More

    ಭೂಮಿ ಕೇಂದ್ರಕ್ಕೆ ಅರ್ಜಿದಾರರ ಅಲೆದಾಟ

    ರಾಣೆಬೆನ್ನೂರ: ನಗರದ ಮಿನಿ ವಿಧಾನಸೌಧದ ಭೂಮಿ ಕೇಂದ್ರಕ್ಕೆ ಸಲ್ಲಿಸಿದ ಅರ್ಜಿಗಳು ಕಳೆದ ಮೂರ್ನಾಲ್ಕು ತಿಂಗಳಿಂದ ವಿಲೇವಾರಿಯಾಗದ ಕಾರಣ ರೈತರು ಹಾಗೂ ಇತರ ಅರ್ಜಿದಾರರು ನಿತ್ಯವೂ ಭೂಮಿ ಕೇಂದ್ರಕ್ಕೆ ಅಲೆದಾಡಿ ಸುಸ್ತಾಗಿದ್ದಾರೆ.

    ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ಇತರ ನೂರಾರು ಜನ ಪಹಣಿ ತಿದ್ದುಪಡಿ, ಪೋಡಿ, ಬ್ಯಾಂಕ್ ಬೋಜಾ, ಪೋತಿ ಖಾತೆ ಬದಲಾವಣೆ, ಪಾಲವಿ ಭಾಗ, ಖಾತೆ ಬದಲಾವಣೆ, ತಹಸೀಲ್ದಾರ್ ಹಾಗೂ ಮೇಲಧಿಕಾರಿಗಳ ಆದೇಶ, ಸರ್ವೆ ಇಲಾಖೆಯಿಂದ ಅನುಮೋದನೆ ಪಡೆದ ಫಾಮ್ರ್ ನಂ. 10 ಪಡೆಯುವುದು ಸೇರಿ ವಿವಿಧ ಕಾರ್ಯಗಳಿಗಾಗಿ ದಿನವೊಂದಕ್ಕೆ 150ರಿಂದ 200 ಅರ್ಜಿಗಳು ಬರುತ್ತವೆ.

    ಭೂಮಿ ಕೇಂದ್ರದಲ್ಲಿ ಐದು ಜನ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಅರ್ಜಿಗಳು ವಿಲೇವಾರಿಯಾಗದೆ ಹಾಗೆಯೇ ಬಿದ್ದಿವೆ. ದಿನಕ್ಕೆ 60 ಅರ್ಜಿ ಇತ್ಯರ್ಥ ಮಾಡಿದರೆ ಬಹಳವಾಯಿತು ಎನ್ನುವ ಹಂತಕ್ಕೆ ಬಂದಿದೆ. ಸಿಬ್ಬಂದಿ ಸಹ ಇಂದು-ನಾಳೆ ಬನ್ನಿ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಹೊರತು ಸಲ್ಲಿಸಿದ ಅರ್ಜಿಗಳಿಗೆ ಮುಕ್ತಿ ನೀಡುತ್ತಿಲ್ಲ ಎಂಬುದು ಅರ್ಜಿದಾರರ ಆರೋಪವಾಗಿದೆ.

    ವಿಳಂಬವೇಕೆ?: ಭೂಮಿ ಕೇಂದ್ರದಲ್ಲಿ ಈ ಹಿಂದೆ ‘ಭೂಮಿ 6.0’ ಸಾಫ್ಟವೇರ್​ನಲ್ಲಿ ಅರ್ಜಿ ಅಪ್​ಲೋಡ್ ಮಾಡಲಾಗುತ್ತಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಸರ್ಕಾರ 6.0 ಇದ್ದ ಸಾಫ್ಟವೇರ್ ನ್ನು ‘ಭೂಮಿ 7.0’ಗೆ ಅಪ್​ಡೇಟ್ ಮಾಡಿ, ಹೊಸ ತಂತ್ರಾಂಶ ಅಳವಡಿಸಿದೆ. ಆದರೆ, ಅಪ್​ಡೇಟ್ ಸಾಫ್ಟವೇರ್ ಬಗ್ಗೆ ಭೂಮಿ ಕೇಂದ್ರದ ಸಿಬ್ಬಂದಿಗೆ ಯಾವುದೇ ತರಬೇತಿ ನೀಡಿಲ್ಲ.

    ಅಲ್ಲದೆ, ಸಾಫ್ಟವೇರ್ ಅಪ್​ಡೇಟ್ ಮಾಡುವಾಗ ಏನಾದರೂ ಸಮಸ್ಯೆ ಕಂಡುಬಂದರೆ ಈ ಬಗ್ಗೆ ತಿಳಿದುಕೊಳ್ಳಲು ಬೆಳಗಾವಿ ವಿಭಾಗ ಮಟ್ಟಕ್ಕೆ ಕೇವಲ ಒಬ್ಬ ಸಿಬ್ಬಂದಿಯನ್ನು ಇಟ್ಟಿದೆ. ಅವರಿಗೆ ಕರೆ ಮಾಡಿದರೆ, ಅವರು ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ, ಅರ್ಜಿ ಅಪ್​ಲೋಡ್ ಮಾಡುವಾಗ ಏನಾದರೂ ಕೊಂಚ ಬದಲಾವಣೆ ಮಾಡಿದರೆ, ಆ ಅರ್ಜಿದಾರರ ಸಂಪೂರ್ಣ ಫೈಲ್ ಏರರ್ ಎಂದು ತೋರಿಸುತ್ತಿದೆ.

    ಎರ್ರರ್ ಎಂದು ಬಂದಿರುವ ದೂರುಗಳನ್ನು ಸರಿಪಡಿಸಲು ಮೇಲ್ಮಟ್ಟದಲ್ಲಿ ಮೂರ್ನಾಲ್ಕು ತಿಂಗಳು ಸಮಯ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಸಾಫ್ಟವೇರ್​ನಲ್ಲಿ ಕೆಲಸ ಮಾಡಲು ತೀವ್ರ ತೊಂದರೆ ಎದುರಾಗುತ್ತಿದೆ ಎಂದು ಭೂಮಿ ಕೇಂದ್ರದ ಸಿಬ್ಬಂದಿ ನಮ್ಮ ಎದುರು ಸಮಸ್ಯೆ ಹೇಳಿಕೊಳ್ಳುತ್ತಾರೆ ಎಂದು ಅರ್ಜಿದಾರ ಮಂಜುನಾಥ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.

    ಪಹಣಿ ತಿದ್ದುಪಡಿಗೆ ಕಳೆದ ಜೂನ್ ತಿಂಗಳಲ್ಲಿಯೇ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈವರೆಗೂ ತಿದ್ದುಪಡಿ ಆಗಿಲ್ಲ. ಸಿಬ್ಬಂದಿ ಕೇಳಿದರೆ, ಸಾಫ್ಟವೇರ್ ಅಪಡೇಟ್ ಮಾಡಿದ್ದಾರೆ. ಅದರ ಬಗ್ಗೆ ನಮಗೆ ತರಬೇತಿ ಕೊಟ್ಟಿಲ್ಲ. ಆದ್ದರಿಂದ ಬೇಗ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಭೂಮಿ ಕಚೇರಿಗೆ ಅಲೆದಾಡಿ ಸುಸ್ತಾಗಿದೆ.

    | ಮಂಜುನಾಥ, ಚಳಗೇರಿ ಗ್ರಾಮದ ರೈತ

    ಭೂಮಿ ಕೇಂದ್ರಕ್ಕೆ ಬರುವ ಅರ್ಜಿಗಳನ್ನು ತಿಂಗಳೊಳಗೆ ವಿಲೇವಾರಿ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ರಾಣೆಬೆನ್ನೂರ ಕಚೇರಿಯಲ್ಲಿ ಮಾತ್ರ ಸಾಫ್ಟವೇರ್ ಅನ್ನು 7.0ಗೆ ಅಪ್​ಡೇಟ್ ಮಾಡಲಾಗಿದೆ. ಅಲ್ಲದೆ, ಮೂರು ದಿನದ ಹಿಂದೆ ವಿದ್ಯುತ್ ಶಾರ್ಟ್​ಸರ್ಕ್ಯೂಟ್ ಆಗಿ ಕಂಪ್ಯೂಟರ್​ಗಳು ಬಂದ್ ಆಗಿದ್ದವು. ಹೀಗಾಗಿ, ಕೊಂಚ ವಿಳಂಬವಾಗಿದೆ. ಈಗ ಕಂಪ್ಯೂಟರ್ ದುರಸ್ತಿ ಮಾಡಲಾಗುತ್ತಿದೆ. ಹೊಸ ಸಾಫ್ಟವೇರ್ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕಿದೆ. ನಂತರದಲ್ಲಿ ಎಲ್ಲ ಸರಿಯಾಗಲಿದೆ.

    | ಬಸನಗೌಡ ಕೋಟೂರು, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts