More

    ಮದ್ಯಮುಕ್ತ ರಾಜ್ಯಕ್ಕೆ ಶ್ರೀಗಳ ಒತ್ತಾಯ

    ಲಕ್ಷ್ಮೇಶ್ವರ: ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ಯಮುಕ್ತ ರಾಜ್ಯ ಮಾಡಬೇಕು. ಈ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕು ಎಂದು ಈ ನಾಡಿನ ಮಠಾಧೀಶರು, ಧರ್ವಧಿಕಾರಿಗಳು, ಬುದ್ಧಿಜೀವಿಗಳು, ಹಿರಿಯರು, ಪ್ರಜ್ಞಾವಂತ ಪ್ರಜೆಗಳು, ಒಕ್ಕೂರಲಿನ ಮನವಿ ಮಾಡಿದರೂ ಕೇವಲ ಆರ್ಥಿಕ ಮುಗ್ಗಟ್ಟಿನ ನೆಪದಿಂದ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡುತ್ತಿರುವ ಸರ್ಕಾರದ ಕ್ರಮ ನೋವಿನ ಮತ್ತು ಆಘಾತಕಾರಿ ಸಂಗತಿಯಾಗಿದೆ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಶ್ರೀಗಳು, ‘ಕರೊನಾದಿಂದಾಗಿ ಮದ್ಯ ಮಾರಾಟ ನಿಂತಿರುವುದರಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿ, ಸಂತೋಷದಿಂದ ಬದುಕುವಂತಾಗಿದೆ. ಬಡತನ ನಿಮೂಲನೆ, ಆರೋಗ್ಯಕರ ಸಮಾಜದ ನಿರ್ವಣಕ್ಕೆ ಕಾರಣವಾಗಿತ್ತು. ಆದರೆ, ಯಾವುದೋ ಒತ್ತಾಯಕ್ಕೆ ಮಣಿದು ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ. ಮದ್ಯ ಮಾರಾಟದಿಂದ ಅದೆಷ್ಟೋ ಮಹಿಳೆಯರು, ಮಕ್ಕಳು ಚಿತ್ರಹಿಂಸೆ, ಹಲ್ಲೆಯಿಂದ ನಿತ್ಯ ಕಣ್ಣೀರಿನಲ್ಲಿ ಗೋಳಾಡುವಂತಾಗುತ್ತದೆ’ ಎಂದು ಹೇಳಿದ್ದಾರೆ.

    ಒಂದೂವರೆ ತಿಂಗಳಿನಿಂದ ಎಲ್ಲ ಮನೆಗಳಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ವಣವಾಗಿತ್ತು. ಕುಡಿತದಿಂದ ಆಗುವ ಕೆಟ್ಟ ಪರಿಣಾಮಗಳು ಸರ್ಕಾರದ ಕಣ್ಣಿಗೆ ಕಾಣದಿರುವುದು ವಿಪರ್ಯಾಸವಾಗಿದೆ. ಮದ್ಯ ಮಾರಾಟ ನಿಷೇಧವಾದ ದಿನದಿಂದ ಮದ್ಯವ್ಯಸನಿಗಳು ಇದರಿಂದ ದೂರ ಉಳಿಯುವ ಸಂಕಲ್ಪ ಮಾಡಿ ಸುಂದರ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಸರ್ಕಾರದ ಕ್ರಮ ಅವರನ್ನು ಮತ್ತೆ ಕತ್ತಲೆಯ ಕೂಪಕ್ಕೆ ತಳ್ಳುವಂತದ್ದಾಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕರೊನಾ ವೇಳೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ ಪರಿಣಾಮ ರಾಜ್ಯದಲ್ಲಿ ಅಪಘಾತ, ಹಲ್ಲೆ, ಅಪರಾಧ ಚಟುವಟಿಕೆ, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಕಡಿಮೆಯಾಗಿ ಶಾಂತಿ, ಸುವ್ಯವಸ್ಥೆ, ಸುಖೀ ಕುಟುಂಬದ ವ್ಯವಸ್ಥೆ ಎಲ್ಲರ ಕಣ್ಣಮುಂದಿದೆ. ಆದ್ದರಿಂದ ಈಗ ಪುನರ್ ಪ್ರಾರಂಭಿಸಲು ಉದ್ದೇಶಿಸಿರುವ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಸಾರಾಯಿ ಮುಕ್ತ ರಾಜ್ಯ ಘೊಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೃಢ ನಿರ್ಧಾರ ಕೈಗೊಳ್ಳಬೇಕು. ಕುಡಿತದಿಂದ ದೂರವಾಗಿದ್ದ ಮನುಷ್ಯನನ್ನು ಮತ್ತೆ ಅದೇ ದಾರಿಗೆ ಕೊಂಡೊಯ್ಯುವ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

    ಅನುಮತಿ ನೀಡಿರುವುದು ಖಂಡನಾರ್ಹ

    ಗದಗ: ಕರೊನಾ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಮದ್ಯಮಾರಾಟಕ್ಕೆ ಕೇಂದ್ರ ಸರ್ಕಾರ ಮತ್ತೆ ಅನುಮತಿ ನೀಡಿರುವುದು ಅತ್ಯಂತ ಆಘಾತಕಾರಿಯಾಗಿದೆ. ಮದ್ಯಪಾನದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಮದ್ಯವ್ಯಸನಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಎಲ್ಲಿ ಬೇಕಾದಲ್ಲಿ ಬಿದ್ದು, ಹೊರಳಾಡಿ ಬಂದು ಮನೆಮಂದಿಗೆಲ್ಲ ಕರೊನಾ ಹಬ್ಬಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುವರು. ಮದ್ಯವ್ಯಸನಿಗಳಿಂದಾಗಿ ಮೊದಲು ಬೀದಿ ಪಾಲಾಗುತ್ತಿದ್ದ ಕುಟುಂಬಗಳು ಇನ್ನು ಮಸಣದ ಪಾಲಾಗುವ ದಿನಗಳು ದೂರವಿಲ್ಲ ಎನಿಸುತ್ತದೆ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರೊನಾದಿಂದಾಗಿ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಇದ್ದುದರಲ್ಲಿಯೇ ಸಂಸಾರ ನಿರ್ವಹಣೆ ಮಾಡಬೇಕಾದ ಸಂಕಷ್ಟ ಸ್ಥಿತಿ ಇದೆ. ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

    ಗಾಂಧಿ ನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ಅವರಿಂದ ಇಂಥ ಕ್ರಮವನ್ನು ಭಾರತದ ಸಭ್ಯ-ಸುಸಂಸ್ಕೃತ ಸಮಾಜ ನಿರೀಕ್ಷಿಸಿರಲಿಲ್ಲ. ಅವರ ಈ ನಡೆ ದೇಶದ ಬಗ್ಗೆ ಅವರಿಗಿರುವ ಕಾಳಜಿಯನ್ನು ಪ್ರಶ್ನಿಸುವಂತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಿದ ಅವರು ಕೇಂದ್ರದ ಈ ನಡೆಯಿಂದ ದೇಶದಲ್ಲಿ ಸಾಂಕ್ರಾಮಿಕ ರೋಗವಾಗಿರುವ ಕರೊನಾವನ್ನು ತಡೆಗಟ್ಟುವುದು ಅಸಾಧ್ಯವಾಗುತ್ತದೆ. ಶಿಸ್ತುಬದ್ಧ, ಸಂಯಮದಿಂದ ಕೂಡಿದ ಜೀವನ ಶೈಲಿಯಿಂದ ಮಾತ್ರ ನಾವು ಮಾನವ ಕುಲವನ್ನು ಸಂರಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts