More

    ಮತದಾನ ಪ್ರಕ್ರಿಯೆ ಮೇಲೆ ನಿಗಾ ವಹಿಸಿ

    ಹಾವೇರಿ: ಕೋವಿಡ್ ಹಾಗೂ ಆಯೋಗದ ಮಾರ್ಗಸೂಚಿಯಂತೆ ಮತದಾನದ ಪ್ರಕ್ರಿಯೆಗಳ ಮೇಲೆ ನಿಗಾವಹಿಸಿ ಕಾಲಕಾಲಕ್ಕೆ ಚುನಾವಣೆ ವೀಕ್ಷಕರಿಗೆ ವರದಿ ಮಾಡಬೇಕು ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ವೀಕ್ಷಕಿ ಡಾ. ಶಾಲಿನಿ ರಜನೀಶ ಸೂಚಿಸಿದರು.

    ಜಿಪಂ ಸಭಾಭವನದಲ್ಲಿ ಸೋಮವಾರ ಸಂಜೆ ಮೈಕ್ರೋ ವೀಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್​ಗಳನ್ನು, ಮತದಾನಕ್ಕೆ ನೀಲಿ ಮಾರ್ಕಿಂಗ್ ಪೆನ್​ಗಳನ್ನು ನೀಡಲಾಗುತ್ತದೆ. ಒಬ್ಬರು ಬಳಸಿದ ಮಾರ್ಕಿಂಗ್ ಪೆನ್​ಗಳನ್ನು ಮತ್ತೊಬ್ಬರು ಬಳಸುವ ಹಾಗಿಲ್ಲ. ಮತದಾನ ಪತ್ರದಲ್ಲಿ ಕಡ್ಡಾಯವಾಗಿ ಮೊದಲ ಪ್ರಾಶಸ್ತದ ಮತ ನಮೂದಿಸಲೇಬೇಕು. ಮತಗಳನ್ನು ಅಂಕಿಗಳಲ್ಲಿ ತಮಗೆ ನೀಡಿದ ಬ್ಯಾಲೆಟ್​ನಲ್ಲಿ ಬರೆಯಬೇಕು. ಇಲ್ಲವಾದರೆ ಮತ ತಿರಸ್ಕೃತವಾಗುತ್ತದೆ. ನೋಟಾ ಮತದಾನಕ್ಕೆ ಅವಕಾಶವಿಲ್ಲ ಎಂಬ ಸೂಚನೆಯನ್ನು ಮತದಾರರಿಗೆ ನೀಡಬೇಕು. ಮತದಾನ ಮಾಡಲು ಆಯೋಗ ನೀಡಿದ ಗುರುತು ಪತ್ರ ಅಥವಾ ಪಾನ್​ಕಾರ್ಡ್ ಅಥವಾ ಚಾಲನಾ ಪತ್ರ ಸೇರಿ ಆಯೋಗ ನಿಗದಿಪಡಿಸಿದ 9ದಾಖಲೆಗಳಲ್ಲಿ ಒಂದು ದಾಖಲೆ ಇದ್ದವರಿಗೆ ಅವಕಾಶ ಕಲ್ಪಿಸಬೇಕು ಎಂದರು.

    ಮತದಾನದ ಸಂದರ್ಭದಲ್ಲಿ ಕೊಠಡಿಯೊಳಗೆ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಅಭ್ಯರ್ಥಿಯ ಒಬ್ಬ ಏಜೆಂಟ್​ಗೆ ಮಾತ್ರ ಅವಕಾಶ ಕಲ್ಪಿಸಬೇಕು. ಮತದಾನ ಆರಂಭವಾಗುವ 15ನಿಮಿಷದ ಮುನ್ನ ಮತಗಟ್ಟೆಯಲ್ಲಿ ಹಾಜರಿರಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿ ಮತಗಟ್ಟೆಗಳಲ್ಲಿ ಪಾಲಿಸಬೇಕು ಎಂದರು.

    ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಒಂದೊಮ್ಮೆ ಕರ್ತವ್ಯದ ಸಂದರ್ಭದಲ್ಲಿ ಕರೊನಾ ಸೋಂಕಿಗೆ ಒಳಗಾದಲ್ಲಿ ಪೂರ್ಣಪ್ರಮಾಣದ ವೆಚ್ಚ ಭರಿಸಿ ಚಿಕಿತ್ಸೆ ಕೊಡಿಸಲಾಗುವುದು. ಮತಗಟ್ಟೆಗಳಲ್ಲಿ ಹೈಗ್ರೇಡ್ ಮೆಡಿಕಲ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಎರಡು ಹೆಲ್ತ್ ಡೆಸ್ಕ್​ಗಳನ್ನು ತೆರೆಯಲು ಕ್ರಮವಹಿಸಲಾಗಿದೆ. ಎಎನ್​ಎಂ, ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಸರದಿಯಂತೆ ವೈದ್ಯರು ಭೇಟಿ ನೀಡಲಿದ್ದಾರೆ. ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಸುರಕ್ಷತಾ ಕಿಟ್​ಗಳನ್ನು ನೀಡಲಾಗಿದೆ ಎಂದರು.

    ಮತದಾನದ ಸಂದರ್ಭದಲ್ಲಿ ಜ್ವರ ತಪಾಸಣೆ ನಡೆಸಲಾಗುವುದು. ಕೋವಿಡ್ ಸಂಶಯ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗುವುದು. ಹೊಂ ಐಸೊಲೇಷನ್ ಹಾಗೂ ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳಿಗೆ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ವಿಶೇಷ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಪಿಪಿಇ ಕಿಟ್​ಗಳನ್ನು ಒದಗಿಸಲಾಗುವುದು ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts