More

    ಮಂಗಳವಾರವೂ ಸಿಗದ ಬಿತ್ತನೆ ಬೀಜ

    ಹುಬ್ಬಳ್ಳಿ: ಐದಾರು ದಿನದಿಂದ ಬಿತ್ತನೆ ಬೀಜ ಪೂರೈಕೆ ಮಾಡುತ್ತಿದ್ದರೂ ವಿಳಂಬ ಪ್ರಕ್ರಿಯೆಯಿಂದ ಹೆಚ್ಚಿನವರಿಗೆ ತಲುಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಮಂಗಳವಾರ ಇಲ್ಲಿಯ ಎಪಿಎಂಸಿ ರೈತ ಸಂಪರ್ಕ ಕೇಂದ್ರದ ಎದುರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಕೆಲ ರೈತ ಸಂಘಟನೆಯ ಮುಖಂಡರು ಜತೆಗೂಡಿ ಅವ್ಯವಸ್ಥೆ ವಿರುದ್ಧ ಸಿಡಿಮಿಡಿಗೊಂಡರು.

    ನಾಲ್ಕೈದು ದಿನದಿಂದ ಸರತಿಯಲ್ಲಿ ನಿಲ್ಲುತ್ತಿದ್ದರೂ ನಮಗೆ ಸೋಯಾಬೀನ್ ಬೀಜ ಸಿಗುತ್ತಿಲ್ಲ. ನಾಳೆ ಬಾ, ನಾಡಿದ್ದು ಬಾ… ಎಂದು ಸಾಗ ಹಾಕುತ್ತಿದ್ದಾರೆ. ಹೀಗಾದರೆ ನಾವು ಬಿತ್ತನೆ ಮಾಡುವುದು ಯಾವಾಗ? ಎಂದು ಅಸಮಾಧಾನ ಹೊರಹಾಕಿದರು. ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ವಿವೇಕ ಮೋರೆ ಮಾತನಾಡಿ, ಇದೀಗ ಉತ್ತಮ ಮಳೆಯಾಗಿದೆ. ಈಗಲೇ ಬೀಜ ಬಿತ್ತಿದರೆ ಒಳ್ಳೆಯ ಬೆಳೆ ಬರುತ್ತದೆ. ಸಕಾಲದಲ್ಲಿ ಬೀಜ ಕೊಡದ ಸರ್ಕಾರ ಹಾಗೂ ಕೃಷಿ ಇಲಾಖೆ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತದೆ ಎಂದು ದೂರಿದರು.

    ರಮೇಶ ಕೊರವಿ ಮಾತನಾಡಿ, ಕೃಷಿ ಇಲಾಖೆ ಸಾಕಷ್ಟು ಬೀಜ ದಾಸ್ತಾನು ಇದೆ ಎಂದು ಹೇಳುತ್ತದೆ. ಆದರೆ, ಆರ್​ಎಸ್​ಕೆ ಮುಂದೆ ರೈತರು ಮೂರು ದಿನದಿಂದ ಕಾಯ್ದರೂ ಬೀಜ ಸಿಗುತ್ತಿಲ್ಲ. ಇದರರ್ಥ ಏನು? ಎಂದು ಪ್ರಶ್ನಿಸಿದರು.

    ಸ್ಥಳಕ್ಕೆ ಆಗಮಿಸಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡ್ರ, ರೈತರ ಸಮಸ್ಯೆ ಆಲಿಸಿದರು. ಈಗಾಗಲೇ 600 ಕ್ವಿಂಟಾಲ್ ಸೋಯಾಬೀನ್ ಬೀಜ ವಿತರಣೆಯಾಗಿದೆ. ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶದಿಂದ ಮತ್ತಷ್ಟು ಸೋಯಾಬೀನ್ ಬೀಜ ಬರಲಿದೆ. ಮೇ 31ರಂದೇ ಅಲ್ಲಿಂದ ಲಾರಿ ಹೊರಟಿದೆ. ಮಂಗಳವಾರ ಸಂಜೆ ಇಲ್ಲವೆ ಬುಧವಾರ ಬೆಳಗ್ಗೆ ಬರುತ್ತದೆ. ಎಲ್ಲ ರೈತರಿಗೆ ಬಿತ್ತನೆ ಬೀಜ ಸಿಗಲಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ಮುಂಗಾರು ಪೂರ್ವ ಮಳೆಗೆ ರೈತರು ಹೊಲ ಹದ ಮಾಡಿಕೊಂಡಿದ್ದಾರೆ. ಜೂನ್ 6ರ ವೇಳೆಗೆ ಮುಂಗಾರು ಪ್ರವೇಶವಾಗಲಿದ್ದು, ಅಲ್ಲಿಯವರೆಗೆ ಎಲ್ಲ ರೈತರಿಗೆ ಬಿತ್ತನೆ ಬೀಜ ತಲುಪಲಿದೆ. ಆರ್​ಎಸ್​ಕೆಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಲು ಕೂಡಲೆ ಇನ್ನೊಂದು ಕಂಪ್ಯೂಟರ್, ಪ್ರಿಂಟರ್ ನೀಡಲಾಗಿದ್ದು, ತಾಂತ್ರಿಕ ಸಮಸ್ಯೆ ಕೂಡ ಸರಿಪಡಿಸಲಾಗಿದೆ ಎಂದು ಅನಗೌಡ್ರ ಹೇಳಿದರು.

    ಆದರೆ, ಮಂಗಳವಾರ ಬೆಳಗ್ಗೆಯಿಂದ ಆರ್​ಎಸ್​ಕೆ ಎದುರು ಕಾಯುತ್ತ ನಿಂತವರಿಗೆ ನಿರಾಸೆಯಾಯಿತು. ನೂರಾರು ರೈತರು ಜಮಾಯಿಸಿದ್ದರಿಂದ ನಿರ್ವಹಣೆ ಮಾಡುವುದು ಅಧಿಕಾರಿಗಳ ಸಮಸ್ಯೆಯಾಗಿತ್ತು. ಬೀಜ ಸ್ಟಾಕ್ ಇಲ್ಲದ್ದನ್ನು ಕೇಳಿ ರೈತರು ವಿಧಿ ಇಲ್ಲದೇ ವಾಪಸ್ ಹೋದರು.

    ಪುಟ್ಟಸ್ವಾಮಿ, ಮಂಜುನಾಥ, ಗುರು ಬೋರಣ್ಣವರ, ನಾಗಣ್ಣ ಬೆಳ್ಳಿಗಟ್ಟಿ ಇತರರು ಉಪಸ್ಥಿತರಿದ್ದರು.

    ದಾಸ್ತಾನು ಸಂಗ್ರಹಕ್ಕೆ ಅಧಿಕಾರಿಗಳಿಗೆ ಸೂಚನೆ: ರೈತರಿಗೆ ಸಮರ್ಪಕ ಮತ್ತು ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು ಎಂದು ಶಾಸಕ ಅಮೃತ ದೇಸಾಯಿ ಅವರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಧಾರವಾಡ ನಗರದ ಪ್ರವಾಸಿ ಮಂದಿರದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಗುಣಮಟ್ಟದ ಬಿತ್ತನೆ ಬೀಜ ಪಡೆಯಲು ಯಾವುದೇ ತೊಂದರೆ ಅನುಭವಿಸದಂತೆ ಎಚ್ಚರ ವಹಿಸಬೇಕು ಎಂದರು.

    ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಕೊರತೆ ಆಗದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ವಿತರಣಾ ಉಪ ಕೇಂದ್ರಗಳನ್ನು ಆರಂಭಿಸುವಂತೆ ಸೂಚಿಸಿದರು.

    ಶಾಸಕರ ಮನೆ ಮುಂದೆ ರೈತರ ಪ್ರತಿಭಟನೆ: ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ರೈತರು ಮಾತ್ರ ಬಿತ್ತನೆ ಬೀಜ ಖರೀದಿಗಾಗಿ ದಿನಗಟ್ಟಲೇ ರೈತ ಸಂಪರ್ಕ ಕೇಂದ್ರದ ಎದುರು ಕಾಯುವುದು ಮಾತ್ರ ತಪ್ಪಿಲ್ಲ. ಧಾರವಾಡದ ಹೊಸ್ ಬಸ್ ನಿಲ್ದಾಣ ಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆ ವತಿಯಿಂದ ದಿನಕ್ಕೆ 200 ಜನರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ. ಅದೂ ಒಂದು ದಿನ ಮುಂಚಿತವಾಗಿ ಬಂದು ಚೀಟಿ ಪಡೆದವರಿಗೆ ಮಾತ್ರ. ಚೀಟಿ ಪಡೆಯಲು ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ನೂರಾರು ರೈತರು ಕೇಂದ್ರದ ಎದುರು ಜಮಾಯಿಸಿದ್ದರು. ಕೆಲ ರೈತರಿಗೆ ಚೀಟಿ ಸಿಗದ ಕಾರಣಕ್ಕೆ ರೊಚ್ಚಿಗೆದ್ದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ, ಮಲಪ್ರಭಾನಗರದಲ್ಲಿನ ಶಾಸಕ ಅಮೃತ ದೇಸಾಯಿ ಅವರ ನಿವಾಸಕ್ಕೆ ತೆರಳಿ ದಿಢೀರ್ ಪ್ರತಿಭಟನೆ ನಡೆಸಲು ಮುಂದಾದರು. ಎಲ್ಲ ರೈತರಿಗೂ ಬೀಜ ವಿತರಣೆ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಶಾಸಕರು ಮನೆಯಲ್ಲಿರದ ಮಾಹಿತಿ ಅರಿತ ರೈತರು, ಶಾಸಕರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದಿದ್ದರು. ನಂತರ ಅವರ ಆಪ್ತರು ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡಿದರು. ಬಳಿಕ ರೈತರೊಂದಿಗೆ ಮಾತನಾಡಿದ ಶಾಸಕರು ತ್ವರಿತವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ರೈತರು ವಾಪಸ್ ಆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts