More

    ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್

    ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್ ಆಗಿರುವ ಸುದ್ದಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

    ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪ್ರಭಾವಿಗಳ ಮತ್ತು ಅಧಿಕಾರಿಗಳ ಕೈಚಳಕದಿಂದಾಗಿ ಗ್ರಾಮದಲ್ಲಿನ ಅಂದಾಜು 86 ಮತದಾರರ ಹೆಸರು ವಾರ್ಡ್​ನಿಂದ ವಾರ್ಡ್​ಗೆ ಬದಲಾವಣೆಯಾಗಿದೆ. ಆದರೆ, ಚುನಾವಣೆ ಆಯೋಗದ ನಿಯಮದ ಪ್ರಕಾರ ಯಾವುದೇ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆ ಮಾಡಿಸಲು ನಿಗದಿತ ಅರ್ಜಿ ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಆಯಾ ಭಾಗದ ಬಿಎಲ್​ಒಗಳಿಗೆ ಅಥವಾ ತಹಸೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಆಗಲೂ ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳು ಎಲ್ಲವನ್ನೂ ಪರಿಶೀಲನೆ ನಡೆಸಿದ ಬಳಿಕವೇ ಅರ್ಜಿ ಮಾನ್ಯವಾಗುತ್ತದೆ. ಆದರೆ, ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮತದಾರರ ಪಟ್ಟಿಯಲ್ಲಿ ಹೆಸರುಗಳು ವರ್ಗಾವಣೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

    ಗ್ರಾಮದಲ್ಲಿ ಒಟ್ಟು 5 ವಾರ್ಡ್​ಗಳಿವೆ. ಬಹುತೇಕ ಮತದಾರರ ಹೆಸರುಗಳು 5ನೇ ವಾರ್ಡ್​ಗೆ ವರ್ಗಾವಣೆಗೊಂಡಿರುವುದು ಗಮನಾರ್ಹ. ಹೆಸರು ವರ್ಗಾವಣೆಯಾದ ಬಗ್ಗೆ ಗಮನಕ್ಕೆ ಬಂದಿರುವ ಮತದಾರರು, ನಾವು ವರ್ಗಾವಣೆ ಮಾಡುವಂತೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಮತ್ತು ನಮಗೆ ಅವಶ್ಯಕತೆಯೂ ಇರಲಿಲ್ಲ ಎನ್ನುತ್ತಾರೆ.

    ಈ ಕುರಿತು 2ನೇ ವಾರ್ಡ್​ನ ಮತದಾರ ಮುತ್ತಣ್ಣ ನಾವಿ ಪ್ರತಿಕ್ರಿಯಿಸಿ, ‘ಮತದಾರರ ಗುರುತಿನ ಪತ್ರ, ರೇಷನ್​ಕಾರ್ಡ್, ರಹವಾಸಿ ಪತ್ರದಲ್ಲೂ 2ನೇ ವಾರ್ಡ್ ನಿವಾಸಿಗಳೆಂದೇ ದಾಖಲೆಗಳಿವೆ. ಮತದಾರರ ವರ್ಗಾವಣೆ ಮಾಡುವ ಅವಶ್ಯಕತೆ ನಮಗಿಲ್ಲ. ನಮ್ಮ ಗಮನಕ್ಕೆ ಬರದೇ 5ನೇ ವಾರ್ಡ್​ನ ಮತದಾರರ ಪಟ್ಟಿಯಲ್ಲಿ ನನ್ನ ಮತ್ತು ಕುಟುಂಬದ ಸದಸ್ಯರ ಹೆಸರುಗಳನ್ನು ಸೇರಿಸಲಾಗಿದೆ. ಈ ವಿಷಯವನ್ನು ತಹಸೀಲ್ದಾರರ ಗಮನಕ್ಕೆ ತಂದಿದ್ದು, ಮೊದಲಿನಂತೆ 2ನೇ ವಾರ್ಡ್​ಗೆ ಸೇರಿಸಲು ಕೋರಿದ್ದೇವೆ’ ಎಂದರು.

    ಬಾಲೇಹೊಸೂರ ಗ್ರಾಮದ ಮತದಾರರ ಪಟ್ಟಿಯ ಭಾಗ ಸಂಖ್ಯೆ 240ರಲ್ಲಿ 47 ಪುರುಷ ಮತ್ತು 39 ಮಹಿಳಾ ಮತದಾರರ ಹೆಸರುಗಳು ಬೇರೆ ವಾರ್ಡ್​ಗೆ ಸೇರ್ಪಡೆಯಾದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು. ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವಾರದೊಳಗಾಗಿ ಮತದಾರ ಪಟ್ಟಿಯಲ್ಲಾದ ವ್ಯತ್ಯಾಸ ಸರಿಪಡಿಸಲಾಗುವುದು.
    |ಯಲ್ಲಪ್ಪ ಗೋಣೆಣ್ಣನವರ, ತಹಸೀಲ್ದಾರ್ ಶಿರಹಟ್ಟಿ

    ಮತದಾರರ ಪಟ್ಟಿಯಲ್ಲಿನ ಹೆಸರುಗಳು ಬದಲಾವಣೆಯಾದ ಬಗ್ಗೆ ಗಮನಕ್ಕೆ ಬಂದಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಮತದಾರರು ತಮ್ಮ ಹೆಸರು ಬೇರೆಡೆ ವರ್ಗಾವಣೆಯಾಗಿರುವ ಬಗ್ಗೆ ಕೇಳುವ ಪ್ರಶ್ನೆಗೆ ನಾವು ಉತ್ತರಿಸಲು ಅಸಹಾಯಕರಾಗಿದ್ದೇವೆ.
    | ವಾರ್ಡ್​ಗಳ ಬಿಎಲ್​ಒಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts