More

    ಮಂಗಳವಾರದಿಂದ ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬಾ ಜಾತ್ರೆ; ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ವೈಭವ

    ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ ಫೆ.7ರಂದು ಆರಂಭವಾಗಲಿದ್ದು 15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    7ರ ಬೆಳಗ್ಗೆ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ ನಡೆಯಲಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರಿಗೆ ದೃಷ್ಟಿ ಇಡುವುದು, ಮಾಂಗಲ್ಯಧಾರಣೆ, ನಂತರ ಅಮ್ಮನವರ ದರ್ಶನ ಇರುತ್ತದೆ ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸೋಮವಾರ ರಾತ್ರಿ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ಮುಗಿದ ಬಳಿಕ 9 ಮನೆಗಳಿಂದ ಘಟೇವು ತರಲಾಗುತ್ತದೆ, ಅದನ್ನು ಜಾತ್ರೆಯು ಮುಗಿಯುವವರೆಗೂ ದೇವಿಯ ಮುಂದಿಡಲಾಗುತ್ತದೆ. ಮಂಗಳವಾರ ರಾತ್ರಿ 10ಕ್ಕೆ ಪೋತರಾಜನಿಂದ ಚಾಟಿಸೇವೆ ಇರುತ್ತದೆ. ನಂತರ ಹೆಣ್ಣು ಒಪ್ಪಿಸುವ ಶಾಸ್ತ್ರ ನಡೆಯಲಿದ್ದು ರಾತ್ರಿ ದೇವಿಯ ದಂಡಿನ ಮೆರವಣಿಗೆ ವಿವಿಧ ಕಲಾತಂಡಗಳ ಪಾಲ್ಗೊಳ್ಳುವಿಕೆ ಮೂಲಕ ನಡೆಯಲಿದೆ. 8ರ ಬೆಳಗ್ಗೆ ಮಾರಿಕಾಂಬಾ ದೇವಿಯ ಗಂಡನ ಮನೆಯಲ್ಲಿ ಅಮ್ಮನವರ ಪ್ರತಿಷ್ಠಾಪನೆ ನೆರವೇರಲಿದ್ದು ಎಂಟು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುತ್ತದೆ ಎಂದರು.
    8ರಂದು ಸಂಜೆ 7ಕ್ಕೆ ಗಾಂಧಿ ಮೈದಾನದಲ್ಲಿರುವ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಹರತಾಳು ಹಾಲಪ್ಪ , ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಟಿ.ಎಸ್.ನಾಗಾಭರಣ ಪಾಲ್ಗೊಳ್ಳಲಿದ್ದಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 5ರಿಂದ ಮಾರಿಕಾಂಬಾ ವೇದಿಕೆಯಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ವಿವಿಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಫೆ. 15ರಂದು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ ಎಂದರು.
    7ರಂದು ಸಂಜೆ 5ಕ್ಕೆ ನೆಹರು ಮೈದಾನದಲ್ಲಿ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ. ಫೆ. 10ರಂದು ಮಧ್ಯಾಹ್ನ 3ಕ್ಕೆ ಸಂತ ಜೋಸೆಫರ ಶಾಲೆ ಎದುರಿನ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ಶಾಸಕ ಹಾಲಪ್ಪ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಸಂಗಮೇಶ್ವರ್, ಕೆ.ಬಿ.ಅಶೋಕ್ ನಾಯ್ಕ, ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎನ್.ಗುರುಮೂರ್ತಿ ಇತರರು ಹಾಜರಿರುವರು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts