More

    ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿದ ಸೇತುವೆ

    ಚಿಂಚೋಳಿ: ತಾಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ ಅಬ್ಬಿಸಿದ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದರೆ ಹಲವು ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಬಹುತೇಕ ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಮೂರು ಚಿಕ್ಕ ಸೇತುವೆಗಳು ಕೊಚ್ಚಿಹೋಗಿವೆ.
    ಚಂದಾಪುರದ ಪಟೇಲ್ ಕಾಲನಿ, ಆಶ್ರಯ ಕಾಲನಿ, ಗಣೇಶ ನಗರ, ಬಸವ ನಗರ ಸೇರಿ ತಗ್ಗು ಪ್ರದೇಶದ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜನರು ಜಾಗರಣೆ ಮಾಡಬೇಕಾಯಿತು. ಇನ್ನು ಮನೆಯಲ್ಲಿದ್ದ ದಿನಸಿ ಸೇರಿ ಬಹುತೇಕ ವಸ್ತುಗಳು ನೀರು ಪಾಲಾಗಿವೆ. ಬಸವ ನಗರದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ ಸೀಳಿನ್, ಗಣೇಶ ನಗರದ ಮುಖಂಡ ಕಾಳಪ್ಪ ಬಡಿಗೇರ, ಪಟೇಲ್ ಕಾಲನಿಯ ಸುನೀಲ ದೊಡ್ಡಮನಿ ಅವರ ಮನೆಗೂ ಮಳೆ ನೀರು ಹೊಕ್ಕಿದೆ.
    ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಂಡರು. ಹಾನಿ ಬಗ್ಗೆ ಸಮಗ್ರ ವರದಿ ತಯಾರಿಸಿ ಉನ್ನತ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಪರಿಹಾರ ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
    ಚಿಂಚೋಳಿ ವಲಯದಲ್ಲಿ 122 ಮಿಮೀ, ಕುಂಚಾವರಂ 60, ನಿಡಗುಂದಾ 55, ಚಿಮ್ಮನಚೋಡ 22.2, ಐನಾಪುರ 26.2, ಕೋಡ್ಲಿ 26.4, ಸುಲೇಪೇಟ ವಲಯದಲ್ಲಿ 32.4 ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

    ಕೊಚ್ಚಿ ಹೋದ ಸೇತುವೆಗಳು
    ಭಾರಿ ಮಳೆಗೆ ಸೋಮಲಿಂಗದಳ್ಳಿ-ಕಲ್ಲೂರ ರೋಡ್, ಚತ್ರಸಾಲ-ಬುರಗಪಳ್ಳಿ, ಪೋತಂಗಲ್-ನಿಡಗುಂದಾ ಗ್ರಾಮಗಳ ಮಧ್ಯೆ ಅಡ್ಡಲಾಗಿ ಕಟ್ಟಲಾದ ಚಿಕ್ಕ ಸೇತುವೆಗಳು ಕೊಚ್ಚಿ ಹೋಗಿವೆ. ಶಾದಿಪುರ, ಗಣಾಪುರ, ಭೂಯ್ಯಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತವಾಗಿವೆ. ಇದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ತಗ್ಗು ಪ್ರದೇಶದಲ್ಲಿದ್ದ ಜಮೀನಿನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ.

    ಮೈದುಂಬಿ ಹರಿಯುತ್ತಿರುವ ಎತ್ತಪೋತ
    ಕೆಲವು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಂತೆಯೇ ಜಿಲ್ಲೆಯ ಪ್ರಮುಖ ಜಲಪಾತ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ ಮೈದುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಇದಲ್ಲದೆ ಮಾಣಿಕಪುರ ಜಲಪಾತ ಸೇರಿ ಸಣ್ಣ-ಪುಟ್ಟ ಝರಿಗಳು ನೀರಿನಿಂದ ನಳನಳಿಸುತ್ತಿವೆ.

    ಚಂದಾಪುರದ ವಿವಿಧ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಪುರಸಭೆ ಹಾಗೂ ಗ್ರಾಮ ಲೇಖಪಾಲಕರಿಗೆ ಹಾನಿ ಬಗ್ಗೆ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಗುವುದು.
    | ಅರುಣಕುಮಾರ ಕುಲಕರ್ಣಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts