More

    ಮತ್ತೆ 3 ಕರೊನಾ ಸೋಂಕು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 3 ಕೋವಿಡ್ (ಕರೊನಾ) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    53 ವರ್ಷದ ಮಹಿಳೆ, 32 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ಎಂದು ಅವರನ್ನು ಗುರುತಿಸಲಾಗಿದೆ.

    ಈ ಮೂವರೂ ಮಹಿಳೆಯರು ಮೇ 23ರಂದು ಸೋಂಕು ದೃಢಪಟ್ಟಿದ್ದ ನಾಲ್ವರು ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಸೋಂಕು ದೃಢಪಟ್ಟಿರುವ ಮೂವರೂ ಮಹಿಳೆಯರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು.

    ಗಂಟಲದ್ರವ ಪರೀಕ್ಷೆ ವರದಿ ಬಂದಾಗ ಕರೊನಾ ಸೋಂಕು ದೃಢಪಡುತ್ತಿದ್ದಂತೆ ಅವರನ್ನು ಹುಬ್ಬಳ್ಳಿ ಕಿಮ್ಸ್​ನ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ.

    ಹೊಸ 3 ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಈಗಾಗಲೇ 28 ಜನರಿಗೆ ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    * ಮಹಾರಾಷ್ಟ್ರದಿಂದ…: ಮೇ 23ರಂದು ಸೋಂಕು ದೃಢಪಟ್ಟವರು ಮಹಾರಾಷ್ಟ್ರದಿಂದ ಬಂದಿದ್ದರು. ಅವರು ಮೂಲತಃ ಧಾರವಾಡ ತಾಲೂಕಿನ ಹಳ್ಳಿಯೊಂದರ ನಿವಾಸಿಗಳಾಗಿದ್ದು, ಹಲವು ವರ್ಷಗಳಿಂದ ಮುಂಬೈನಲ್ಲಿ ವ್ಯವಹಾರ ಮಾಡಿಕೊಂಡು ನೆಲೆಸಿದ್ದಾರೆ ಎನ್ನಲಾಗಿದೆ.

    ಕರೊನಾ ಮೂರನೇ ಹಂತಕ್ಕೆ ಇಳಿದಿರುವ ಮುಂಬೈನಲ್ಲಿ ಲಾಕ್​ಡೌನ್ ಮತ್ತು ರೋಗ ಭೀತಿಯ ಕಾರಣದಿಂದ ಈ ಕುಟುಂಬದವರು ಧಾರವಾಡ ತಾಲೂಕಿನ ಮೂಲ ಮನೆಯಲ್ಲಿ ಒಂದಿಷ್ಟು ದಿನ ಸುರಕ್ಷಿತವಾಗಿ ಇರಲೆಂದು ಬಂದಿದ್ದರು. ಆದರೆ, ಅಷ್ಟರಲ್ಲೇ ನಾಲ್ವರಿಗೆ ಕರೊನಾ ಸೋಂಕು ತಗುಲಿತ್ತು. ಅದು ಇಲ್ಲಿಯ ಕೃಷಿ ವಿವಿ ಆವರಣದ ಆಗಮನ ಕೇಂದ್ರದಲ್ಲಿ ಗಂಟಲ ದ್ರವ ತಪಾಸಣೆ ಮಾಡಿದಾಗ ಖಾತ್ರಿಯಾಯಿತು. ನಂತರ ಅವರನ್ನು ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆ ಕುಟುಂಬದೊಟ್ಟಿಗೆ ಸಂಪರ್ಕ ಬಂದಿರುವ ಇತರರು ಕ್ವಾರಂಟೈನ್​ದಲ್ಲಿದ್ದರು. ಅವರಲ್ಲಿ ಈಗ ಮೂವರು ಮಹಿಳೆಯರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

    ಮುಂಬೈನಿಂದ ಬಂದರೂ ಕೆಲವೇ ಕಿ.ಮೀ. ದೂರದ ಊರಿಗೆ ಹೋಗಲು ಬಿಡದಂತೆ ಕುಟುಂಬವನ್ನು ಕರೊನಾ ಕಾಡುತ್ತಿದೆ ಎಂದು ಅವರ ಬಂಧುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಮುಂಬೈಗಿಂತ ಉತ್ತಮ ಚಿಕಿತ್ಸೆ ಇಲ್ಲಿ ದೊರೆಯುತ್ತಿದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರದ ಕಾಳಜಿ ಮೆಚ್ಚಲೇಬೇಕಾದುದು ಎಂದು ಸಂತ್ರಸ್ತ ಕುಟುಂಬದವರು ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    * ಶೇ. 50ರ ಸಮೀಪ ಗುಣ: ಮಾರಣಾಂತಿಕ ಕರೊನಾ ಸೋಂಕನ್ನು ಕಡಿಮೆ ಮಾಡುವಲ್ಲಿ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ. ಇದರ ಪ್ರತಿಫಲವಾಗಿ, ಶೇ. 50ರಷ್ಟು ರೋಗಿಗಳಿಗೆ ಗುಣವಾಗಿದೆ. 60 ವರ್ಷ ಮೀರಿದ ಹಾಗೂ ಮಧುಮೇಹ ಸೇರಿ ಇತರ ಕಾಯಿಲೆ ಇರುವ ರೋಗಿಗಳನ್ನೂ ಗುಣಪಡಿಸಿರುವುದು ಗಮನಾರ್ಹವಾಗಿದೆ.

    ಪತ್ತೆಯಾಗದ ಮೂಲ: ಅನೇಕ ಪ್ರಕರಣಗಳಲ್ಲಿ ರೋಗಿಗೆ ಸೋಂಕು ಎಲ್ಲಿಂದ ಬಂತು ಎನ್ನುವುದು ಪತ್ತೆಯಾಗಿದೆ. ಆದರೆ, ಹುಬ್ಬಳ್ಳಿ ಶಾಂತಿನಗರದ ಓರ್ವ ವ್ಯಕ್ತಿ (ಈಗ ಗುಣವಾಗಿ ಬಿಡುಗಡೆಯಾಗಿದ್ದಾರೆ), ಕಲಘಟಗಿ ತಾಲೂಕು ಬಿ. ಗುಡಿಹಾಳದ ವ್ಯಕ್ತಿಗೆ ಕರೊನಾ ಬಂದಿದ್ದು ಎಲ್ಲಿಂದ ಎಂದು ಗೊತ್ತಾಗುತ್ತಿಲ್ಲ. ಬಿ. ಗುಡಿಹಾಳದ ವ್ಯಕ್ತಿ ಹುಬ್ಬಳ್ಳಿ ಎಪಿಎಂಸಿಗೆ ಕೆಲವು ಸಲ ಬಂದಿದ್ದನ್ನು ಬಿಟ್ಟರೆ ಬಹುತೇಕ ದಿನಗಳನ್ನು ಕಲಘಟಗಿ ತಾಲೂಕಿನಲ್ಲೇ ಕಳೆದಿದ್ದಾನೆ. ಆ ತಾಲೂಕಿನಲ್ಲಿ ಈತನೇ ಮೊದಲ ಸೋಂಕಿತ. ಇದುವರೆಗೆ ಸೋಂಕಿತರಾದ ಯಾವ ವ್ಯಕ್ತಿಯೂ ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ಕೊಟ್ಟಿದ್ದಾಗಿ ಪ್ರಯಾಣದ ಇತಿಹಾಸ ನೀಡುವಾಗ ತಿಳಿಸಿಲ್ಲ. ಆದಾಗ್ಯೂ ಬಿ. ಗುಡಿಹಾಳದ ವ್ಯಕ್ತಿಗೆ ಕರೊನಾ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

    ಹಲವರ ನಿರ್ಲಕ್ಷ್: ಧಾರವಾಡ ಜಿಲ್ಲೆಯಲ್ಲಿ ಕರೊನಾ ಅರ್ಧ ಶತಕ ಬಾರಿಸಿ ಮುನ್ನುಗ್ಗುತ್ತಿದ್ದರೂ ಮನೆಯಿಂದ ಹೊರಗೆ ಬರುವ ಹಲವರಲ್ಲಿ ಸ್ವ ರಕ್ಷಣೆಯ ಜಾಗೃತಿ ಮೂಡಿದಂತೆ ಕಂಡುಬರುತ್ತಿಲ್ಲ. ಮಾಸ್ಕ್ ಧರಿಸದ, ಪರಸ್ಪರರ ಮಧ್ಯೆ ಸುರಕ್ಷಿತ ಅಂತರ ಇಟ್ಟುಕೊಳ್ಳಲು ಕಾಳಜಿ ವಹಿಸದ ಜನರು ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಯ ಯಾವ ಭಾಗಕ್ಕೆ ಹೋದರೂ ಕಂಡುಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts