More

    ಮತಾಂತರಗೊಳ್ಳದ ಸವಿತಾ ಸಮಾಜ – ವಿಶ್ವನಾಥ ಸ್ವದೇಶಿ ಹೇಳಿಕೆ – ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ

    ದಾವಣಗೆರೆ: ಪರಕೀಯರ ದಾಳಿ ಅಥವಾ ದೌರ್ಜನ್ಯದಿಂದ ಎಲ್ಲ ಸಮಾಜಗಳು ಮತಾಂತರಗೊಂಡ ದಾಖಲೆಗಳಿವೆ. ಆದರೆ ಸವಿತಾ ಸಮಾಜ ಮಾತ್ರ ಅದರಿಂದ ದೂರ ಉಳಿದಿದೆ ಎಂದು ಸಮಾಜದ ಹಿರಿಯ ಮುಖಂಡ ವಿಶ್ವನಾಥ ಸ್ವದೇಶಿ ಶ್ಲಾಘಿಸಿದರು.
    ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿನ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹತ್ತನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
    ಜಗತ್ತಿನಲ್ಲೇ ಶ್ರೇಷ್ಠ ಸಮಾಜ ನಮ್ಮದು. ಹೀಗಾಗಿ ಸಮಾಜದ ಬಗ್ಗೆ ಕೀಳರಿಮೆ ಬೇಕಿಲ್ಲ. ನಮ್ಮ ಸಮಾಜದ ಹೆಸರನ್ನು ಮುಚ್ಚುಮರೆ ಮಾಡುವುದರಿಂದ ಲಾಭವಿಲ್ಲ. ಸವಿತಾ ಸಮಾಜ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಹೇಳಿದರು.
    ಮಹಾಪದ್ಮ ನಂದನ ವಂಶಸ್ಥರಾದ ನಾವು ರಾಜಸಂತತಿಯವರು. ನಮ್ಮದು ಸಣ್ಣ ಸಮಾಜವಲ್ಲ. ಸಮುದಾಯವು 27 ವಿವಿಧ ಹೆಸರಿನಲ್ಲಿ ಹಂಚಿಹೋಗಿದ್ದು ಐಕ್ಯತೆ ಕೊರತೆ ಇದೆ. ಸಮಾಜಕ್ಕೆ ನಾವು ಗೌರವ ತಂದುಕೊಡಬೇಕಿದೆ ಎಂದು ತಿಳಿಸಿದರು.
    ಸವಿತಾ ಸಮಾಜದವರು ರೈತ ಜೀವಿಗಳು. ಇದರ ಜತೆಗೆ ಕ್ಷೌರಿಕ ಕೆಲಸವನ್ನು ಉಪವೃತ್ತಿಯಾಗಿ ಮಾಡಿಕೊಳ್ಳಲಾಗಿದೆ. ನಮ್ಮ ಹಿಂದಿನ ವ್ಯವಸ್ಥೆಯಲ್ಲಿ ಧಾನ್ಯಗಳನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದೆವು. ಹಣಕ್ಕೆ ಇದೀಗ ಪ್ರಾಮುಖ್ಯ ಬಂದನಂತರದಲ್ಲಿ ವ್ಯತ್ಯಾಸ ಶುರುವಾಗಿದೆ.
    ವೈದ್ಯ, ಇಂಜಿನಿಯರ್, ವಕೀಲ, ಪೊಲೀಸ್ ಮೊದಲಾದ ಹುದ್ದೆಗಳೆಲ್ಲವೂ ಇಂದು ಜಾತಿಯಾಗಿವೆ. ಆಯಾ ವೃತ್ತಿಪರರು ತಮ್ಮೊಳಗೆ ವೈವಾಹಿಕ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಾವು ಜಾತಿಗೆ ಪ್ರಾಮುಖ್ಯ ಕೊಡಬೇಕಿಲ್ಲ ಎಂದು ಹೇಳಿದರು.
    ನಂಜಾವಧೂತರು, ಕೌಂಡಿಲ್ಯ ಎಂಬ ಪ್ರವರ್ತಕ ನಮ್ಮ ಸಮಾಜದವರು. ಕೋಲಾರ ಜಿಲ್ಲೆಯಲ್ಲಿ ಆತನ ಹೆಸರಿನ ಶಿವಾಲಯವಿದೆ. ಜಗತ್ತಿನ ಎಲ್ಲ ಮೂಲೆಯಲ್ಲೂ ಸವಿತಾ ಸಮಾಜದವರಿದ್ದೇವೆ. ಸಮುದಾಯದ ಬಗ್ಗೆ ಹಿರಿಮೆ ಬೆಳೆಸಿಕೊಂಡಲ್ಲಿ, ನಮಗೆ ತಲೆಯನ್ನಷ್ಟೇ ನೀಡುತ್ತಿರುವ ಜಗತ್ತು ಶಾಶ್ವತವಾಗಿ ಬಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಸಮಾಜದ ವಿದ್ಯಾರ್ಥಿಗಳು ಜಾಣರಿದ್ದಾರೆ. ಅವರ ಅಂತರಾಳದ ಪ್ರಶ್ನೆಗಳ ಮೂಲಕ ಅಭಿವೃದ್ಧಿ ಕಾಣಬೇಕಿದೆ. ಸಮಾಜದ ಇನ್ನಷ್ಟು ಜನರು ಪ್ರಗತಿ ಕಾಣಲು ಪ್ರೇರಣೆ ಆಗಬೇಕಿದೆ ಎಂದೂ ಆಶಿಸಿದರು.
    ಸವಿತಾ ಸಮಾಜದ ಮುಖಂಡ ಕೃಷ್ಣಪ್ಪ ಎಂ. ದಾಸರಹಳ್ಳಿ ಮಾತನಾಡಿ ಶಿವನ ವಂಶಸ್ಥರಾದ ಸವಿತಾ ಸಮಾಜದವರಿಗೆ ಮದುವೆ, ಜವುಳ ಸೇರಿ ಶುಭ ಸಮಾರಂಭಗಳಲ್ಲಿ ಸದಾ ಗೌರವ ಸ್ಥಾನವಿದೆ. ಕ್ಷೌರಿಕ ವೃತ್ತಿ ಬಗ್ಗೆ ಅಗೌರವ ಬೇಡ ಎಂದು ಕಿವಿಮಾತು ಹೇಳಿದರು.
    ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಭೀಮಸೇನ, ಭದ್ರಾವತಿಯ ಶಿಲ್ಪಿ ಎಂ.ವಿ.ಎ.ವಿಶ್ವಾಸ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಬಾಲರಾಜ್ ಉಪ್ಪಾಲ, ರಾಜು ಗೌಡರ್, ನಾಗರಾಜ್ ಸಾಸ್ವೇಹಳ್ಳಿ, ಬಾಲರಾಜ್, ನರಸಿಂಹಮೂರ್ತಿ, ಬಿ.ಲಿಂಗಪ್ಪ, ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ನಾಗರಾಜ್, ಉಪಾಧ್ಯಕ್ಷ ಪಿ.ಬಿ.ವೆಂಕಟಾಚಲಪತಿ, ನಿವೃತ್ತ ಸ್ಟೆನೋಗ್ರಾಫರ್ ಅವದೇಶ ಕುಮಾರ ನಂದ ಇತರರಿದ್ದರು. ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts