More

    ಮತದಾರ ಸೆಳೆಯಲು ಕಾರ್ಯತಂತ್ರ

    ಬೆಳಗಾವಿ: ವಿಧಾನ ಪರಿಷತ್‌ನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಸಂಕಲ್ಪ ತೊಟ್ಟಿರುವ ಬಿಜೆಪಿ ನಾಯಕರು ಒಬ್ಬ ಮತದಾರನಿಗೆ ಐದು ಜನ ಕಾರ್ಯಕರ್ತರನ್ನು ನಿಯೋಜಿಸಲು ನಿರ್ಧರಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿಧಾನ ಪರಿಷತ್‌ನ ಚುನಾವಣೆ ಕುರಿತು ಪಕ್ಷದ ಸಂಸದರು, ಹಾಲಿ, ಮಾಜಿ ಶಾಸಕರು, ಅಭ್ಯರ್ಥಿಗಳು, ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.

    ಕಳೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಮತದಾರರನ್ನು ಹಿಡಿದಿಟ್ಟುಕೊಳ್ಳಲು ವಿಶೇಷ ಕಾರ್ಯತಂತ್ರ ರೂಪಿಸುತ್ತಿದ್ದು, ಒಬ್ಬ ಮತದಾರರನಿಗೆ 5 ಜನ ಕಾರ್ಯಕರ್ತರನ್ನು ನೇಮಿಸುತ್ತಿದೆ.
    ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರದ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 20,564 ಮಹಿಳೆಯರು, 52,104 ಪುರುಷ ಮತದಾರರಿದ್ದಾರೆ. ಅವರೆಲ್ಲರನ್ನು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಲು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ರಚಿಸಲು ಮುಖಂಡರು ನಿರ್ದೇಶಿಸಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

    ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಹಾಲಿ, ಮಾಜಿ ಶಾಸಕರು ಮುಂದಾಳತ್ವ ವಹಿಸಿಕೊಳ್ಳುವುದು ಸೇರಿ ಅಭ್ಯರ್ಥಿಗಳ ಗೆಲುವಿನ ದಾರಿ ಸುಗಮಗೊಳಿಸಲು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಎಂಎಲ್‌ಸಿ ಎನ್.ರವಿಕುಮಾರ, ಸಂಸದೆ ಮಂಗಲ ಅಂಗಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಪಿ.ರಾಜೀವ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಅಭ್ಯರ್ಥಿ ಹಣಮಂತ ನಿರಾಣಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಜಗದೀಶ ಮೆಟಗುಡ್ಡ, ರಮೇಶ ದೇಶಪಾಂಡೆ ಇತರರಿದ್ದರು.

    ಮಹಿಳಾ ಮತದಾರರೇ ಗುರಿ

    ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರದಲ್ಲಿ 26 ಸಾವಿರಕ್ಕೂ ಅಧಿಕ ಮಹಿಳಾ ಮತದಾರರಿದ್ದಾರೆ. ಅವರಲ್ಲಿ 20 ಸಾವಿರಕ್ಕೂ ಅಧಿಕ ಪದವಿ ಮತದಾರರಿರುವುದರಿಂದ ಪಕ್ಷದ ಮಹಿಳಾ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿ ಕೆಲಸ ಮಾಡಬೇಕು. ಮಹಿಳಾ ಮತದಾರರನ್ನು ನೇರವಾಗಿ ಸಂಪರ್ಕಿಸಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮನವರಿಕೆ ಮಾಡಿಕೊಡಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲು ಪಕ್ಷದ ನಾಯಕರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts