More

    ಭ್ರೂಣ ಹತ್ಯೆ ನಿಲ್ಲಿಸದಿದ್ದರೆ ಕಠಿಣ ಕ್ರಮ

    ಶಿವಮೊಗ್ಗ: ಭಾರತದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದು ತಾಯಿ ರೂಪದಲ್ಲಿ ಕಾಣುತ್ತಾರೆ. ಗಂಡಾಗಲಿ ಹೆಣ್ಣಾಗಲಿ ಮಕ್ಕಳನ್ನು ಮಕ್ಕಳಾಗಿಯೇ ನೋಡಬೇಕು. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್​ಕೆಜಿಎಂಎಂ ಮಹಾಸ್ವಾಮೀಜಿ ವೈದ್ಯರಿಗೆ ಎಚ್ಚರಿಕೆ ನೀಡಿದರು.

    ಡಿಎಚ್​ಒ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಿಎಚ್​ಒ ಇಲಾಖೆ ಆಶ್ರಯದಲ್ಲಿ ಪಿಸಿಪಿಎನ್​ಡಿಟಿ (ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ) ಕಾಯ್ದೆ-1994 ಕುರಿತ ಜಿಲ್ಲಾಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಇತಿಹಾಸದ ಪ್ರತಿಪುಟದಲ್ಲಿಯೂ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಗಂಡು ದೈಹಿಕವಾಗಿ ಬಲಿಷ್ಠನಾಗಿದ್ದರೆ, ಹೆಣ್ಣು ಶೈಕ್ಷಣಿಕ ಸೇರಿ ಅನೇಕ ಮಟ್ಟದಲ್ಲಿ ಪುರುಷರಿಗೆ ಸರಿಸಮಾನಾಗಿದ್ದಾಳೆ. ಆಟೋ ಡ್ರೈವರ್, ಕ್ರಿಕೆಟ್, ಬ್ಯಾಡ್ಮಿಂಟನ್, ಹೋಟೆಲ್, ವೈದ್ಯಕೀಯ, ಪೈಲೆಟ್, ಸೇನೆ ಮುಂತಾದ ವಿಭಾಗಳಲ್ಲಿ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿದ್ದಾರೆ. ಆದರೆ ಬ್ರಿಟಿಷರ ಕಾಲದಿಂದಲೂ ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹೆಣ್ಣು ಭ್ರೂಣ ಹತ್ಯೆಗೆ ಸಹಾಯಕರಾಗುವ ವೈದ್ಯರ ವಿರುದ್ಧ ಕಾನೂನಿನ ನಿಯಮ ಪ್ರಕಾರ ಮೂರು ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುವುದು. ಮತ್ತೊಮ್ಮೆ ಹೆಣ್ಣು ಭ್ರೂಣ ಹತ್ಯೆ ಅಪರಾಧದಲ್ಲಿ ಸಿಲುಕಿದ ವೈದ್ಯರಿಗೆ 5 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದರು.

    ಪಿಸಿಪಿಎನ್​ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಮಲ್ಲೇಶ್ ಹುಲ್ಲಮನಿ ಮಾತನಾಡಿ, ಜಿಲ್ಲೆಯಲ್ಲಿ 94 ಸ್ಕ್ಯಾನಿಂಗ್ ಸೆಂಟರ್​ಗಳಿದ್ದು ಲಿಂಗ ಪತ್ತೆ ಆಗುವುದು ಬೇಡ. ಕಾರ್ಯಕ್ರಮಗಳು ಸರ್ಕಾರಕ್ಕೆ ವರದಿ ಸಲ್ಲಿಕೆಗೆ ಸೀಮಿತವಾಗುತ್ತಿವೆ. ಅದು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿ ಆಗಲಿವೆ ಎಂದು ಹೇಳಿದರು.

    ರಾಜಕಾರಣಿಗಳು, ಮಠಾಧೀಶರು, ಆಶಾ ಕಾರ್ಯಕರ್ತೆರು ಸೇರಿ ಸಮಾಜದ ವಿವಿಧ ಸ್ತರಗಳ ಸಮಿತಿಯೊಂದನ್ನು ರಚಿಸಬೇಕಿದೆ. ಲಿಂಗಾನುಪಾತ ಇನ್ನೂ ಕಡಿಮೆ ಇದೆ ಎಂದಾದರೆ ಎಲ್ಲೋ ಒಂದು ಕಡೆ ಯೋಜನೆ ಅನುಷ್ಠಾನದಲ್ಲಿ ಎಡವುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದರು.

    ಐಎಂಎ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾಂವ್ ಮಾತನಾಡಿ, ರಾಜ್ಯದಲ್ಲಿ ಲಿಂಗಾನುಪಾತ ಹೆಚ್ಚಾಗುತ್ತಿದೆ. ಆದರೆ ಶಿವಮೊಗ್ಗದಲ್ಲಿ ಈ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡಿರುವುದು ಸಮಾಧಾನ ತರಿಸಿದೆ. ಇಂತಹ ಕಾರ್ಯಾಗಾರಗಳು ವೈದ್ಯಕೀಯ ಸಿಬ್ಬಂದಿಗೆ ಸೀಮಿತಗೊಳ್ಳದೆ ಸಾಮಾಜಿಕ ಅನಿಷ್ಠ ಪದ್ಧತಿ ನಿಮೂಲನೆಗೆ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಅಭಿಯಾನಗಳನ್ನು ನಡೆಸಬಹುದು ಎಂದು ಸಲಹೆ ನೀಡಿದರು.

    ವೈದ್ಯರಿಗೆ ಕಾನೂನಿನ ಅರಿವು ಶೂನ್ಯ: ಭ್ರೂಣ ಪರಿಶೀಲನೆ, ಅದಕ್ಕೆ ಸಂಬಂಧಿಸಿದ ಯಂತ್ರಗಳ ಕಾರ್ಯನಿರ್ವಹಣೆ ಸೇರಿ ಕಾನೂನಿನ ಬಗ್ಗೆ ವೈದ್ಯರಿಗೆ ಸಾಮಾನ್ಯ ಜ್ಞಾನ ಶೂನ್ಯವಾಗಿದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಸಿಪಿಎನ್​ಡಿಎಲ್ ಅತ್ಯುತ್ತಮ, ಶಕ್ತಿಶಾಲಿ ಕಾಯ್ದೆಯಾಗಿದೆ. ಆದರೆ ಆ ಕಾಯ್ದೆ ಬಗ್ಗೆ ಸಂಬಂಧಿಸಿದ ವೈದ್ಯರು ತಿಳಿದುಕೊಳ್ಳುತ್ತಿಲ್ಲ. ಇದು ಲಿಂಗಾನುಪಾತ ಕುಸಿತಕ್ಕೆ ಕಾರಣವಾಗುತ್ತದೆ. ಯಂತ್ರಗಳನ್ನು ಯಾವ ಸ್ಥಳದಲ್ಲಿ ಅಳವಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್​ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಜನರಿಗೆ ಸ್ಪಷ್ಟ ಮಾಹಿತಿ ಒದಗಿಸಬೇಕಿದೆ. ಸಣ್ಣದೊಂದು ತಪ್ಪು ತಮ್ಮ ಗೌರವಕ್ಕೆ ಚ್ಯುತಿ ತರುತ್ತದೆ ಎಂಬುದನ್ನು ವೈದ್ಯರು ಅರ್ಥೈಸಿಕೊಳ್ಳಬೇಕಿದೆ ಎಂದರು. ಹೆಣ್ಣು ಭ್ರೂಣ ಹತ್ಯೆ ಮಾಡುವುದು ತಪ್ಪು ಎಂದು ಗೊತ್ತಿದರೂ ಹೆಣ್ಣು ಹೆತ್ತರೆ ಮನೆಗೆ ಅನಿಷ್ಟ, ಹೆಣ್ಣು ಹೆತ್ತರೆ ವರದಕ್ಷಿಣೆ ನೀಡಬೇಕೆಂಬ ಮೂಢನಂಬಿಕೆಯಲ್ಲಿ ಪಾಲಕರು ಮುಳುಗಿದ್ದಾರೆ. ಮೊದಲು ತಾವು ಅದರಿಂದ ಹೊರಬರಬೇಕು ಎಂದರು.

    ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್.ಸರಸ್ವತಿ, ವೈದ್ಯಕೀಯ ಉಪನಿರ್ದೇಶಕ ಡಾ. ವಿವೇಕ್ ದೊರೈ, ಡಿಎಚ್​ಒ ಡಾ. ರಾಜೇಶ್ ಸುರಗಿಹಳ್ಳಿ, ಡಾ. ರಾಮಚಂದ್ರ ಬಯಾರಿ, ಡಾ. ಇಂದಿರಾ ಕಬಾಡೆ, ಡಾ. ವೀಣಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts