More

    ಮನೆಮನೆಗೆ ಅಡುಗೆ ಅನಿಲ ಸರಬರಾಜು ಯೋಜನೆ; ಗುಟ್ಟಾಗಿ ಪೈಪ್‌ಲೈನ್ ಕಾಮಗಾರಿ: ನಗರಸಭೆಯಲ್ಲಿ ಬಿಸಿ ಬಿಸಿ ಚರ್ಚೆ

    ಸಾಗರ: ನಗರದಲ್ಲಿ ಪೈಪ್‌ಲೈನ್ ಮೂಲಕ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಅಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ ಕಾರಣವಾಯಿತು. ಶಾಸಕರ ಎದುರಿನಲ್ಲಿಯೇ ವಿರೋಧ ಪಕ್ಷದ ಸದಸ್ಯರು ಸಮಸ್ಯೆಯನ್ನು ತೆರೆದಿಟ್ಟರು.
    ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯದ ಕುರಿತು ಸುಧೀರ್ಘವಾಗಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಉಮೇಶ್, ಈ ಯೋಜನೆ ಜಾರಿಗೆ ತರುವಲ್ಲಿ ನಮ್ಮದೇನೂ ವಿರೋಧವಿಲ್ಲ, ಆದರೆ ಗುಟ್ಟಾಗಿ ಎಲ್ಲ ಕೆಲಸ ಮುಗಿಸಿ ಈಗ ಪೂರ್ಣ ಪ್ರಮಾಣದ ಅನುಮತಿಗೆ ಸಭೆಯ ಮುಂದೆ ವಿಷಯ ಮಂಡಿಸುತ್ತಿದ್ದೀರಿ. ಹೀಗೇಕೆ ಮಾಡಿದಿರಿ ಎಂದು ಪ್ರಶ್ನಿಸಿದರು.
    ಈಗಾಗಲೇ ಒಳಚರಂಡಿ ಯೋಜನೆಯಡಿ ಸಾಕಷ್ಟು ರಸ್ತೆಗಳನ್ನು ಅಗೆಯಲಾಗಿದ್ದು ಟಾರ್ ಕೂಡ ಮಾಡಿಲ್ಲ. ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಮತ್ತೆ ಗುಂಡಿ ತೋಡಿದರೆ ಎಷ್ಟು ಸರಿ ನೀವೇ ಯೋಚಿಸಿ. ಈ ಯೋಜನೆಯ ಹೆಸರಿನಲ್ಲಿ ಅಧಿಕಾರಿಗಳಾಗಲೀ ಅಥವಾ ಇದಕ್ಕೆ ಸಂಬಂಧಪಟ್ಟವರಾಗಲೀ ನಗರಸಭೆಗೆ ವಿಷಯ ತಂದು ಪ್ರಸ್ತಾಪಿಸಲೇ ಇಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಾಗ ವಿರೋಧ ಪಕ್ಷದ ಎನ್.ಲಲಿತಮ್ಮ, ಸಯ್ಯದ್ ಜಾಕೀರ್, ಗಣಪತಿ ಮಂಡಗಳಲೆ ಧ್ವನಿಗೂಡಿಸಿದರು.
    ಬಿಜೆಪಿಯ ಟಿ.ಡಿ.ಮೇಘರಾಜ್ ಮಾತನಾಡಿ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ಕೆಲಸ ಮುಗಿದಿದೆ. ನಗರಸಭೆಯಿಂದ ಯಾವುದೇ ಪರವಾನಗಿ ನೀಡಿಲ್ಲ, ಇದೊಂದು ಪ್ರಾಯೋಗಿಕ ಪ್ರಯತ್ನ. ಆದರೆ ಪೈಪ್‌ಲೈನ್ ಅಳವಡಿಸಲು ಗುಂಡಿ ತೆಗೆಯುವುದರಿಂದ ಶಾಸಕರು ನಗರಸಭೆಗೆ ಸರ್ಕಾರದಿಂದ ಕಷ್ಟಪಟ್ಟು ತಂದ ಹಣ ವ್ಯರ್ಥವಾಗುತ್ತದೆ. ಇದರಿಂದ ನಗರಸಭೆಗೆ ಏನು ಲಾಭವಿದೆ ಎನ್ನುವುದನ್ನು ಯೋಚಿಸಿ ಎಂದು ಹೇಳಿದರು.
    ಆಗ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿದೆ. ಮನೆಮೆನೆಗೆ ನೈಸರ್ಗಿಕವಾಗಿ ಅಡುಗೆ ಅನಿಲ ನೀಡುವ ಈ ಯೋಜನೆ ಕಾರ್ಯರೂಪಕ್ಕೆ ತರಲೇಬೇಕಾಗಿದೆ. ಇದನ್ನು ಪೈಲಟ್ ಪ್ರಾಜೆಕ್ಟ್ ಆಗಿ ಪರಿಗಣಿಸಿ ನಗರಸಭೆ ವ್ಯಾಪ್ತಿಯಲ್ಲಿ 1,500 ಮನೆಗಳಿಗೆ ಮಾತ್ರ ಪೈಪ್‌ಲೈನ್ ಅಳವಡಿಸಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗುತ್ತದೆ. ಈಗಾಗಲೇ ಈ ಯೋಜನೆ ಫಲವಂತಿಕೆ ಕಂಡಿರುವ ಪ್ರದೇಶಗಳಲ್ಲಿ ನಗರಸಭಾ ಸದಸ್ಯರೊಂದಿಗೆ ಪ್ರವಾಸ ನಡೆಸಿ, ಅಧ್ಯಯನ ನಡೆಸಿ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಖಾತೆ ಬದಲಾವಣೆ ಸೇರಿದಂತೆ ವಿವಿಧ ಕೆಲಸಗಳಿಗೆ ನಗರಸಭೆಗೆ ಬರುವವರಿಗೆ ಬಟ್ಟೆ ಚೀಲವನ್ನು ನೀಡಲಾಗುತ್ತಿದೆ ಎಂದು ಪ್ರಭಾರ ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾಹಿತಿ ನೀಡಿದರು.
    ಸಭೆಯಲ್ಲಿ ಬೀದಿ ದೀಪಗಳ ನಿರ್ವಹಣೆ, ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ, ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಮನೆಗಳ ರಿಪೇರಿ, ವಿವಿಧ ಯೋಜನೆಗಳಲ್ಲಿ ತ್ರಿಚಕ್ರ ವಾಹನ ಸ್ಕೂಟರ್ ನೀಡುವುದು, ನಿರುದ್ಯೋಗ ಯುವಕ ಯುವತಿಯರಿಗೆ ಬ್ಯಾಂಕ್ ಸಹಾಯದೊಂದಿಗೆ ಸೌಲಭ್ಯ ಧನ, ಇತರ ಯೋಜನೆಗಳ ಫಲಾನುಭವಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
    ಅಪಘಾತ ಹೆಚ್ಚಳಕ್ಕೆ ಕಳವಳ: ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕೆ ಸರಿಯಾದ ನಾಮಫಲಕಗಳನ್ನು ಅಳವಡಿಸಬೇಕು ಇದಕ್ಕೆ ಅಧಿಕಾರಿಗಳೇ ನೇರ ಹೊಣೆ. ಇತ್ತೀಚೆಗೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಅಧಿಕಾರಿಗಳು ಮೊದಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಅವಶ್ಯವಿರುವ ಕಡೆಯಲ್ಲಿ ಎಚ್ಚರಿಕೆಯ ನಾಮಫಲಕ, ಬ್ಯಾರಿಕೇಡ್‌ಗಳನ್ನು ಹಾಕಬೇಕು. ರಸ್ತೆಯಲ್ಲಿ ನಡೆಯುವಾಗ ಪಾದಚಾರಿಗಳು ಹೊಸ ನಿಯಮದ ಪ್ರಕಾರ ಬಲಗಡೆಯಲ್ಲಿಯೇ ನಡೆಯಬೇಕು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಎಂದರು.
    ಅಟಲ್ ಬಿಹಾರಿ ವಾಜಪೇಯಿ ಮಾರ್ಗ: ಸಾಗರ ನಗರದಲ್ಲಿ ಹಾದು ಹೋಗಿರುವ ಹಾವೇರಿ-ಸಾಗರ ರಾಜ್ಯ ಹೆದ್ದಾರಿಯ ಶಿವಪ್ಪ ನಾಯಕ ವೃತ್ತದಿಂದ ಕೆಳದಿ ರಸ್ತೆಯ ವರೆಗಿನ ರಸ್ತೆಯನ್ನು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮಾರ್ಗ ಎಂದು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತು. ಕಾಂಗ್ರೆಸ್‌ನ ಎನ್.ಲಲಿತಮ್ಮ ವಾಜಪೇಯಿ ವ್ಯಕ್ತಿತ್ವದ ಗುಣಗಾನ ಮಾಡಿದರು. ಕೆ.ಆರ್.ಗಣೇಶಪ್ರಸಾದ್, ಚತುಷ್ಪಥ ರಸ್ತೆ, ನದಿಗಳ ಜೋಡಣೆ, ಗ್ರಾಮ ಸಡಕ್ ಯೋಜನಾ ಮುಂತಾದ ಮಹತ್ತರ ಯೋಜನೆಗಳನ್ನು ಜಾರಿಗೆ ತಂದರು, ಅದಕ್ಕೆ ಪ್ರಧಾನ ಮಂತ್ರಿ ಯೋಜನೆ ಎಂದು ಹೆಸರಿಸಿದರೇ ಹೊರತು ತಮ್ಮ ಹೆಸರನ್ನು ನಮೂದಿಸಲಿಲ್ಲ ಎಂದರು.
    ಮೈಕ್ ಪುರಾಣ: ಸಾಗರ ನಗರಸಭೆಯ ಮೈಕ್‌ಗಳು ಕೇಳಿಸುವುದೇ ಇಲ್ಲ. ಯಾರು ಏನು ಹೇಳುತ್ತಾರೆ ಎನ್ನುವುದು ತಿಳಿಯದಾಗಿದೆ ಎಂದು ಬಿಜೆಪಿಯಶಂಕರ್ ಅಳ್ವಕೋಡಿ ತಮ್ಮ ಅಳಲು ತೋಡಿಕೊಂಡರು. ಪ್ರತಿಕ್ರಿಯಿಸಿದ ಶಾಸಕ ಹಾಲಪ್ಪ, ಎಲ್ಲ ಕಾರ್ಯಕ್ರಮಗಳಲ್ಲಿಯೂ ಮೈಕ್ ಕೈ ಕೊಡುತ್ತಲೇ ಇರುತ್ತದೆ. ನಗರಸಭೆಯೇನು ಅದರಿಂದ ಹೊರತಾಗಿಲ್ಲ. ನಾನು ಇಲ್ಲಿಯವರೆಗೆ ಗಮನಿಸಿದಂತೆ ಶಾಸನ ಸಭೆಯಲ್ಲಿ ಮಾತ್ರ ಮೈಕ್‌ಗಳು ವ್ಯವಸ್ಥಿತವಾಗಿರುತ್ತವೆ ಎಂದಾಗ ಸಭೆ ನಗೆಗಡಲಿನಲ್ಲಿ ತೇಲಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts