More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ರೈತಸಂಘ, ಹಸಿರುಸೇನೆ ವಿರೋಧ

    ಚಿಕ್ಕಬಳ್ಳಾಪುರ : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ರೈತಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸೋಮವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.

    ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಎಪಿಎಂಸಿ ಕಾಯ್ದೆ, ಬೆಸ್ಕಾಂ ಖಾಸಗೀಕರಣ, ಬಿತ್ತನೆ ಬೀಜ ಮಾರಾಟ ಕಾಯ್ದೆ ತಿದ್ದುಪಡಿ ಸೇರಿ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ಸರಿಯಲ್ಲ, ತಿದ್ದುಪಡಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿರುವುದು ಖಂಡನೀಯ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

    ಹೊಸ ತಿದ್ದುಪಡಿಯಿಂದ ಉಳುವವನೇ ಭೂಮಿ ಒಡೆಯ ಎಂಬ ಪರಿಕಲ್ಪನೆಗೆ ತಿಲಾಂಜಲಿ ಇಟ್ಟಂತಾಗುತ್ತಿದೆ. ಕೃಷಿಯಲ್ಲಿ ನಷ್ಟದಿಂದ ರೈತರ ಮಕ್ಕಳು, ಕೂಲಿಕಾರ್ಮಿಕರು ನಗರ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದರ ನಡುವೆ ರೈತರು ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರಿಕೊಂಡು ಬೀದಿಗೆ ಬೀಳುವ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಕಿಡಿಕಾರಿದರು.

    ಸಿಎಂ ಯಡಿಯೂರಪ್ಪ ರೈತಪರ ಹೋರಾಟದ ಮೂಲಕ ಬೆಳೆದ ನಾಯಕರು, ಕೃಷಿಕರ ಪರವಾಗಿ ಬದ್ಧತೆ ಹೊಂದಿದ್ದಾರೆ. ಆದರೆ, ಕಾಯ್ದೆ ತಿದ್ದುಪಡಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೆ ತಿದ್ದುಪಡಿ ತಂದಿರುವುದು ರೈತಕುಲದ ಸರ್ವನಾಶದ ಕ್ರಮವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಕಿಡಿಕಾರಿದರು.
    ಸರ್ಕಾರ ಕಾಯ್ದೆಗಳ ಜಾರಿಯಿಂದ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ರೈತರ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಜಿಲ್ಲಾ ಗೌರವಾಧ್ಯಕ್ಷ ಎ.ವಿ.ವೆಂಕಟರಾಮಯ್ಯ, ಕಾರ್ಯದರ್ಶಿ ರೆಡ್ಡಪ್ಪ, ಸಂಚಾಲಕರಾದ ರಾಮಾಂಜಿನಪ್ಪ, ಸತ್ಯಪ್ಪ, ತಾಲೂಕು ಅಧ್ಯಕ್ಷರಾದ ಕೆ.ನಾರಾಯಣಸ್ವಾಮಿ, ಎಸ್.ಎಂ.ರವಿಪ್ರಕಾಶ್, ವೆಂಕಟರಮಣಪ್ಪ, ಟಿ.ರಘುನಾರೆಡ್ಡಿ, ನವೀನ್ ಕುಮಾರ್, ಉಪಾಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿಗಳಾದ ವರದರಾಜು, ಶಶಿಧರ, ವೆಂಕಟೇಶ್, ಎ.ಪ್ರಭಕರರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts