More

    ಮಠಗಳು ವಿಶ್ವಾಸ ಉಳಿಸಿಕೊಳ್ಳದಿದ್ದರೆ ಅಸಹನೀಯ ದಿನಗಳು

    ಚಿಕ್ಕಮಗಳೂರು: ಮಠ, ಮಂದಿರಗಳು ವಿಶ್ವಾಸದ ನಂಬಿಕೆಯ ತಾಣಗಳಾಗಿ ಉಳಿಯದಿದ್ದರೆ ಮುಂದಿನ ದಿನಗಳು ಅಸಹನೀಯವಾಗುತ್ತವೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಎಚ್ಚರಿಸಿದರು. ಕಂಚುಗಾರನಹಳ್ಳಿಯಲ್ಲಿ ಮಲ್ಲಮ್ಮ ಹಲಗಪ್ಪನವರ ಮನೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಶರಣರ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು. ಅಸ್ತಿತ್ವಕ್ಕಾಗಿ ಸಾಕ್ಷಿಪ್ರಜ್ಞೆ ಹರಾಜಿಗಿಡಬಾರದು. ಸರಿ-ತಪ್ಪುಗಳ ವಿಶ್ಲೇಷಣೆ ಮರೆಯಬಾರದು. ಅಧಿಕಾರ, ಹಣ, ಆಸ್ತಿ, ಶರೀರ ಯಾವುದೂ ಶಾಶ್ವತವಲ್ಲ. ಸಂಭ್ರಮ, ದುಃಖವೂ ಅಶಾಶ್ವತ. ಆದರೆ ನಮ್ಮ ಸತ್ಕಾರ್ಯ, ಔದಾರ್ಯ, ಪ್ರೀತಿಯ ಮಾಧುರ್ಯಗಳು ಶಾಶ್ವತ. ಸಮಾಜದಲ್ಲಿ ಹಿಗ್ಗನ್ನು ಹಿರಿದಾಗಿಸುವ ಕಾರ್ಯಗಳೇ ಸತ್ಸಂಗಗಳು. ಜೀವದಲ್ಲಿ ರಸದ ಘಳಿಗೆಯನ್ನು ಹೆಚ್ಚಿಸಿ ವಿಷದ ಗುಳಿಗೆ ಆಗದಿರುವಂತೆ ಸಾಕ್ಷಿಪ್ರಜ್ಞೆ ಸದಾ ನಮ್ಮನ್ನು ಜಾಗೃತಾವಸ್ಥೆಯಲ್ಲಿ ಇರಿಸಬೇಕು. ಉದಾತ್ತ ಮತ್ತು ಉದಾರ ಮನೋಭಾವ ನಮ್ಮದಾಗಬೇಕು ಎಂದರು.

    ಬದುಕಿನ ಅತ್ಯಂತ ಆಶಯ ಕಟ್ಟುವ ಕ್ರಿಯೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯೂ ಇದರಲ್ಲಿದೆ. ವಿಘಟನೆಗೊಳ್ಳುತ್ತಿರುವ ಮನಸ್ಸುಗಳನ್ನು ಒಗ್ಗೂಡಿಸಬೇಕು. ಮೌಲ್ಯಗಳನ್ನು ಕೆಡವಿ ಮಹಲುಗಳನ್ನು ಕಟ್ಟುವುದು ಸಲ್ಲದು ಎಂದರು.

    ಬಸವತತ್ವ ಪೀಠಾಧ್ಯಕ್ಷ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹುಟ್ಟಿಗಿಂತ ಬದುಕಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹುಟ್ಟಿದ ಮೇಲೆ ಸಾಧನೆ ಕಡೆಗೆ ತುಡಿಯುತ್ತ ಆಲೋಚನೆಗಳನ್ನು ಜಾಗೃತವಾಗಿಟ್ಟುಕೊಳ್ಳಬೇಕು. ಇರುವ ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕು. ನಮ್ಮ ಬದುಕಿಗೆ ಆತ್ಮಸಾಕ್ಷಿ, ಮನಸ್ಸಿನ ಶುದ್ಧತೆ ಅಗತ್ಯ ಎಂದರು.

    ಸಾಣೇಹಳ್ಳಿ ಮಠಾಧ್ಯಕ್ಷ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಸಿದ ಹೊಟ್ಟೆಗೆ ಅಧ್ಯಾತ್ಮ ರುಚಿಸದು. ಹುಟ್ಟಿಗಿಂತ ಬದುಕು ಶ್ರೇಷ್ಠ. ಮಕ್ಕಳಿಗೆ ಸಂಸ್ಕಾರ ನೀಡಲು ಮನೆಯ ಹಿರಿಯರು ಒಳ್ಳೆಯ ಆಚಾರ, ವಿಚಾರಗಳನ್ನು ಅನುಸರಿಸಬೇಕು. ದೊಡ್ಡವರ ನಡೆ, ನುಡಿಗಳು ಮಕ್ಕಳಿಗೆ ಅನಿಕರಣೀಯ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆಧುನಿಕತೆ ಭರಾಟೆಯಲ್ಲಿ ಚಿಕ್ಕ ಮಕ್ಕಳನ್ನು ಹಾಸ್ಟೆಲ್​ನಲ್ಲಿಟ್ಟು ಓದಿಸುತ್ತೇವೆ. ಮುಂದೆ ದೊಡ್ಡವರಾದ ಆ ಮಕ್ಕಳು ಹಿರಿಯರನ್ನು ವೃದ್ಧಾಶ್ರಮದಲ್ಲಿಟ್ಟು ಪಾಲಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts