More

    ಮನೆ ಬಾಗಿಲಿಗೆ ಕರೊನಾ ಲಸಿಕೆ, ಸಂಚಾರ ಲಸಿಕಾ ವಾಹನಕ್ಕೆ ಚಾಲನೆ ನೀಡಿದ ಸಚಿವ ಎಂಟಿಬಿ ನಾಗರಾಜ್

    ಬೆಂಗಳೂರು ಗ್ರಾಮಾಂತರ: ವೋಲ್ವೋ ಸಂಸ್ಥೆಯು ಜಿಲ್ಲೆಯಲ್ಲಿ 20 ಸಾವಿರ ಉಚಿತ ಕರೊನಾ ಲಸಿಕೆ ವಿತರಿಸಲು ಮುಂದಾಗಿರುವುದು ಸಂಸ್ಥೆಯ ಸಾಮಾಜಿಕ ಕಾಳಜಿ ತೋರಿಸುತ್ತದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಹೊಸಕೋಟೆ ತಾಲೂಕು ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕಂಪನಿ ಸಹಯೋಗದೊಂದಿಗೆ ನಾರಾಯಣ ಹೆಲ್ತ್ ವತಿಯಿಂದ ಸಂಚಾರ ಲಸಿಕಾ ವಾಹನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

    ವೋಲ್ವೊ ಸಂಸ್ಥೆ ತಾಲೂಕಿನ ವಿವಿಧ ಭಾಗಗಳಲ್ಲಿ ಮನೆಬಾಗಿಲಿಗೆ ತೆರಳಿ ಲಸಿಕೆ ಹಾಕುವ ಮಹತ್ವದ ಕಾರ್ಯ ಕೈಗೊಂಡಿದೆ ಎಂದರು.

    ಕರೊನಾ ಸೋಂಕಿನಿಂದ ಪರಿಣಾಮಕಾರಿಯಾಗಿ ರಕ್ಷಣೆ ಪಡೆಯಲು ವ್ಯಾಕ್ಸಿನ್ ರಾಮಬಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಉಚಿತ ವ್ಯಾಕ್ಸಿನ್ ವಿತರಣೆ ಮುಂದುವರಿಸಿದೆ, ಹೊಸಕೋಟೆ ತಾಲೂಕಿನಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಉಚಿತ ಲಸಿಕಾ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

    ವೊಲ್ವೊದಂಥ ಸಂಸ್ಥೆಗಳು ಜನಪರ ಕಾಳಜಿಯೊಂದಿಗೆ ಕರೊನಾ ವಿರುದ್ಧದ ಸಮರಕ್ಕೆ ಕೈಜೋಡಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ ಸಮಾಜಪರ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಕರೊನಾ ಸೋಂಕು ತಡೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಹೊಸಕೋಟೆಗೆ ಮೆಟ್ರೋಗೆ ಸ್ಪಂದನೆ: ಹೊಸಕೋಟೆಗೆ ಶೀಘ್ರದಲ್ಲೇ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ದೊರೆಯಲಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಪುನರುಚ್ಚರಿಸಿದರು. ಉಪಚುನಾವಣೆ ವೇಳೆಯಲ್ಲಿಯೇ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು, ಅವರೂ ಸಹ ಭರವಸೆ ನೀಡಿದ್ದರು. ಇಷ್ಟೋತ್ತಿಗಾಗಲೇ ಅಂತಿಮ ಸ್ಪರ್ಶ ಸಿಗಬೇಕಿತ್ತು. ಆದರೆ ಮರುಚುನಾವಣೆ ಸೋಲಿನಿಂದ ನನೆಗುದಿಗೆ ಬಿತ್ತು. ಆದರೂ ಕೊಟ್ಟ ಮಾತು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೂಲಕ ಕೇಂದ್ರ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಅವರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಹೊಸಕೋಟೆ ಜನರ ಬಹುದಿನದ ಬೇಡಿಕೆ ಈಡೇರಲಿದೆ ಎಂದು ಭರವಸೆ ನೀಡಿದರು.

    ಹೊಸಕೋಟೆ ಬಿಬಿಎಂಪಿ ವ್ಯಾಪ್ತಿಯಿಂದ ಕೇವಲ 10 ಕಿಮೀ ದೂರದಲ್ಲಿದೆ. ಸಿಲಿಕಾನ್ ವ್ಯಾಲಿ ವೈಟ್ ಫೀಲ್ಡ್ ಐಟಿ ಪಾರ್ಕ್‌ಗೆ ಹೊಸಕೋಟೆ ತೀರಾ ಹತ್ತಿರದಲ್ಲಿದೆ. ವೈಟ್‌ಫೀಲ್ಡ್ ಸುತ್ತಮುತ್ತ ನೂರಾರು ಐಟಿ ಕಂಪನಿ, ವಾಣಿಜ್ಯ ಕಟ್ಟಡಗಳು ಸೇರಿ ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿವೆ. ಈ ಭಾಗದಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ನಿರ್ಮಾಣವಾಗುತ್ತಿದ್ದು, ಇದಕ್ಕೆ ಮೆಟ್ರೋ ಪರಿಹಾರವಾಗಲಿದೆ ಎಂದರು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ತಹಸೀಲ್ದಾರ್ ಗೀತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts