More

    ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಪ್ರತಿ ಸುಟ್ಟು ಆಕ್ರೋಶ

    ಚಿಕ್ಕಬಳ್ಳಾಪುರ: ನಮ್ಮೂರ ಭೂಮಿ ನಮಗಿರಿರಲಿ, ಅನ್ಯರಿಗಲ್ಲ ಎಂಬ ಘೋಷಣೆಯೊಂದಿಗೆ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಶನಿವಾರ ರೈತ, ದಲಿತ, ಕನ್ನಡ, ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆಯ ಕರಪತ್ರಗಳನ್ನು ಸುಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ರೈತರ ಆತ್ಮಹತ್ಯೆಗಳಿಗೆ ಕಡಿವಾಣ ಮತ್ತು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ವಿಫಲವಾಗಿರುವ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸದೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಸಿ ತಂದು, ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕೃಷಿಕರನ್ನು ಬೀದಿಪಾಲು ಮಾಡಿ ಕಾರ್ಪೋರೇಟ್ ಕಂಪನಿ, ಉದ್ಯಮಿಗಳ ಹಿತ ಕಾಪಾಡುವ ದುರುದ್ದೇಶ ಎಂದು ಜಿಲ್ಲಾ ರೈತಸಂಘದ ಜಿಲ್ಲಾಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಆರೋಪಿಸಿದರು.

    ದೇಶದ ಬೆನ್ನೆಲುಬಾದ ಕೃಷಿಕರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಪರಿಶ್ರಮದಿಂದ ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಸಿಗುತ್ತಿಲ್ಲ. ಹೀಗಿರುವಾಗ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ಮೂಲಕ ಕೃಷಿಭೂಮಿಯನ್ನು ಬಂಡವಾಳಶಾಹಿಗಳು ಕಿತ್ತುಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಕಿಡಿಕಾರಿದರು.

    ಸರ್ಕಾರವು ರೈತರ ಹಿತದೃಷ್ಟಿಯಿಂದ ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆಯಬೇಕು. ಕೃಷಿ ಅಭಿವೃದ್ಧಿಗೆ ಪೂರಕವಾಗಿ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎಸ್.ಲಕ್ಷ್ಮಯ್ಯ, ನಾರಾಯಣಸ್ವಾಮಿ, ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ವಿ.ರವಿಕುಮಾರ್, ಸಹ ಕಾರ್ಯದರ್ಶಿ ನವೀನ್, ವಾಹನ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts