನಿಂದ ಹೊರ ಹಾಗೂ ಒಳ ಹೋಗುವುದಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಹೊತ್ತಿಗೆ ಜನಸಂದಣಿ ಹೆಚ್ಚಾಗಿದ್ದರಿಂದ ಪೊಲೀಸರು ಲಾಠಿ ಹಿಡಿದು ಚದುರಿಸಬೇಕಾಯಿತು. ಕೆಲವರು ಏಟು ತಿನ್ನಬೇಕಾಯಿತು.

    ಆಡಳಿತ ಮಂಡಳಿ ಎಲ್ಲಿದೆ?: ಹಲವು ದಿನಗಳಿಂದಲೂ ರಸ್ತೆ ಇಕ್ಕಟ್ಟು ಮಾಡಿಕೊಂಡು ತರಕಾರಿ ವರ್ತಕರು, ಚಿಲ್ಲರೆ ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದರೂ ಎಪಿಎಂಸಿ ಆಡಳಿತ ಮಂಡಳಿ ಪರಿಹಾರಕ್ಕೆ ಮುಂದಾಗಿರಲಿಲ್ಲ. ಕೆಲ ವರ್ತಕರು ತಮ್ಮ ಅಂಗಡಿಗಳನ್ನು ಬಿಟ್ಟು ರಸ್ತೆ ಮೇಲೆಯೇ ವ್ಯಾಪಾರ ನಡೆಸುತ್ತಾರೆ. ಇಷ್ಟೆಲ್ಲ ಆದರೂ ಎಪಿಎಂಸಿ ಆಡಳಿತ ಮಂಡಳಿ ಕ್ರಮ ಕೈಗೊಂಡಿರಲಿಲ್ಲ.

    ಇಂದಿನಿಂದ ಎಲ್ಲ ಮಾರುಕಟ್ಟೆ ಬಂದ್

    ಹುಬ್ಬಳ್ಳಿ: ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿನ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಶನಿವಾರದಿಂದ ಯಾವುದೇ ಮಾರುಕಟ್ಟೆ ತೆರೆಯುವುದಿಲ್ಲ. ಬೀದಿ ಬದಿ ವ್ಯಾಪಾರಿಗಳು, ಚಿಲ್ಲರೆ-ಸಗಟು ಮಾರಾಟಗಾರರು ವಾರ್ಡ್​ಗಳಲ್ಲಿ ಸಂಚರಿಸಿ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಹುಬ್ಬಳ್ಳಿಯ ಜನತಾ ಬಜಾರ್, ಎಂ.ಜಿ. ಮಾರ್ಕೆಟ್, ದುರ್ಗದಬೈಲ್ ಮಾರುಕಟ್ಟೆಗಳನ್ನು ಬಂದ್ ಮಾಡಿ ಶುಕ್ರವಾರ ನೆಹರು ಮೈದಾನ, ಈದ್ಗಾ ಮೈದಾನ, ಹಳೇ ಬಸ್ ನಿಲ್ದಾಣ ಹಾಗೂ ಧಾರವಾಡದ ಕೆಲ ಸ್ಥಳಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸ್ಥಳಗಳಲ್ಲಿ ಖರೀದಿ ವೇಳೆ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿತ್ತು. ಆದರೆ, ಸಾರ್ವಜನಿಕರು ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗೂಡಿ ಖರೀದಿಸಿದ್ದರು. ಹಾಗಾಗಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ವ್ಯವಸ್ಥೆಯನ್ನು ಕೈ ಬಿಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts