More

    ಭೂಮಿಯಲ್ಲೇ ಕೊಳೆಯುತ್ತಿದೆ ಶೇಂಗಾ

    ಡಂಬಳ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳಗೊಂಡು ಮುಂಗಾರು ಬೆಳೆಗಳಾದ ಸೂರ್ಯಕಾಂತಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಇದೀಗ ಶೇಂಗಾ ಬೆಳೆಗೆ ಹಳದಿ ರೋಗ ಬಾಧಿಸಿದ್ದು, ಎಲೆಗಳು ಉದುರಿ, ಕಾಯಿ ಭೂಮಿಯಲ್ಲೇ ಕೊಳೆಯುತ್ತಿದೆ.

    ಡಂಬಳ ವ್ಯಾಪ್ತಿಯ ಡೋಣಿ, ಡೋಣಿ ತಾಂಡಾ, ಅತ್ತಿಕಟ್ಟಿ, ದಿಂಡೂರು, ಹಿರೇವಡ್ಡಟ್ಟಿ, ಹಾರೋಗೇರಿ, ಮುರಡಿ, ಚಿಕ್ಕವಡ್ಡಟ್ಟಿ ಸೇರಿ 2900 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ನಿರಂತರ ಮಳೆ ಮತ್ತು ವಾತಾವರಣ ಬದಲಾವಣೆಯಿಂದಾಗಿ ಶೇಂಗಾ ಬಳ್ಳಿ ಕೊಳೆಯುತ್ತಿದೆ. ಇದರಿಂದ ದನ-ಕರುಗಳಿಗೆ ಮೇವಿನ ಅಭಾವ ತಲೆದೋರುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರಿದರೆ ಭೂಮಿಯಲ್ಲಿ ಉಳಿದಿರುವ ಅಷ್ಟಿಷ್ಟು ಬೆಳೆಯೂ ಕೈಗೆ ಬರದಂತಾಗುತ್ತದೆ.

    ಒಂದು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಲು ಬೀಜ, ಗೊಬ್ಬರ, ಉಳುಮೆ, ಕೂಲಿಕಾರರ ಪಗಾರ ಸೇರಿ 20 ರಿಂದ 25 ಸಾವಿರ ರೂ. ಗಿಂತ ಹೆಚ್ಚು ಖರ್ಚಾಗಿದೆ. ಬಿತ್ತನೆಗೆ ಮಾಡಿದ ಖರ್ಚು ಮರಳಿಬಾರದ ಸ್ಥಿತಿಯಲ್ಲಿ ರೈತರಿದ್ದಾರೆ.

    ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆ ನಾಶವಾಗಿದೆ. ಶೇಂಗಾ ಬೆಳೆಗೆ ಹಳದಿ ರೋಗ ತಗುಲಿದ್ದು, ಎಲೆಗಳೆಲ್ಲ ಉದುರಿ ಕಾಯಿಗಳೆಲ್ಲ ಭೂಮಿಯಲ್ಲಿಯೇ ಕೊಳೆಯಲಾರಂಭಿಸಿವೆ. ಮಳೆ ಹೀಗೆ ಮುಂದುವರಿದರೆ ಒಂದೂ ಕಾಯಿಯೂ ರೈತರ ಕೈ ಸೇರುವುದಿಲ್ಲ. ಜಾನುವಾರುಗಳಿಗೆ ಮೇವಿನ ಅಭಾವವೂ ಸೃಷ್ಟಿಯಾಗಲಿವೆ. ಹೀಗಾಗಿ ಸರ್ಕಾರ ಈ ಕೂಡಲೆ, ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

    | ಸಿದ್ದಪ್ಪ ಹಾದಿಮನಿ, ಗವಿಸಿದ್ದಪ್ಪ ಸಂಜೀವಣ್ಣವರ ಡಂಬಳ ಗ್ರಾಮದ ರೈತರು

    ನಿರಂತರ ಮಳೆಯಿಂದಾಗಿ ತೇವಾಂಶ ಹೆಚ್ಚಿ ಶೇಂಗಾ ಬೆಳೆಗೆ ಹಳದಿರೋಗ ಬಾಧಿಸಿದೆ. ಹೀಗಾಗಿ ಕಾಯಿಗಳು ಭೂಮಿಯಲ್ಲೇ ಕೊಳೆಯುತ್ತಿವೆ. ರೈತರಿಗೆ ಕೊಳೆ ರೋಗದ ಬಗ್ಗೆ ಸಲಹೆ ನೀಡಲಾಗುತ್ತಿದೆ.

    | ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts