More

    ಮನೆ ಬೆಳಗದ ನಿರಂತರ ಜ್ಯೋತಿ

    ಬೂದಿಕೋಟೆ: ದಿನದ 24 ಗಂಟೆ ವಿದ್ಯುತ್ ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನಿರಂತರ ಜ್ಯೋತಿಯು ಕಣ್ಣಾಮುಚ್ಚಾಲೆಯಾಡುತ್ತಿರುವ ಕಾರಣ ಜನ ನಿರಂತರ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ.

    ಗ್ರಾಮೀಣ ಪ್ರದೇಶದಲ್ಲಿ ಕತ್ತಲೆ ಹೋಗಲಾಡಿಸಿ 24 ಗಂಟೆ ವಿದ್ಯುತ್ ಪೂರೈಸಿ, ಬೆಳಕು ನೀಡಲು ಶುರುವಾದ ನಿರಂತರ ಜ್ಯೋತಿ ಮನೆ ಬೆಳಗುತ್ತಿಲ್ಲ. ಬದಲಾಗಿ ಇಲಾಖೆಯ ಲೋಡ್ ಶೆಡ್ಡಿಂಗ್‌ನಿಂದ ಕತ್ತಲು ಆವರಿಸುವಂತಾಗಿದೆ.

    ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ 5 ಪಂಚಾಯಿತಿ ವ್ಯಾಪ್ತಿಯ ಸುಮಾರು 61 ಗ್ರಾಮಗಳಿಗೆ ಬೂದಿಕೋಟೆಯ ಕೆಪಿಟಿಸಿಎಲ್‌ನ ಉಪವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಕಳೆದ ಹಲವು ದಿನಗಳಿಂದ ಆಗುತ್ತಿರುವ ನಿರಂತರ ವಿದ್ಯುತ್ ಕಡಿತದಿಂದ ಬೇಸತ್ತಿರುವ ಜನರು ಬೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಬೇಸಾಯಕ್ಕೂ ಕರೆೆಂಟಿಲ್ಲ: ಸಾವಿರಾರು ಅಡಿ ಆಳದಿಂದ ಇರುವ ಅಲ್ಪ ಸ್ವಲ್ಪ ನೀರನ್ನು ಮೇಲೆತ್ತಿ ವ್ಯವಸಾಯ ಮಾಡಲು ಅನ್ನದಾತನಿಗೆ ಹಗಲು ಸಮಯದಲ್ಲಿ 3 ಗಂಟೆ, ರಾತ್ರಿ 3 ಗಂಟೆ 3 ಪೇಸ್ ವಿದ್ಯುತ್ ಪೂರೈಕೆಗೆ ಇಲಾಖೆ ಸಮಯ ನಿಗದಿ ಮಾಡಿದೆ. ನಿಗದಿತ ಸಮಯದಲ್ಲಿ ಸರಿಯಾಗಿ 3 ಪೇಸ್ ವಿದ್ಯುತ್ ನೀಡದೆ ಮನಬಂದಂತೆ ಕರೆಂಟ್ ಕಟ್ ಮಾಡುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಬೆಳೆದ ವಿವಿಧ ಬಗೆಯ ತರಕಾರಿಗಳು ನೀರಿಲ್ಲದೆ ಒಣಗುವಂತಾಗಿದೆ. ಸಮರ್ಪಕ ವಿದ್ಯುತ್ ಇಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಕಾಪಾಡಿಕೊಳ್ಳಲು ಹೈರಾಣಾಗಿದ್ದಾರೆ.

    3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಬೂದಿಕೋಟೆ ಹೋಬಳಿ ಜನರ ವಿದ್ಯುತ್ ಸಮಸ್ಯೆ ನೀಗಿಸಲು ಯಳೇಸಂದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 2010ರಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ಸುಮಾರು 58 ಕೋಟಿ ರೂ. ವೆಚ್ಚದಲ್ಲಿ 3 ಮೆಗಾ ವ್ಯಾಟ್ ಸಾಮರ್ಥ್ಯದ ಬೃಹತ್ ಸೋಲಾರ್ ಪ್ಲಾಂಟ್ ನಿರ್ಮಿಸಲಾಗಿದೆ. ಇದರಲ್ಲಿ 13,500 ಸೋಲಾರ್ ಪ್ಯಾನಲ್ ಅಳವಡಿಸಲಾಗಿದ್ದು, ಪ್ರತಿದಿನ 4,000ದಿಂದ 18,000 ಯೂನಿಟ್ ಹಾಗೂ ವರ್ಷಕ್ಕೆ 4 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲು ಅಂದಾಜಿಸಲಾಗಿದೆ.

    ಸೋಲಾರ್‌ನಿಂದ ಉತ್ಪಾದನೆಯಾಗುವ ವಿದ್ಯುತ್‌ನಿಂದ ಸುಮಾರು 600 ಪಂಪ್‌ಸೆಟ್‌ಗಳಿಗೆ ಹಾಗೂ 20 ಗ್ರಾಮಗಳಿಗೆ ಕರೆಂಟ್ ಪೂರೈಸಬಹುದು ಎಂದು ಅಂದಾಜಿಸಲಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನವೇ ಈ ರೀತಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಚಿಂತೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಹಲವು ದಿನಗಳಿಂದ ಮನ ಬಂದಂತೆ ವಿದ್ಯುತ್ ನಿಲುಗಡೆ ಮಾಡುತ್ತಿರುವ ಕಾರಣ ಬೆಳೆಗಳಿಗೆ ನೀರು ಹರಿಸಲು ಕಷ್ಟವಾಗಿದೆ. ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ನಮ್ಮ ಕಡೆಯಿಂದ ವಿದ್ಯುತ್ ಕಟ್ ಆಗಿಲ್ಲ ಮಾಲೂರಿನಿಂದ ಬರುವ ಮೈನ್ ಲೈನ್‌ನಿಂದ ಸ್ಥಗಿತವಾಗಿದೆ ಎಂದು ಉಡಾೆ ಉತ್ತರ ನೀಡುತ್ತಿದ್ದಾರೆ.
    ಅಶ್ವತ್ಥ್ ರೈತ, ಬೂದಿಕೋಟೆ

    ಮಾಲೂರಿನ 220 ಲೇನ್ ಓವರ್ ಲೋಡ್ ಆಗುತ್ತಿರುವ ಕಾರಣ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿದೆ. 220 ಸ್ಟೇಷನ್‌ನಿಂದ ಬರುವ ನಿರ್ದೇಶನ ಪಾಲನೆ ಮಾಡಿ ವಿದ್ಯುತ್ ಕಟ್ ಮಾಡುತ್ತೇವೆಯೇ ಹೊರತು ಬೇಕಾಬಿಟ್ಟಿ ಕಟ್ ಮಾಡುತ್ತಿಲ್ಲ. ರೈತರಿಗೆ 3 ಪೇಸ್ ವಿದ್ಯುತ್ ಸರಿಯಾಗಿ ಪೂರೈಕೆ ಮಾಡಲಾಗುತ್ತಿದ್ದು, ಒಮ್ಮೊಮ್ಮೆ ಅರ್ಧ ಗಂಟೆ ಕಡಿತವಾಗಿರಬಹುದು ಅಷ್ಟೆ.
    ಪಾಂಡಿಯನ್, ಬೆಸ್ಕಾಂ ಜೆಇ ಬೂದಿಕೋಟೆ ವಲಯ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts