More

    ಮದಿರೆಗಾಗಿ ಮುಗಿಬಿದ್ದ ಜನ

    ಲಕ್ಷ್ಮೇಶ್ವರ: ಸಂಪೂರ್ಣ ಲಾಕ್​ಡೌನ್ ಘೊಷಣೆ ಮಾಡಿದ್ದರಿಂದ ಮದ್ಯಪ್ರಿಯರು ಗುರುವಾರ ಬೆಳಗ್ಗೆ 10 ಗಂಟೆಯವರೆಗೆ ಮುಗಿಬಿದ್ದು ಮದ್ಯ ಖರೀದಿಸಿದರು.

    ಮದ್ಯದಂಗಡಿಗಳ ಎದುರು ಸರದಿಯಲ್ಲಿ ನಿಂತು ಮದ್ಯ ಖರೀದಿಸಿದರು. ಧಾರವಾಡ, ಹಾವೇರಿ ಜಿಲ್ಲೆಯ ಗಡಿಗ್ರಾಮಗಳವರು ಲಕ್ಷೆ್ಮೕಶ್ವರ ಪಟ್ಟಣಕ್ಕೆ ಬಂದು ಎಣ್ಣೆ ಕೊಂಡೊಯ್ದರು. 5 ದಿನಗಳ ಕಾಲ ಮದ್ಯ ಸಿಗುವುದಿಲ್ಲ ಎಂಬ ಕಾರಣದಿಂದ ಪರಸ್ಪರ ಅಂತರ ಮರೆತು, ಮಾಸ್ಕ್ ಧರಿಸದೆ ಮುಗಿಬಿದ್ದು ಮದ್ಯ ಖರೀದಿಸಿದರು. ಟಾಸ್ಕ್​ಪೋರ್ಸ್ ಸಮಿತಿಯು ಪಟ್ಟಣದಲ್ಲಿ ಸಂಚರಿಸಿ ಪರಿಶೀಲಿಸಿತು. 10 ಗಂಟೆ ನಂತರ ಮುಖ್ಯ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯವರು ತಪಾಸಣೆಗೆಗಿಳಿದು, ವಾಹನಗಳ ಸವಾರರಿಗೆ ಬಿಸಿ ಮುಟ್ಟಿಸಿದರು. ವಿನಾಕಾರಣ ತಿರುಗಾಡುತ್ತಿದ್ದ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು. ಅನೇಕ ವಾಹನಗಳ ಮಾಲೀಕರಿಗೆ ದಂಡ ವಿಧಿಸಿದರು. ಶುಕ್ರವಾರದಿಂದ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಎಸ್​ಐ ಶಿವಯೋಗಿ ಲೋಹಾರ ತಿಳಿಸಿದ್ದಾರೆ.

    ಮದ್ಯದ ಅಂಗಡಿಗಳು ಸೀಲ್

    ಲಕ್ಷ್ಮೇಶ್ವರ: ಸಂಪೂರ್ಣ ಲಾಕ್​ಡೌನ್ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಅಧಿಕೃತ ಮದ್ಯ ಮಾರಾಟದ ಅಂಗಡಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ಬಂದ್ ಮಾಡಿಸಿ ಬೀಗ ಜಡಿದರು. ಯಾವುದೇ ಕಾರಣಕ್ಕೂ 5 ದಿನಗಳ ಕಾಲ ಬೀಗ ತೆರೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಬಕಾರಿ ನಿರೀಕ್ಷಕ ಮಹೇಶ ಕುಂಬಾರ ಮಾತನಾಡಿ, ‘ಈಗಾಗಲೇ ಎಲ್ಲ ಅಂಗಡಿಗಳ ಸ್ಟಾಕ್ ವಿವರ ಪಡೆದು ಅಂಗಡಿಗಳನ್ನು ಸೀಲ್ ಮಾಡಲಾಗಿದೆ. 5 ದಿನಗಳ ಕಾಲ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಇಲಾಖೆ ನಿಗಾ ವಹಿಸಲಿದೆ. ನಿಯಮ ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಲಾಕ್​ಡೌನ್ ಮುಗಿದ ನಂತರ ಅಂಗಡಿಗಳಲ್ಲಿ ಸ್ಟಾಕ್ ಪರಿಶೀಲಿಸಲಾಗುತ್ತದೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

    ಅಂತರ ಮರೆತು ಖರೀದಿ

    ಶಿಗ್ಲಿ: ಗ್ರಾಮದ ವೈನ್​ಶಾಪ್​ನಲ್ಲಿ ಮದ್ಯಪ್ರಿಯರು ಗುರುವಾರ ಪರಸ್ಪರ ಅಂತರ ಕಾಪಾಡಿಕೊಳ್ಳದೆ ಹಾಗೂ ಮಾಸ್ಕ್ ಧರಿಸದೇ ಮುಗಿಬಿದ್ದು ಎಣ್ಣೆ ಖರೀದಿಸಿದರು. ಗ್ರಾಮದ ಹಳೆಯ ಬಸ್ ನಿಲ್ದಾಣದ ಹತ್ತಿರ ಇರುವ ವೈನ್ ಶಾಪ್ ಎದುರು ಬೆಳಗ್ಗೆ 5 ಗಂಟೆಯಿಂದ ಬಾಗಿಲು ತೆಗೆಯುವವರೆಗೂ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದರು. ಗ್ರಾಮ ಹಾಗೂ ಪಕ್ಕದ ಹಾವೇರಿ ಜಿಲ್ಲೆಯ ಗಡಿ ಗ್ರಾಮಗಳಾದ ಹೂವಿನಶಿಗ್ಲಿ, ಯಲವಗಿ, ಅಲ್ಲಿಪುರ, ಬಸವನಕೊಪ್ಪ, ನಾಯಿಕೆರೂರು, ಹೆಸರೂರು, ಕಡಕೋಳ, ಇತರ ಗ್ರಾಮಗಳ ಜನರು ಶಿಗ್ಲಿ ಗ್ರಾಮಕ್ಕೆ ಬಂದು ಬಾಕ್ಸ್​ಗಟ್ಟಲೆ ಮದ್ಯ ಖರೀದಿಸಿ ಚೀಲಗಳಲ್ಲಿ ತುಂಬಿಕೊಂಡು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts