More

    ಮಕ್ಕಳ ಕೇರ್ ಸೆಂಟರ್ ಶೀಘ್ರ ಆರಂಭ

    ಚಿಕ್ಕೋಡಿ: ಕರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ, ಯಕ್ಸಂಬಾದ ಆಶಾಜ್ಯೋತಿ ಬುದ್ಧಿಮಾಂದ್ಯ ಶಾಲೆಯನ್ನು ಮಕ್ಕಳ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡುವ ಚಿಂತನೆ ನಡೆದಿದೆ ಎಂದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

    ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಕಲಚೇತನರಿಗೆ ಗುರುವಾರ ಹಮ್ಮಿಕೊಂಡಿದ್ದ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗವಿಕಲರಿಗೆ ಲಸಿಕೆ ನೀಡಲು ಪ್ರಥಮ ಆದ್ಯತೆ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ವಿನಂತಿಸಿದ್ದರಿಂದ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸಿದ ವೈದ್ಯಕೀಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾದದ್ದು ಎಂದರು.

    ಯಕ್ಸಂಬಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಪಿ.ಬಾಗೇವಾಡಿ ಮಾತನಾಡಿ, ಪ್ರತಿಯೊಬ್ಬರೂ ಕರೊನಾ ವೈರಸ್ ಹರಡದಂತೆ ನೋಡಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಲಸಿಕೆ ಪಡೆದುಕೊಂಡರೆ ಕರೊನಾ ತಡೆಗಟ್ಟಬಹುದು ಎಂದರು. ಸಿಡಿಪಿಒ ದೀಪಾ ಕಾಳೆ, ಪಪಂ ಉಪಾಧ್ಯಕ್ಷೆ ಗೀತಾ ನಾಯಕ, ದಯಾನಂದ ಕಾಡಾಪುರೆ, ಲಕ್ಷ್ಮಣ ಕಬಾಡೆ, ನ್ಯಾಯವಾದಿ ರಾಮಚಂದ್ರ ಬಾಕಳೆ, ಪಪಂ ಸದಸ್ಯರಾದ ಮನೋಹರ ಕುಪ್ಪಾನಟ್ಟಿ, ಮತಾಬ್ ಮಕಾಂದರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲಕರ ಸೇರಿದಂತೆ ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts