More

    ಮತದಾರರ ಹಂಚಿಕೆಯಲ್ಲಿ ಪಾಲಿಕೆ ಎಡವಟ್ಟು

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಲೋಪಗಳ ಸರಣಿ ಮುಂದುವರಿದಿದೆ. ಈ ಮೊದಲು ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ ವಾರ್ಡ್​ವಾರು ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ನಿಗದಿ ಬಳಿಕ ಇದೀಗ ಕರಡು ಮತದಾರರ ಪಟ್ಟಿಯ ಸರದಿ.

    ಸೋಮವಾರ ಮಧ್ಯರಾತ್ರಿ ಬಹಿರಂಗಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಪ್ರತಿ ವಾರ್ಡ್​ಗಳಿಗೆ ಹಂಚಿಕೆ ಮಾಡಿರುವ ಮತದಾರರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ, ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಮಹಾನಗರ ಪಾಲಿಕೆ ಗುರಿಯಾಗಿದೆ. ಕೆಲವೊಂದು ವಾರ್ಡ್​ಗಳಲ್ಲಿ 6 ಸಾವಿರಕ್ಕಿಂತ ಕಡಿಮೆ ಮತದಾರರಿದ್ದರೆ, ಒಂದಿಷ್ಟು ವಾರ್ಡ್​ಗಳಲ್ಲಿ ಮತದಾರರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ವಾರ್ಡ್​ವಾರು ಮತದಾರರ ಸಂಖ್ಯೆಯಲ್ಲಿ ಇಷ್ಟರಮಟ್ಟಿಗೆ ವ್ಯತ್ಯಾಸ ಕಂಡುಬಂದಿರುವುದು ದೊಡ್ಡ ಲೋಪವೇ ಆಗಿದೆ. ಇದರಿಂದ ಮತದಾರರ ಪಟ್ಟಿ ತಯಾರಿಯಲ್ಲಿ ಪಾಲಿಕೆ ಅಧಿಕಾರಿಗಳು ಎಡವಿರುವುದು ಸ್ಪಷ್ಟವಾಗುತ್ತಿದೆ.

    ಈ ಹಿಂದೆ ವಾರ್ಡ್​ವಾರು ಕ್ಷೇತ್ರ ಮರುವಿಂಗಡಣೆ ಮಾಡುವಾಗ 9ರಿಂದ 14 ಸಾವಿರ ಜನಸಂಖ್ಯೆಗೆ ಒಂದರಂತೆ ವಾರ್ಡ್ ರಚಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿತ್ತು. ನಗರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಮತದಾರರ ಸಂಖ್ಯೆ ಶೇ. 70 ರಷ್ಟು ಇರುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಲೆಕ್ಕಚಾರದಲ್ಲಿ ನೋಡಿದರೆ ಪ್ರತಿ ವಾರ್ಡ್​ನ ಮತದಾರರ ಸಂಖ್ಯೆ 6300 ರಿಂದ 9800 ನಡುವೆ ಇರಬೇಕಿತ್ತು. ಇನ್ನೊಂದು ಲೆಕ್ಕಾಚಾರದಲ್ಲಿ ಅವಳಿ ನಗರದ ಒಟ್ಟು ಮತದಾರರ ಸಂಖ್ಯೆಯನ್ನು (8,11,881) 82 ವಾರ್ಡ್​ಗಳಿಗೆ ಸಮಾನವಾಗಿ ಹಂಚಿಕೆ ಮಾಡಿದರೆ ಸರಾಸರಿ ಮತದಾರರ ಸಂಖ್ಯೆ 9900 ಬರುತ್ತದೆ. ಆದರೆ, ಕರಡು ಮತದಾರರ ಪಟ್ಟಿಯು ಈ ಯಾವ ಲೆಕ್ಕಾಚಾರಕ್ಕೂ ತಾಳೆಯಾಗುವುದಿಲ್ಲ.

    ವಾರ್ಡ್ ಸಂಖ್ಯೆ 51ರಲ್ಲಿ 5607, 41ರಲ್ಲಿ 6929, 42ರಲ್ಲಿ 6697, 79ರಲ್ಲಿ 6412 ಮತದಾರರಿದ್ದಾರೆ. ವಾರ್ಡ್ ಸಂಖ್ಯೆ 32ರಲ್ಲಿ 15068, 77ರಲ್ಲಿ 15648 ಮತದಾರರು ಸೇರ್ಪಡೆಯಾಗಿದ್ದಾರೆ. ವಾರ್ಡ್​ವಾರು ಮತದಾರರ ಸಂಖ್ಯೆಯಲ್ಲಿ ಇಷ್ಟರಮಟ್ಟಿಗೆ ಭಾರಿ ಅಂತರ ಕಾಣಿಸಿಕೊಳ್ಳುತ್ತದೆ ಎಂದಾದರೆ ವಾರ್ಡ್​ವಾರು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೇ ಸರಿಯಾಗಿ ನಡೆದಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ.

    ಕಾಟಾಚಾರದ ಕೆಲಸ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸಬೇಕೆಂದು ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಜೂ. 14ರಂದು ಹೊರಡಿಸಿದ್ದ ಆದೇಶ 17ರಂದು ಪಾಲಿಕೆ ಆಯುಕ್ತರ ಕೈ ಸೇರಿತ್ತು. ಮಾರನೇ ದಿನ ರಾಜ್ಯ ಸಚಿವ ಸಂಪುಟವು ಮುಂದಿನ 6 ತಿಂಗಳವರೆಗೆ ಯಾವುದೇ ಚುನಾವಣೆ ನಡೆಸದಿರಲು ತೀರ್ಮಾನ ಕೈಗೊಂಡಿತ್ತು. ಇದರಿಂದ ಮತದಾರರ ಪಟ್ಟಿ ತಯಾರಿಸಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೆ ಪಾಲಿಕೆ ಅಧಿಕಾರಿಗಳು ಸಿಲುಕಿದ್ದರು. ಈ ಕುರಿತು ಸ್ಪಷ್ಟನೆ ಕೇಳಿದಾಗ ‘ಹೈಕೋರ್ಟ್ ತೀರ್ಪಿನಂತೆ ಚುನಾವಣೆ ನಡೆಸಬೇಕಿದೆ ಹಾಗೂ ಮತದಾರರ ಪಟ್ಟಿ ತಯಾರಿ ಕೆಲಸ ಮುಂದುವರಿಸಿ’ ಎಂದು ಆಯೋಗವು ಪಾಲಿಕೆಗೆ ಸೂಚಿಸಿತ್ತು. ಆಯೋಗದ ಭಯದಿಂದ ಪಾಲಿಕೆ ಅಧಿಕಾರಿಗಳು ತರಾತುರಿಯಲ್ಲಿ ಮತದಾರರ ಪಟ್ಟಿ ತಯಾರಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆಯೋಗ ಸೂಚಿಸಿದ ವೇಳಾಪಟ್ಟಿಯಂತೆ ಜೂ. 28ರಂದೇ ಕರಡು ಮತದಾರರ ಪಟ್ಟಿ ಪ್ರಕಟಿಸಬೇಕೆಂಬ ಒತ್ತಡಕ್ಕೆ ಸಿಲುಕಿದ್ದ ಪಾಲಿಕೆ ಆಧಿಕಾರಿಗಳು ಕಾಟಾಚಾರದ ಕೆಲಸ ಮಾಡಿರುವುದು ಕಂಡು ಬರುತ್ತಿದೆ.

    9 ರಿಂದ 14 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಮರುವಿಗಂಡಣೆ ಮಾಡಲಾಗಿದೆ. ಕೆಲ ವಾರ್ಡ್​ಗಳಲ್ಲಿ 5 ಸಾವಿರ, ಕೆಲ ವಾರ್ಡ್​ಗಳಲ್ಲಿ 15 ಸಾವಿರ ಮತದಾರರು ಹೇಗೆ ಸೇರ್ಪಡೆಯಾದರು ಎಂಬುದರ ಕುರಿತು ಪರಿಶೀಲನೆ ಮಾಡಿಸುತ್ತೇನೆ. ಇದು ಕರಡು ಪಟ್ಟಿ. ಅಂತಿಮ ಮತದಾರರ ಪಟ್ಟಿಯಲ್ಲಿ ಸರಿಪಡಿಸಲು ಅವಕಾಶವಿದೆ.
    ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತರು

    ಪಾಲಿಕೆ ಅಧಿಕಾರಿಗಳು ಮಧ್ಯರಾತ್ರಿ ಮನೆಗೆ ಬಂದು ನಿದ್ರೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕರಡು ಮತದಾರರ ಪಟ್ಟಿ ನೀಡಿ ಹೋಗಿದ್ದಾರೆ. ಹಿಂದೆಂದೂ ಹೀಗೆ ಆಗಿರಲಿಲ್ಲ. ಚುನಾವಣೆ ಆಯೋಗಕ್ಕೆ ಹೆದರಿ ಪಾಲಿಕೆ ಅಧಿಕಾರಿಗಳು ಕರಡು ಮತದಾರರ ಪಟ್ಟಿ ತಯಾರಿಸಿದ್ದಾರೆ. ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ತಕರಾರು ಸಲ್ಲಿಸಲಾಗುವುದು.
    ಅಲ್ತಾಫ ಹಳ್ಳೂರು, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಚುನಾವಣೆ ಪೂರ್ವವೇ ಕೆಲವರನ್ನು ಗೆಲ್ಲಿಸುವ ಉದ್ದೇಶದಿಂದ ಕೆಲ ವಾರ್ಡ್​ಗಳ ಮತದಾರರ ಸಂಖ್ಯೆಯನ್ನು 5-6 ಸಾವಿರ ನಡುವೆ ನಿಗಪಡಿಸಲಾಗಿದೆ. ಈ ಕಾರಣಕ್ಕಾಗಿಯೇ ಕೆಲ ವಾರ್ಡ್​ಗಳ ಮತದಾರರ ಸಂಖ್ಯೆ 13ರಿಂದ 15 ಸಾವಿರ ದಾಟಿದೆ.
    ಪ್ರೇಮನಾಥ ಚಿಕ್ಕತುಂಬಳ, ಜಿಲ್ಲಾಧ್ಯಕ್ಷ ಬಹುಜನ ಸಮಾಜ ಪಕ್ಷ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts